ಆಗಸ್ಟ್ 11 ಭಾನುವಾರ, ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ ಕ್ರಿಕೆಟಿಗರೊಬ್ಬರು ಇದ್ದಕ್ಕಿದ್ದಂತೆ ದೊಡ್ಡ ಘೋಷಣೆ ಮಾಡಿದ್ದಾರೆ. ಹಲವು ವರ್ಷಗಳಿಂದ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯಲು ಈ ಕ್ರಿಕೆಟಿಗ ಪ್ರಯತ್ನಿಸುತ್ತಿದ್ದಾರೆ. ಆದರೆ ಇವರ ಪಾಲಿಗೆ ಅದೃಷ್ಟದ ಬಾಗಿಲು ತೆರೆದಿರಲಿಲ್ಲ.
ಇದೀಗ ಈ ಟೀಮ್ ಇಂಡಿಯಾ ಆಟಗಾರ ತಮ್ಮ ವೃತ್ತಿಜೀವನದ ಹೊಸ ಅಧ್ಯಾಯ ಆರಂಭಿಸಲು ರೆಡಿಯಾಗಿದ್ದಾರೆ. 14 ವರ್ಷಗಳ ಕಾಲ ಪಂಜಾಬ್ ತಂಡದಲ್ಲಿ ಆಡಿದ ನಂತರ ಮುಂಬರುವ ದೇಶೀಯ ಋತುವಿನಲ್ಲಿ ತ್ರಿಪುರಾ ತಂಡದಲ್ಲಿ ಆಡುವುದಾಗಿ ಈ ಕ್ರಿಕೆಟಿಗ ಘೋಷಿಸಿದ್ದಾರೆ.

ಈ ಕ್ರಿಕೆಟಿಗ ಬೇರೆಯಲ್ಲ ಮನದೀಪ್ ಸಿಂಗ್. ದೇಶೀಯ ಟೂರ್ನಿಗಳಲ್ಲಿ 14 ವರ್ಷಗಳ ಕಾಲ ಪಂಜಾಬ್ ತಂಡವನ್ನು ಪ್ರತಿನಿಧಿಸಿದ್ದಾರೆ. ಮುಂದಿನ ದೇಶೀಯ ಋತುವಿನಲ್ಲಿ ತ್ರಿಪುರಾ ಪರ ಮಂದೀಪ್ ಸಿಂಗ್ ಕಣಕ್ಕೀಳಿಯಲು ಸಜ್ಜಾಗಿದ್ದಾರೆ. ಶನಿವಾರ ದಂದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಿರ್ಧಾರವನ್ನು ಪ್ರಕಟಿಸಿರುವ ಮನದೀಪ್ , 'ಜೂನಿಯರ್ ಮಟ್ಟದಿಂದ ಹಿರಿಯ ಹಂತದವರೆಗೆ ಪಂಜಾಬ್‌ನೊಂದಿಗೆ ನನ್ನ ಪ್ರಯಾಣ ಅದ್ಭುತವಾಗಿದೆ. ನನ್ನ ನಾಯಕತ್ವದ ಅವಧಿಯಲ್ಲಿ ತಂಡವು 2023-24ರ ಋತುವಿನಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಗೆದ್ದಿರುವುದು ನನ್ನ ಅದೃಷ್ಟ.
ಆದರೆ ಸಾಕಷ್ಟು ಚಿಂತನೆಯ ನಂತರ, ಈಗ ನನ್ನ ವೃತ್ತಿಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವ ಸಮಯ ಎಂದು ಭಾವಿಸಿದ್ದೇನೆ. ಮುಂದಿನ ದೇಶೀಯ ಋತುವಿನಲ್ಲಿ ತ್ರಿಪುರಾ ಪರ ಆಡಲು ನಿರ್ಧರಿಸಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಮನದೀಪ್ ಸಿಂಗ್ ಅವರ ಅನುಭವ ಮತ್ತು ಪ್ರತಿಭೆ ತ್ರಿಪುರಕ್ಕೆ ದೊಡ್ಡ ಮಟ್ಟದಲ್ಲಿ ಲಾಭವಾಗಲಿದೆ. 2016ರಲ್ಲಿ ಜಿಂಬಾಬ್ವೆ ವಿರುದ್ಧ ಭಾರತದ ಪರ ಮಂದೀಪ್ ಮೂರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದಾದ ನಂತರ ಭಾರತದ ಪರ ಆಡಿಲ್ಲ.
ವಿಶೇಷವಾಗಿ ವಿಕೆಟ್‌ಕೀಪರ್ ಮತ್ತು ಬ್ಯಾಟರ್ ವೃದ್ಧಿಮಾನ್ ಸಹಾ ಅವರ ನಿರ್ಗಮನದ ನಂತರ ಮುಂಬರುವ ಋತುವಿಗಾಗಿ ಬಂಗಾಳಕ್ಕೆ ಮರಳಿದ್ದಾರೆ. ಈ ಋತುವಿನಲ್ಲಿ ಪಂಜಾಬ್‌ನ ಮಾಜಿ ಬ್ಯಾಟರ್ ಜೀವನ್‌ಜೋತ್ ಸಿಂಗ್ ಅವರನ್ನು ಸೇರಿಸಿಕೊಳ್ಳುವುದರಿಂದ ಮನದೀಪ್ ಜೊತೆಗೆ ತ್ರಿಪುರಾ ಕೂಡ ಪ್ರಯೋಜನ ಪಡೆಯಲಿದೆ.
ಪಂಜಾಬ್‌ನ ದೇಶೀಯ ಯಶಸ್ಸಿನಲ್ಲಿ ಮನದೀಪ್ ಪ್ರಮುಖ ಪಾತ್ರ ವಹಿಸಿದ್ದಾರೆ. ವಿಶೇಷವಾಗಿ 2023/24 ಋತುವಿನಲ್ಲಿ ಮೊದಲ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪ್ರಶಸ್ತಿ ಗೆಲ್ಲಲು ತಂಡವನ್ನು ಮನದೀಪ್ ನಾಯಕನಾಗಿ ಮುನ್ನಡೆಸಿದ್ದಾರೆ. ಮನದೀಪ್ ತಂಡದಿಂದ ಹೊರ ನಡೆದ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (ಪಿಸಿಎ) ಯೊಂದಿಗಿನ ಸುದೀರ್ಘ ಪ್ರಯಾಣವನ್ನು ಕೊನೆಗೊಳಿಸಿದ್ದಾರೆ.
2010ರಲ್ಲಿ ಪಂಜಾಬ್ ಪರ ಮನದೀಪ್ ಸಿಂಗ್ ಪಾದಾರ್ಪಣೆ ಮಾಡಿದರು. 99 ಪಂದ್ಯಗಳಿಂದ 47.76 ರ ಸರಾಸರಿಯಲ್ಲಿ 6,448 ರನ್ ಗಳಿಸಿದ್ದಾರೆ. ಅವರ ಅತ್ಯುತ್ತಮ ಸ್ಕೋರ್ 235 ರನ್ ಆಗಿದೆ. ಈ ಅವಧಿಯಲ್ಲಿ ಮನದೀಪ್ ಬ್ಯಾಟ್‌ನಿಂದ 15 ಶತಕ ಮತ್ತು 34 ಅರ್ಧ ಶತಕಗಳು ಮೂಡಿ ಬಂದಿವೆ.