
ಹೈದರಾಬಾದ್, ಮೇ 13: ಪಂದ್ಯದ ವೇಳೆ ಕಾಮೆಂಟೇಟರ್ ಕುರ್ಚೀಲಿದ್ದೂ ತಂಡವೊಂದಕ್ಕೆ ಸಲಹೆ ನೀಡಿದ್ದಕ್ಕಾಗಿ ಮಾಜಿ ಕ್ರಿಕೆಟಿಗ, ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಟ್ರೋಲ್‌ಗೀಡಾಗಿದ್ದಾರೆ. ಹೈದರಾಬಾದ್‌ನಲ್ಲಿ ಭಾನುವಾರ (ಮೇ 13) ನಡೆದ ಪಂದ್ಯದಲ್ಲಿ ಮಂಜ್ರೇಕರ್ ಎಡವಟ್ಟು ಮಾಡಿ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಐಪಿಎಲ್ 2019ರ ಅಂತಿಮ ಹಣಾಹಣಿಯಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮುಂಬೈ ಇನ್ನಿಂಗ್ಸ್ ವೇಳೆ ಕಾಮೆಂಟರಿ ಮಾಡುತ್ತಿದ್ದ ಮಂಜ್ರೇಕರ್ ಮುಂಬೈ ಇಂಡಿಯನ್ಸ್ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್‌ಗೆ ಸಲಹೆ ನೀಡಿ ಪೇಚಿಗೀಡಾಗಿದ್ದು ನಡೆದಿತ್ತು.
ಮುಂಬೈ ಇನ್ನಿಂಗ್ಸ್ ನ ಪ್ರಮುಖ ಸಂದರ್ಭವೊಂದರಲ್ಲಿ ಮಂಜ್ರೇಕರ್ ಅವರು ಡಿ ಕಾಕ್‌ಗೆ 'ಹಾಗೆ ಮಾಡಬೇಡ, ಹಾಗೆ ಮಾಡಬೇಡ' ಎಂದು ಕಾಮೆಂಟ್ ಮಾಡಿದ್ದರು. ಕಾಮೆಂಟೇಟರ್ ಒಬ್ಬ ಯಾವುದೇ ತಂಡವನ್ನು ಬೆಂಬಲಿಸಿ ಕಾಮೆಂಟ್ ಮಾಡುವಂತಿಲ್ಲ. ಇದೇ ಕಾರಣಕ್ಕೆ ಸಂಜಯ್ ಮೇಲೆ ಜಾಲತಾಣಿಗರು ಕಿಡಿ ಕಾರಿದ್ದಾರೆ.
ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 1 ರನ್‌ನಿಂದ ಮಣಿಸುವುದರೊಂದಿಗೆ ರೋಚಕ ಗೆಲುವನ್ನಾಚರಿಸಿತ್ತು. ಅಲ್ಲದೆ ಐಪಿಎಲ್ ನಲ್ಲಿ 4 ಪ್ರಶಸ್ತಿಗಳೊಂದಿಗೆ ಅತೀ ಬಲಿಷ್ಠ ತಂಡವೆಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಮಂಜ್ರೇಕರ್ ನಡೆ ಪ್ರಶ್ನಿಸಿ ಕ್ರಿಕೆಟ್ ಪ್ರಿಯರು ಮಾಡಿದ ಒಂದಿಷ್ಟು ಟ್ವೀಟ್‌ಗಳು ಕೆಳಗಿವೆ.