ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್ ಆರಂಭವಾಗಲಿದೆ. ಇದಕ್ಕಾಗಿ ಎಲ್ಲ ತಂಡಗಳು ತಮ್ಮ ಕೊನೆಯ ಹಂತದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿವೆ. ಇದೇ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ದಾಖಲೆಯ ಆರನೇ ಬಾರಿ ಟ್ರೋಫಿ ಎತ್ತುವ ಕನಸಿನಲ್ಲಿದೆ. ಈ ನಿಟ್ಟಿನಲ್ಲಿ ತಂಡದ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ. ಇದೇ ವೇಳೆ ಚೆನ್ನೈ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಈ ಪೆಟ್ಟಿನಿಂದ ಚೇತರಿಸಿಕೊಳ್ಳುವುದು ರುತುರಾಜ್ ಗಾಯಕ್ವಾಡ್ ಪಡೆಗೆ ತುಸು ಕಷ್ಟ.
ಆಸ್ಟ್ರೇಲಿಯಾದ ವೇಗದ ಬೌಲರ್ ನಾಥನ್ ಎಲಿಸ್ ಗಾಯದ ಕಾರಣದಿಂದಾಗಿ ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಚೆನ್ನೈ ತಂಡ ಇನ್ನೂ ಅವರ ಬದಲಿ ಆಟಗಾರನನ್ನು ಘೋಷಿಸಿಲ್ಲ. ಸ್ಪೋರ್ಟ್‌ಸ್ಟಾರ್ ವರದಿಯ ಪ್ರಕಾರ, ಮಂಡಿರಜ್ಜು (ಹ್ಯಾಮ್‌ಸ್ಟ್ರಿಂಗ್) ಗಾಯದಿಂದಾಗಿ ನಾಥನ್ ಎಲಿಸ್ ಬಳಲುತ್ತಿದ್ದು ಟೂರ್ನಿಯಿಂದ ಹೊರಗುಳಿದಿದ್ದಾರೆ. ನಾಥನ್ ಎಲಿಸ್ ಅವರ ನಿರ್ಗಮನವು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇವರು ಡೆತ್ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿ ತಂಡಕ್ಕೆ ಆಧಾರವಾಗಬಲ್ಲ ಆಟಗಾರ ಎಂದು ಪರಿಗಣಿಸಲಾಗಿತ್ತು. ಚೆನ್ನೈ ತಂಡ ಇವರ ಬದಲಿಗೆ ಬೇರೆ ಆಟಗಾರರನ್ನು ಹುಡುಕುತ್ತಿದೆ.

ಗಾಯದ ಸಮಸ್ಯೆಯಿಂದ ಎಲಿಸ್ ಟೂರ್ನಿಯಿಂದ ಹೊರಗುಳಿದರೆ, ನ್ಯೂಜಿಲೆಂಡ್ ತಂಡದ ವೇಗದ ಬೌಲರ್ ಮ್ಯಾಟ್ ಹೆನ್ರಿ ಆಡುವ ಹನ್ನೊಂದರಲ್ಲಿ ನಿಯಮಿತ ಸ್ಥಾನವನ್ನು ಪಡೆಯುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾದ ನಾಥನ್ ಎಲಿಸ್ ತಮ್ಮ 186 ಟಿ20 ಪಂದ್ಯಗಳಲ್ಲಿ 231 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲದೆ ಅವರು 36 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 55 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂಕಿಅಂಶಗಳು ಎಲಿಸ್ ಅವರ ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇವರು ಈಗಾಗಲೇ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಪಂಜಾಬ್ ಪರ ಬೌಲಿಂಗ್ ನಡೆಸಿದ್ದಾರೆ. ಇವರು ಆಡಿದ 17 ಪಂದ್ಯಗಳಲ್ಲಿ 19 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಚೆನ್ನೈ ತಂಡ: ರುತುರಾಜ್ ಗಾಯಕ್‌ವಾಡ್ (ನಾಯಕ), ಆಯುಷ್ ಮ್ಹಾತ್ರೆ, ಎಂಎಸ್ ಧೋನಿ, ಡೆವಾಲ್ಡ್ ಬ್ರೆವಿಸ್, ಉರ್ವಿಲ್ ಪಟೇಲ್, ಶಿವಂ ದುಬೆ, ಜೇಮಿ ಓವರ್‌ಟನ್, ರಾಮಕೃಷ್ಣ ಘೋಷ್, ನೂರ್ ಅಹ್ಮದ್, ಖಲೀಲ್ ಅಹ್ಮದ್, ಅನ್ಶುಲ್ ಕಾಂಬೋಜ್, ಗುರ್ಜಪ್ನೀತ್ ಸಿಂಗ್, ಶ್ರೇಯಸ್ ಗೋಪಾಲ್, ಮುಖೇಶ್ ಚೌದರಿ, ಸಂಜು ಸ್ಯಾಮ್ಸನ್, ಕಾರ್ತಿಕ್ ಶರ್ಮಾ, ಪ್ರಶಾಂತ್ ವೀರ್, ರಾಹುಲ್ ಚಾಹರ್, ಅಕೇಲ್ ಹೊಸೈನ್, ಮ್ಯಾಟ್ ಹೆನ್ರಿ, ಮ್ಯಾಥ್ಯೂ ಶಾರ್ಟ್, ಅಮನ್ ಖಾನ್, ಸರ್ಫರಾಜ್ ಖಾನ್, ಜಕರಿನ್ ಫೌಲ್ಕ್ಸ್