ಆತ ಮರತುಬಿಡಬೇಕಾದ ಕ್ರಿಕೆಟಿಗ: ಇಂಗ್ಲೆಂಡ್ ವೇಗಿಯ ಮೇಲೆ ಸಿಡಿದುಬಿದ್ದ ಹೇಡನ್
ಆಶಸ್ ಸರಣಿಯ ಮೊದಲ ಪಂದ್ಯ ಈಗಾಗಲೇ ಮುಕ್ತಾಯವಾಗಿದ್ದು ಆಸ್ಟ್ರೇಲಿಯಾ ಗೆದ್ದು 1-0 ಅಂತರದಿಂದ ಮುನ್ನಡೆಯಲ್ಲಿದೆ. ಆಘಾತಕಾರಿ ಸೋಲು ಅನುಭವಿಸಿದರೂ ಇಂಗ್ಲೆಂಡ್ ತಂಡ ಆತ್ಮವಿಶ್ವಾದಿಂದಲೇ ಎರಡನೇ ಪಂದ್ಯಕ್ಕೆ ಸಿದ್ಧತೆ ಆರಂಭಿಸಿದೆ. ಆದರೆ ಈ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮ್ಯಾಥ್ಯೂ ಹೇಡನ್ ಇಂಗ್ಲೆಂಡ್ ತಂಡದ ವೇಗದ ಬೌಲರ್ ಒಲೀ ರಾಬಿನ್ಸನ್ ಬಗ್ಗೆ ಕಟುವಾಗಿ ಮಾತನಾಡಿದ್ದು ಆತನ ವರ್ತನೆಯ ಬಗ್ಗೆ ಟೀಕಿಸಿದ್ದಾರೆ.
ಪ್ರಸ್ತುತ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುವ ಮ್ಯಾಥ್ಯೂ ಹೇಡನ್ ಒಲಿ ರಾಬಿನ್ಸನ್ ಅವರನ್ನು 'ಮರೆತುಬಿಡಬೇಕಾದ' ಕ್ರಿಕೆಟಿಗ ಎಂದು ಕರೆದಿದ್ದಾರೆ. ಈ ಸಂದರ್ಭದಲ್ಲಿ ಡೇವಿಡ್ ವಾರ್ನರ್ ಈ ವೇಗಿಯ ಮೇಲೆ ಆಕ್ರಮಣಮಾಡಬೇಕೆಂದು ಹೇಳಿದ್ದು '124 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದರೂ ಆತನದ್ದು ಬೇಕಾಬಿಟ್ಟಿಯಾಗಿ ಮಾತನಾಡುವ ಬಾಯಿ' ಎಂದು ಕುಟುಕಿದ್ದಾರೆ.

ಆಶಸ್ ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಉಸ್ಮಾನ್ ಖವಾಜ ಅವರನ್ನು ಔಟ್ ಮಾಡಿದ ಬಳಿಕ ರಾಬಿನ್ಸನ್ ಅವಾಚ್ಯಪದಗಳನ್ನು ಬಳಸಿ ಆಕ್ರಮಣಕಾರಿಯಾಗಿ ಸಂಭ್ರಮಿಸಿದ್ದರು. ಇದು ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ಇನ್ನು ಈ ವಿಚಾರವಾಗಿ ದಿನದಾಟದ ಮುಕ್ತಾಯದ ಬಳಿಕ ಮಾಧ್ಯಗಳು ಪ್ರಶ್ನೆ ಕೇಳಿದಾಗ ತಮ್ಮ ವರ್ತನೆಯನ್ನು ಸಮರ್ಥನೆ ಮಾಡಿಕೊಂಡಿದ್ದು ರಿಕಿ ಪಾಂಟಿಂಗ್ ಈ ಹಿಂದೆ ಆಡುತ್ತಿದ್ದಾಗ ಅವರು ಕೂಡ ಇಂಗ್ಲೆಂಡ್ ಆಟಗಾರರನ್ನು ಉದ್ದೇಶಿಸಿ ಇಂಥಾದ್ದೇ ರೀತಿಯಲ್ಲಿ ವರ್ತಿಸುತ್ತಿದ್ದರು ಎಂದಿದ್ದರು.
ಇನ್ನು ಈ ಮಾಧ್ಯಮಗೋಷ್ಟಿಯಲ್ಲಿ ಮತ್ತೊಂದು ಹೇಳಿಕೆಯನ್ನು ನೀಡಿ ಆಸ್ಟ್ರೇಲಿಯಾವನ್ನು ಕೆಣಕಿದ್ದರು. ಆಸ್ಟ್ರೇಲಿಯಾದ ಬಾಲಂಗೋಚಿ ಆಟಗಾರರನ್ನು ಉದ್ದೇಶಿಸಿ ಆಸ್ಟ್ರೇಲಿಯಾ 11ರ ಕ್ರಮಾಂಕದಲ್ಲಿ ಆಡುವ ಮೂವರು ಆಟಗಾರರನ್ನು ಹೊಂದಿದೆ ಎಂದಿದ್ದರು. ಮೊದಲ ಇನ್ನಿಂಗ್ಸ್‌ನ ಕೊನೆಯ ಮೂರು ವಿಕೆಟ್‌ಗಳನ್ನು 14 ರನ್‌ಗಳ ಅಂತರದಲ್ಲಿ ಕಳೆದುಕೊಂಡ ಹಿನ್ನೆಲೆಯಲ್ಲಿ ಈ ಮಾತುಗಳನ್ನಾಡಿದ್ದರು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ ಹಾಗೂ ನಾಥನ್ ಲಿಯಾನ್ ವಿಕೆಟ್ ಕಳೆದುಕೊಳ್ಳದೆ ತಂಡವನ್ನು ಗೆಲ್ಲಿಸಿದ ಬಳಿಕ ಆಸಿಸ್ ಅಭಿಮಾನಿಗಳು ಇಂಗ್ಲೆಂಡ್ ಆಟಗಾರನನ್ನು ಟೀಕಿಸಿದ್ದಾರೆ.
ಇನ್ನು ಇಂಗ್ಲೆಂಡ್ ತಂಡ ಮೊದಲ ಪಂದ್ಯದಲ್ಲಿ ಬ್ಯಾಸ್‌ಬಾಲ್ ಶೈಲಿಯಲ್ಲಿ ಆಡಿ ಸೋಲು ಅನುಭವಿಸಿದ ಬಳಿಕ ಇಂಗ್ಲೆಂಡ್ ಆತನ ರಣತಂತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಕೋಚ್ ಮೆಕ್ಕಲಮ್ ಕೂಡ ಪ್ರತಿಕ್ರಿಯೆ ನೀಡಿದ್ದು ಸರಣಿಯ ಮುಂದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನ್ನಷ್ಟು ಆಕ್ರಮಣಕಾರಿಯಾಗಿ ಆಡುವ ಮುನ್ಸೂಚನೆ ನೀಡಿದ್ದಾರೆ.
"ನಮ್ಮ ರಣತಂತ್ರದ ಪ್ರಕಾರವೇ ಮುಂದುವರಿಯುವ ವಿಶ್ವಾಸವಿದೆ. ಇದು ಬಹಳ ಮುಖ್ಯವಾಗಿದ್ದು ಮುಂದೆ ನಾವು ಇದಕ್ಕಿಂತಲೂ ಆಕ್ರಮಣಕಾರಿಯಾಗಿ ಮುನ್ನುಗ್ಗಲಿದ್ದೇವೆ. ನಾವು ಆಡಿದ ರೀತಿ ನಮ್ಮ ಆಟದ ಶೈಲಿಯನ್ನು ಒಪ್ಪಿಕೊಳ್ಳುವಂತೆ ಮಾಡಿದ್ದು ಸ್ವಲ್ಪ ಅದೃಷ್ಟ ನಮ್ಮ ಕಡೆಗಿದ್ದರೆ ನಾವು ಗೆಲುವು ಸಾಧಿಸಿರುತ್ತಿದ್ದೆವು" ಎಂದಿದ್ದಾರೆ ಇಂಗ್ಲೆಂಡ್ ತಂಡದ ಕೋಚ್ ಬ್ರೆಂಡನ್ ಮೆಕ್ಕಲಮ್.
ಮುಂದುವರಿದು ಮೆಕ್ಕಲಮ್ "ನಮ್ಮ ಹುಡುಗರಿಗೆ ತಾವು ಮಾಡಿದ ಪ್ರಯತ್ನದ ಬಗ್ಗೆ ಖಂಡಿತಾ ಹೆಮ್ಮೆಯಿದೆ. ಅದೇ ಕಾರಣದಿಂದಾಗಿ ನಾವು ಲಾರ್ಡ್ಸ್ ಪಂದ್ಯಕ್ಕೆ ಸಾಕಷ್ಟು ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದ್ದೇವೆ. ಆಟದಲ್ಲಿ ಹಿಂದಿರುಗಿ ನೋಡದೆ ಮುಂದುವರಿಯಲು ನಾವು ಬಯಸುತ್ತೇವೆ. ಎದುರಾಳಿ ತಂಡವನ್ನು ಒತ್ತಡಕ್ಕೆ ಸಿಲುಕಿಸುವ ಯಾವೆಲ್ಲಾ ಅವಕಾಶಗಳು ದೊರೆಯುತ್ತದೆಯೋ ಅದನ್ನು ನಾವು ಖಂಡಿತವಾಗಿಯೂ ಸಂಪೂರ್ಣವಾಗಿ ಬಳಸಿಕೊಳ್ಳುತ್ತೇವೆ" ಎಂದು ಬ್ರೆಂಡನ್ ಮೆಕ್ಕಲಮ್ ಹೇಳಿಕೆ ನೀಡುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮ್ಮಿನ್ಸ್ 5ನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಬಹುತೇಕ ಸೋಲಿನ ಅಂಚಿನಲ್ಲಿದ್ದಾಗ ಅಮೋಘ ಹೋರಾಟವನ್ನು ಪ್ರದರ್ಶಿಸಿ ಗೆಲುವಿನತ್ತ ಕೊಂಡೊಯ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications