ಭಾನುವಾರ, ಆಗಸ್ಟ್ 14ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ 2023ರ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಪಂದ್ಯಾವಳಿಯ 2ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ತಂಡದ ವಿರುದ್ಧ ಶಿವಮೊಗ್ಗ ಲಯನ್ಸ್ ತಂಡವು 9 ರನ್‌ಗಳ ರೋಚಕ ಗೆಲುವು ಸಾಧಿಸಿತು.
ಶ್ರೇಯಸ್ ಗೋಪಾಲ್ ನಾಯಕತ್ವದ ಶಿವಮೊಗ್ಗ ಲಯನ್ಸ್ ತಂಡ ಮುಂದೆ ಕೃಷ್ಣಪ್ಪ ಗೌತಮ್ ನಾಯಕತ್ವದ ಮಂಗಳೂರು ಡ್ರಾಗನ್ಸ್ ತಂಡವು ಅಂತಿಮ ಓವರ್‌ನಲ್ಲಿ ಮಂಡಿಯೂರಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶಿವಮೊಗ್ಗ ಲಯನ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಮಂಗಳೂರು ಡ್ರಾಗನ್ಸ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 167 ರನ್‌ಗಳಷ್ಟೇ ಕಲೆಹಾಕಿ 9 ರನ್‌ಗಳಿಂದ ಸೋತಿತು.
ಶಿವಮೊಗ್ಗ ಲಯನ್ಸ್ ತಂಡದ ಪರ ಆರಂಬಿಕ ರೋಹನ್ ಕದಂ 25 ಎಸೆತಗಳಲ್ಲಿ 27 ರನ್, ನಿಹಾಲ್ ಉಳ್ಳಾಲ 19 ಎಸೆತಗಳಲ್ಲಿ 28 ರನ್, ರೋಹಿತ್ ಕುಮಾರ್ 18 ರನ್, ನಾಯಕ ಶ್ರೇಯಸ್ ಗೋಪಾಲ್ 32 ಎಸೆತಗಳಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 46 ರನ್ ಗಳಿಸಿದರೆ, ಅಭಿನವ್ ಮನೋಹರ್ 25 ಎಸೆತಗಳಲ್ಲಿ 1 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿದರು.
ಮಂಗಳೂರು ಡ್ರಾಗನ್ಸ್ ತಂಡದ ಪರ ಬೌಲಿಂಗ್‌ನಲ್ಲಿ ನವೀನ್ ಎಂಜಿ 4 ಓವರ್‌ಗಳಲ್ಲಿ 19 ರನ್ ನೀಡಿ 4 ವಿಕೆಟ್ ಪಡೆದರೆ, ಉಳಿದಂತೆ ಆದಿತ್ಯ ಗೋಯಲ್ 1 ವಿಕೆಟ್ ಪಡೆದರು.

ಇನ್ನು 177 ರನ್‌ಗಳ ಗುರಿ ಬೆನ್ನಟ್ಟಿದ ಮಂಗಳೂರು ಡ್ರಾಗನ್ಸ್ ತಂಡದ ಆರಂಭಿಕರಾದ ಶರತ್ ಬಿಆರ್ 15 ರನ್ ಗಳಿಸಿದರೆ, ರೋಹನ್ ಪಾಟೀಲ್ 23 ರನ್ ಬಾರಿಸಿದರು. ಬಳಿಕ ಬಂದ ನಿಕಿನ್ ಜೋಸ್ 6 ರನ್ ಗಳಿಸಿ ಔಟಾದರು.
ನಂತರ ಸಿದ್ಧಾರ್ಥ್ 35 ಎಸೆತಗಲ್ಲಿ 1 ಬೌಂಡರಿ ಮತ್ತು 3 ಸಿಕ್ಸರ್ ಅಜೇಯ 46 ರನ್ ಗಳಿಸಿದರೆ, ನವೀನ್ ಎಂಜಿ 14 ಎಸೆತಗಳಲ್ಲಿ 19 ರನ್ ಕಲೆಹಾಕಿದರು. ಇನ್ನು ಕೊನೆಯಲ್ಲಿ ಅನಿರುದ್ಧ ಜೋಷಿ 31 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಾಯದಿಂದ 50 ರನ್ ಬಾರಿಸಿ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಆದರೆ, ತಂಡವನ್ನು ಗೆಲುವಿನ ಗಡಿ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಶಿವಮೊಗ್ಗ ಲಯನ್ಸ್ ತಂಡದ ಪರ ಬೌಲಿಂಗ್‌ನಲ್ಲಿ ನಿಶ್ಚಿತ್ ರಾವ್ 2 ವಿಕೆಟ್, ಪ್ರಣವ್ ಭಾಟಿಯಾ 2 ವಿಕೆಟ್ ಪಡೆದರೆ, ಹೆಚ್ಎಸ್ ಶರತ್, ವಾಸುಕಿ ಕೌಶಿಕ್ ಮತ್ತು ಶ್ರೇಯಸ್ ಗೋಪಾಲ್ ತಲಾ ಒಂದೊಂದು ವಿಕೆಟ್ ಪಡೆದರು.
ಬ್ಯಾಟಿಂಗ್‌ನಲ್ಲಿ 46 ರನ್ ಮತ್ತು ಬೌಲಿಂಗ್‌ನಲ್ಲಿ 1 ವಿಕೆಟ್ ಪಡೆದ ಶಿವಮೊಗ್ಗ ಲಯನ್ಸ್ ತಂಡದ ನಾಯಕ ಶ್ರೇಯಸ್ ಗೋಪಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಇನ್ನು ಮಂಗಳೂರು ಡ್ರಾಗನ್ಸ್ ತಂಡದ ಮುಂದಿನ ಪಂದ್ಯವು ಮಂಗಳವಾರ, ಆಗಸ್ಟ್ 15ರಂದು ಮಧ್ಯಾಹ್ನದ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ ಆಡಲಿದೆ. ಶಿವಮೊಗ್ಗ ಲಯನ್ಸ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಮಂಗಳವಾರ, ಆಗಸ್ಟ್ 15ರಂದು ಸಂಜೆಯ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಎದುರಿಸಲಿದೆ.