ಮಹಾರಾಜ ಟ್ರೋಫಿ 2023: ಶಿವಮೊಗ್ಗ ಲಯನ್ಸ್‌ಗೆ ಸತತ 2ನೇ ಜಯ; ಮಯಾಂಕ್ ಬಳಗಕ್ಕೆ ಸತತ 2ನೇ ಸೋಲು
ಮಂಗಳವಾರ, ಆಗಸ್ಟ್ 15ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ಆರನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡದ ವಿರುದ್ಧ ಶಿವಮೊಗ್ಗ ಲಯನ್ಸ್ ತಂಡವು 36 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಮಯಾಂಕ್ ಅಗರ್ವಾಲ್ ನಾಯಕತ್ವದ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಪಂದ್ಯಾವಳಿಯಲ್ಲಿ ಸತತ ಎರಡನೇ ಮುಖಭಂಗ ಅನುಭವಿಸಿದರೆ, ಶ್ರೇಯಸ್ ಗೋಪಾಲ್ ನಾಯಕತ್ವದ ಶಿವಮೊಗ್ಗ ಲಯನ್ಸ್ ತಂಡವು ಸತತ ಎರಡನೇ ಗೆಲುವು ದಾಖಲಿಸಿ ಉತ್ತಮ ಆರಂಭ ಕಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಲಯನ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 201 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಬೆಂಗಳೂರು ಬ್ಲಾಸ್ಟರ್ಸ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 165 ರನ್ ಗಳಿಸಿ 36 ರನ್‌ಗಳ ಸೋಲು ಕಂಡಿತು.
ಶಿವಮೊಗ್ಗ ಲಯನ್ಸ್ ತಂಡದ ಆರಂಭಿಕರಾದ ರೋಹನ್ ಕದಂ ಮತ್ತು ನಿಹಾಲ್ ಉಳ್ಳಾಲ ಮೊದಲ ವಿಕೆಟ್5 ಓವರ್‌ಗಳಲ್ಲಿ 65 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ 17 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 40 ರನ್ ಗಳಿಸಿದ್ದ ನಿಹಾಲ್ ವಿಕೆಟ್ ಒಪ್ಪಿಸಿದರು.
ಇನ್ನು ರೋಹನ್ ಕದಂ 47 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 70 ರನ್‌ಗಳ ಭರ್ಜರಿ ಅರ್ಧಶತಕ ಬಾರಿಸಿದರು. ನಂತರ ಬಂದ ರೋಹಿತ್ ಕುಮಾರ್ 11 ರನ್, ಅಭಿನವ್ ಮನೋಹರ್ 31 ರನ್, ಕ್ರಾಂತಿ ಕುಮಾರ್ 28 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು.
ಬೆಂಗಳೂರು ಬ್ಲಾಸ್ಟರ್ಸ್ ತಂಡದ ಪರ ಬೌಲಿಂಗ್‌ನಲ್ಲಿ ಪ್ರದೀಪ್ ಟಿ 2 ವಿಕೆಟ್, ಎಲ್ಆರ್ ಕುಮಾರ್ 2 ವಿಕೆಟ್ ಪಡೆದರೆ, ಲೋಚನ್ ಅಪ್ಪಣ್ಣ 1 ವಿಕೆಟ್ ಪಡೆದರು.
ಇನ್ನು 202 ರನ್‌ಗಳ ಬೃಹತ್ ಗುರಿ ಬೆನ್ನಟ್ಟಲು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ಬ್ಲಾಸ್ಟರ್ಸ್ ತಂಡದ ಆರಂಭಿಕರಾದ ಭುವನ್ ರಾಜು ಮತ್ತು ನಾಯಕ ಮಯಾಂಕ್ ಅಗರ್ವಾಲ್ ಸೊನ್ನೆಗೆ ಔಟಾಗಿದ್ದು ದೊಡ್ಡ ಹಿನ್ನಡೆಯಾಯಿತು.
ನಂತರ ಬಂದ ಜಸ್ವಂತ್ ಆಚಾರ್ಯ 29 ರನ್, ಪವನ್ ದೇಶಪಾಂಡೆ 32 ರನ್, ಶುಭಾಂಗ್ ಹೆಗ್ಡೆ 22 ರನ್, ಆಶಿಶ್ ಮಹೇಶ್ 30 ರನ್, ಲೋಚನ್ ಅಪ್ಪಣ್ಣ 17 ರನ್, ರಿಷಿ ಬೋಪಣ್ಣ 10 ರನ್, ಎಲ್ಆರ್ ಕುಮಾರ್ 16 ರನ್ ಗಳಿಸಿದರು. ಆದರೆ ತಮ್ಮ ತಂಡವನ್ನು ಗೆಲುವಿಗೆ ಮುನ್ನಡೆಸಲು ವಿಫಲರಾದರು.
ಶಿವಮೊಗ್ಗ ಲಯನ್ಸ್ ತಂಡದ ಬೌಲಿಂಗ್‌ನಲ್ಲಿ ನಾಯಕ ಶ್ರೇಯಸ್ ಗೋಪಾಲ್, ವಾಸುಕಿ ವೈಭವ್, ದೀಪಕ್ ದೇವಾಡಿಗ, ಅಧೋಕ್ಷ ಹೆಗ್ಡೆ ತಲಾ ಒಂದೊಂದು ವಿಕೆಟ್ ಪಡೆದರೆ, ಗಮನಾರ್ಹವಾಗಿ ನಾಲ್ಕು ರನೌಟ್‌ಗಳು ಸಂಭವಿಸಿದವು. ಇನ್ನು ಭರ್ಜರಿ ಅರ್ಧಶತಕ ಬಾರಿಸಿದ ಶಿವಮೊಗ್ಗ ಲಯನ್ಸ್ ತಂಡದ ರೋಹನ್ ಕದಂ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬೆಂಗಳೂರು ಬ್ಲಾಸ್ಟರ್ಸ್ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಬುಧವಾರ, ಆಗಸ್ಟ್ 16ರಂದು ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಎದುರಿಸಲಿದ್ದರೆ, ಶಿವಮೊಗ್ಗ ಲಯನ್ಸ್ ತಂಡವು ಗುರುವಾರ, ಆಗಸ್ಟ್ 17ರಂದು ಗುಲ್ಬರ್ಗ ಮಿಸ್ಟಿಕ್ಸ್ ತಂಡದ ವಿರುದ್ಧ ಸೆಣಸಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications