
ನ್ಯೂಜಿಲೆಂಡ್ ತಂಡದ ಸ್ಫೋಟಕ ಓಪನರ್ ಮಾರ್ಟಿನ್ ಗಪ್ಟಿಲ್, ಟೀಮ್ ಇಂಡಿಯಾದ ಚೇಸಿಂಗ್ ಮಾಸ್ಟರ್ ವಿರಾಟ್ ಕೊಹ್ಲಿಯ ಬಹುದೊಡ್ಡ ದಾಖಲೆಯೊಂದನ್ನ ಸರಿಗಟ್ಟಿದ್ದಾರೆ.
ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ 35 ವರ್ಷದ ಮಾರ್ಟಿನ್ ಗಪ್ಟಿಲ್ ಮೊದಲ ಓವರ್‌ನಲ್ಲಿ ಭುವನೇಶ್ವರ್ ಬೌಲಿಂಗ್‌ನಲ್ಲಿ 14 ರನ್‌ಗಳನ್ನ ಕಲೆಹಾಕಿದ್ರು. ಇದೇ ಓವರ್‌ನಲ್ಲಿ ಮಾರ್ಟಿನ್ ಗಪ್ಟಿಲ್ ಮಾಡ್ರನ್ ಲೆಜೆಂಡ್ ವಿರಾಟ್ ಕೊಹ್ಲಿ ಹೆಸರಲಿದ್ದ ಅಪರೂಪದ ದಾಖಲೆಯನ್ನ ತಮ್ಮದಾಗಿಸಿಕೊಂಡ್ರು.
ಹೌದು ಮಾರ್ಟಿನ್ ಗಪ್ಟಿಲ್ ಸದ್ಯ ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿರುವ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದ ವಿರುದ್ಧ 15 ಎಸೆತಗಳಲ್ಲಿ 31 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ ಗಪ್ಟಿಲ್ ಟಿ20 ಕ್ರಿಕೆಟ್‌ನಲ್ಲಿ 3,231ರನ್ ಕಲೆಹಾಕಿದ್ರು. ಈ ಮೂಲಕ ವಿರಾಟ್ ಹೆಸರಲ್ಲಿ 3,227ರನ್‌ಗಳ ದಾಖಲೆಯನ್ನ ಸರಿಗಟ್ಟಿದ್ರು.
ವಿರಾಟ್ ಕೊಹ್ಲಿ 95 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 3,227ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್ ಬಳಿಕ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ವಿಶ್ರಾಂತಿ ಪಡೆದಿದ್ದಾರೆ. ಇದೇ ಸಮಯದಲ್ಲಿ ಭರ್ಜರಿ ಆಟವಾಡುತ್ತಿರುವ ಗಪ್ಟಿಲ್ ಕೊಹ್ಲಿ ಹೆಸರಲ್ಲಿದ್ದ ದಾಖಲೆ ಸರಿಗಟ್ಟಿದ್ದಾರೆ. ಪಂದ್ಯಕ್ಕೂ ಮೊದಲು ಈ ದಾಖಲೆ ಮಾಡಲು ಗಪ್ಟಿಲ್‌ಗೆ 10ರನ್‌ಗಳ ಅವಶ್ಯಕತೆಯಿತ್ತು. ಆದರೆ ಪಂದ್ಯದಲ್ಲಿ 31 ರನ್ ಸಿಡಿಸಿದ ಮಾರ್ಟಿನ್ ಇದೀಗ 111 ಪಂದ್ಯಗಳಿಂದ 3,248 ರನ್ ಕಲೆಹಾಕಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮಾರ್ಟಿನ್ ಗಪ್ಟಿಲ್ ಮತ್ತು ವಿರಾಟ್ ಕೊಹ್ಲಿ ಮೊದಲೆರಡು ಸ್ಥಾನದಲ್ಲಿದ್ರೆ, ಹಿಟ್‌ಮ್ಯಾನ್ ರೋಹಿತ್ ಶರ್ಮಾ 118 ಪಂದ್ಯಗಳಿಂದ 3,141 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.
ಇನ್ನು ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಚುಟುಕು ಕ್ರಿಕೆಟ್ ಸರಣಿಯನ್ನ ಮುಡಿಗೇರಿಸಿಕೊಂಡಿದೆ. ಸತತ ಎರಡು ಟಿ20 ಪಂದ್ಯ ಗೆದ್ದ ಭಾರತವು ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ.