ಕ್ರಿಕೆಟ್‌ನ 3 ಪ್ರಮುಖ ನಿಯಮಗಳನ್ನು ಬದಲಾಯಿಸಿದ ಎಂಸಿಸಿ: ಇನ್ಮುಂದೆ ಈ ರೀತಿ ಮಾಡೋ ಹಾಗಿಲ್ಲ!

ಕ್ರಿಕೆಟ್, ಇಂಗ್ಲೆಂಡ್‌ನಲ್ಲಿ ಹುಟ್ಟಿದ ಈ ಆಟ ಸದ್ಯ ವಿಶ್ವದ ಹಲವಾರು ದೇಶಗಳ ಪ್ರಮುಖ ಕ್ರೀಡೆಯಾಗಿದೆ. ಅದರಲ್ಲಿಯೂ ಏಷ್ಯಾ ದೇಶಗಳು, ಆಸ್ಟ್ರೇಲಿಯ, ಇಂಗ್ಲೆಂಡ್, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಅತಿಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ಈ ಕ್ರಿಕೆಟ್ ಸದ್ಯ ಹಲವಾರು ಪುಟ್ಟ ದೇಶಗಳಲ್ಲಿಯೂ ಭಾರೀ ಬೇಡಿಕೆಯನ್ನು ಹೊಂದಿದ್ದು, ಹಲವು ದೇಶಗಳು ವಿಶ್ವಕಪ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದುಕೊಳ್ಳುವ ಪ್ರಯತ್ನದಲ್ಲಿವೆ. ಇನ್ನು ಜೆಂಟಲ್‌ಮನ್ ಗೇಮ್ ಎಂದೇ ಖ್ಯಾತಿಯನ್ನು ಪಡೆದುಕೊಂಡಿರುವ ಕ್ರಿಕೆಟ್ ದಿನ ಕಳೆದಂತೆ ತನ್ನ ಜನಪ್ರಿಯತೆ ಜೊತೆಗೆ ಹೊಸ ಹೊಸ ಮಾದರಿಗಳನ್ನೂ ಸಹ ಹೊಂದುತ್ತಿದೆ. ಮೊದಲಿಗೆ ಟೆಸ್ಟ್ ಕ್ರಿಕೆಟ್ ಮೂಲಕ ಭಾರೀ ಪ್ರಸಿದ್ಧಿ ಹೊಂದಿದ್ದ ಕ್ರಿಕೆಟ್ ನಂತರ ಏಕದಿನ ಮಾದರಿಯಲ್ಲೂ ಕೂಡ ಆಡಲ್ಪಟ್ಟಿತು. ನಂತರ ೨೦೦೩ರಲ್ಲಿ ಟಿ ಟ್ವೆಂಟಿ ಕ್ರಿಕೆಟ್ ಮಾದರಿ ಪರಿಚಯವಾದ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಜತೆಗೆ ಫ್ರಾಂಚೈಸಿ ಕ್ರಿಕೆಟ್ ಲೀಗ್‌ಗಳೂ ಸಹ ಶುರುವಾದವು.
ಮೊದಲಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಮೂಲಕ ಫ್ರಾಂಚೈಸಿ ಕ್ರಿಕೆಟ್ ಲೀಗ್ ಟ್ರೆಂಡ್ ಆರಂಭವಾಗಿದ್ದು ಸದ್ಯ ಐಪಿಎಲ್ ರೀತಿಯ ಹಲವು ಫ್ರಾಂಚೈಸಿ ಕ್ರಿಕೆಟ್ ಟೂರ್ನಿಗಳು ಹುಟ್ಟಿಕೊಂಡಿವೆ. ಹಾಗೂ ಈ ಫ್ರಾಂಚೈಸಿ ಕ್ರಿಕೆಟ್ ಟ್ರೆಂಡ್‌ನಿಂದ ಹತ್ತು ಓವರ್‌ಗಳ ಪಂದ್ಯಗಳೂ ಕೂಡ ಆರಂಭವಾಗಿದೆ. ಹೀಗೆ ಕ್ರಿಕೆಟ್ ದಿನದಿಂದ ದಿನಕ್ಕೆ ಹಲವು ಬದಲಾವಣೆಗಳನ್ನು ಹೊಂದುವುದರ ಜೊತೆಗೆ ಕ್ರಿಕೆಟ್ ನಿಯಮಗಳ ವಿಷಯವಾಗಿ ಹಲವು ವಿವಾದಗಳಿಗೂ ಸಹ ಕಾರಣವಾಗಿದೆ. ಹೌದು, ಕ್ರಿಕೆಟ್‌ನಲ್ಲಿ ಹಲವಾರು ನಿಯಮಗಳಿದ್ದು, ಈ ನಿಯಮಗಳನ್ನು ಆಟಗಾರರು ಪಾಲಿಸಿ ಆಟವನ್ನಾಡಬೇಕಿದೆ. ಆದರೆ ಕೆಲ ನಿಯಮಗಳಿಂದಲೇ ವಿವಾದಗಳು ಮತ್ತು ಆಟದ ನಡುವೆ ಜಗಳಗಳು ಜರುಗಿದ ಹಲವಾರು ಘಟನೆಗಳನ್ನು ನಾವು ನೀವೆಲ್ಲಾ ಕಂಡಿದ್ದೇವೆ. ಹೀಗೆ ಕ್ರಿಕೆಟ್‌ನಲ್ಲಿ ಉಂಟಾದ ವಿವಾದಗಳಿಗೆ ಕಾರಣವಾದ ಅಂಶಗಳಲ್ಲಿ ಮಂಕಡ್ ಕೂಡ ಒಂದು. ನಾನ್ ಸ್ಟ್ರೈಕ್ ಎಂಡ್‌ನಲ್ಲಿರುವ ಬ್ಯಾಟ್ಸ್‌ಮನ್‌ನ್ನು ಬಾಲನ್ನು ಎಸೆಯುವ ಮುನ್ನವೇ ರನ್ಔಟ್ ಮಾಡಿದರೆ ಅದನ್ನು ಔಟ್ ಎಂದು ಪರಿಗಣಿಸಲಾಗುತ್ತಿತ್ತು. ಆದರೆ, ಈ ನಿಯಮಕ್ಕೆ ಇದೀಗ ಪೂರ್ಣವಿರಾಮ ಇಟ್ಟಿರುವ ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ ಮೂರು ಕ್ರಿಕೆಟ್ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದ್ದು, ಕ್ರಿಕೆಟ್ ಕಾನೂನಿನಲ್ಲಿ ತಿದ್ದುಪಡಿ ತಂದಿದೆ.
ಹೌದು, ಎಂಸಿಸಿ ( ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ ) ಬದಲಾವಣೆ ತಂದಿರುವ ಮೂರು ಕ್ರಿಕೆಟ್ ನಿಯಮಗಳಾವುವು ಮತ್ತು ಆ ಬದಲಾವಣೆಗಳೇನು ಎಂಬ ಮಾಹಿತಿ ಈ ಕೆಳಕಂಡಂತಿದ್ದು, ಮುಂಬರುವ ಅಕ್ಟೋಬರ್ 1ರಿಂದ ಈ ನೂತನ ನಿಯಮಗಳು ಐಸಿಸಿ ಅಡಿಯಲ್ಲಿ ನಡೆಯುವ ಎಲ್ಲಾ ಸರಣಿ ಹಾಗೂ ಟೂರ್ನಿಗಳಿಗೂ ಅನ್ವಯಿಸಲಿದೆ.

1. ಚೆಂಡಿಗೆ ಎಂಜಲು ಸವರುವ ಹಾಗಿಲ್ಲ
ಕೊವಿಡ್ ಬರುವುದಕ್ಕೂ ಮುಂಚಿನ ಪಂದ್ಯಗಳನ್ನು ವೀಕ್ಷಿಸಿದರೆ ಆ ಪಂದ್ಯಗಳಲ್ಲಿ ಬೌಲರ್ ಹಾಗೂ ಫೀಲ್ಡರ್‌ಗಳು ಚೆಂಡು ಹೊಳೆಯುವ ಹಾಗೆ ಕಾಣುವಂತೆ ಮಾಡಲು ತಮ್ಮ ಎಂಜಲನ್ನು ಚೆಂಡಿಗೆ ಸವರುತ್ತಿದ್ದ ದೃಶ್ಯಗಳನ್ನು ಕಾಣಬಹುದು. ಆದರೆ, ಕೊರೊನಾ ವೈರಸ್ ಬಂದ ನಂತರ ಚೆಂಡಿಗೆ ಎಂಜಲು ಹಾಕುವ ನಿಯಮಕ್ಕೆ ತಾತ್ಕಾಲಿಕವಾಗಿ ಹಾಕಲಾಗಿದ್ದ ಬ್ರೇಕ್ ಇದೀಗ ಶಾಶ್ವತ ನಿಯಮವಾಗಿ ಬದಲಾಗಿದೆ. ಹೌದು, ಎಂಸಿಸಿ ಘೋಷಿಸಿರುವ ನೂತನ ನಿಯಮದ ಪ್ರಕಾರ ಯಾವುದೇ ಆಟಗಾರ ಕೂಡ ಚೆಂಡಿಗೆ ಎಂಜಲನ್ನು ಸವರುವ ಹಾಗಿಲ್ಲ ಹಾಗೂ ಈ ಚಟುವಟಿಕೆಯನ್ನು ಚೆಂಡಿನ ಪರಿಸ್ಥಿತಿ ಬದಲಾಯಿಸಲು ಬಳಸುವ ಅಕ್ರಮ ವಿಧಾನ ಎಂದು ಪರಿಗಣಿಸಲಾಗುವುದು. ಹೀಗಾಗಿ ಅಕ್ಟೋಬರ್ ೧ರಿಂದ ನಡೆಯಲಿರುವ ಪಂದ್ಯಗಳಲ್ಲಿ ಯಾವುದೇ ಆಟಗಾರ ಕೂಡ ಚೆಂಡಿಗೆ ಎಂಜಲನ್ನು ಸವರುವ ಹಾಗಿಲ್ಲ.

2. ನಾನ್-ಸ್ಟ್ರೈಕ್ ಬ್ಯಾಟ್ಸ್‌ಮನ್‌ನ್ನು ರನ್ಔಟ್ ಮಾಡುವ ಹಾಗಿಲ್ಲ
ನಾನ್ ಸ್ಟ್ರೈಕ್ ಎಂಡ್‌ನಲ್ಲಿರುವ ಬ್ಯಾಟ್ಸ್‌ಮನ್‌ನ್ನು ಬಾಲನ್ನು ಎಸೆಯುವ ಮುನ್ನವೇ ಬೌಲರ್ ರನ್ಔಟ್ ಮಾಡುವ ಯತ್ನ ಈ ಹಿಂದೆ ಸಾಕಷ್ಟು ದೊಡ್ಡ ಮಟ್ಟದ ವಿವಾದಗಳನ್ನು ಹುಟ್ಟುಹಾಕಿತ್ತು. ಈ ವಿವಾದಕ್ಕೆ ಇದೀಗ ಫುಲ್‌ಸ್ಟಾಪ್ ಇಟ್ಟಿರುವ ಎಂಸಿಸಿ ಈ ರೀತಿಯ ಮಂಕಡ್ ರನ್ಔಟ್ ಇನ್ನುಮುಂದೆ ಅಕ್ರಮವಲ್ಲ ಬದಲಾಗಿ ಅದೊಂದು ಔಟ್ ಎಂದು ಬದಲಾಯಿಸಿದೆ. ಈ ಮೂಲಕ ವಿಕೆಟ್ ತೆಗೆಯಲು ಮಾಡುವ ಬೌಲರ್ ಬದಲು ಆತುರವಾಗಿ ರನ್ ಕದಿಯಲು ಯತ್ನಿಸುವ ಬ್ಯಾಟ್ಸ್‌ಮನ್‌ನದ್ದೇ ತಪ್ಪು ಎಂಬಂತೆ ಎಂಸಿಸಿ ಬದಲಾವಣೆ ತಂದಿದೆ.

3. ನೂತನ ಬ್ಯಾಟ್ಸ್‌ಮನ್‌ಗೆ ಸ್ಟ್ರೈಕ್
ಇನ್ನು ಈ ಹಿಂದೆ ಬ್ಯಾಟ್ಸ್‌ಮನ್ ಓರ್ವ ಔಟ್ ಆದರೆ ಮತ್ತೋರ್ವ ಬ್ಯಾಟ್ಸ್‌ಮನ್ ರನ್ ಓಡಿದ್ದರೆ ಆತ ಸ್ಟ್ರೈಕ್ ತೆಗೆದುಕೊಳ್ಳಬಹುದು ಎಂಬ ನಿಯಮವಿತ್ತು. ಅದರಲ್ಲಿಯೂ ಕ್ಯಾಚ್ ಔಟ್ ಆದ ಸಂದರ್ಭದಲ್ಲಿ ಈ ರೀತಿ ಸ್ಟ್ರೈಕ್ ಬದಲಾವಣೆ ಹೆಚ್ಚಾಗಿ ಆಗುತ್ತಿತ್ತು. ಆದರೆ ಇದೀಗ ಈ ನಿಯಮಕ್ಕೆ ಬದಲಾವಣೆ ತಂದಿರುವ ಎಂಸಿಸಿ ಬ್ಯಾಟ್ಸ್‌ಮನ್ ಓರ್ವ ಔಟ್ ಆದ ನಂತರ ಬರುವ ಹೊಸ ಬ್ಯಾಟ್ಸ್‌ಮನ್ ಬ್ಯಾಟಿಂಗ್ ಮಾಡಬೇಕು ಹಾಗೂ ನಾನ್‌ಸ್ಟ್ರೈಕ್‌ನಲ್ಲಿರುವ ಬ್ಯಾಟ್ಸ್‌ಮನ್ ರನ್ ಓಡಿದ್ದರೂ ಸಹ ಬ್ಯಾಟಿಂಗ್ ಮಾಡಬಾರದು ಎಂದಿದೆ. ಈ ನಿಯಮದಿಂದ ಪಂದ್ಯದ ಅಂತಿಮ ನಿರ್ಣಾಯಕ ಹಂತದಲ್ಲಿ ಬೌಲಿಂಗ್ ವಿಭಾಗಕ್ಕೆ ಹೆಚ್ಚು ಅನುಕೂಲವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications