MI vs GT: ತಿಲಕ್ ವರ್ಮಾ ಶತಕದ ಅಬ್ಬರ: ಮುಂಬೈಗೆ 99 ರನ್ ಭರ್ಜರಿ ಜಯ
ಅಹಮದಾಬಾದ್; ಭರವಸೆಯ ಮಧ್ಯಮ ಕ್ರಮಾಂಕದ ಬ್ಯಾಟರ್ ತಿಲಕ್ ವರ್ಮಾ ಬಾರಿಸಿದ ಶತಕ ಹಾಗೂ ಅಶ್ವನಿ ಕುಮಾರ್ ಅವರ ಮಾರಕ ದಾಳಿಯ ನೆರವಿನಿಂದ ಮುಂಬೈ ಇಂಡಿಯನ್ಸ್ 19ನೇ ಆವೃತ್ತಿ ಐಪಿಎಲ್‌ನ 30ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು 99 ರನ್‌ಗಳಿಂದ ಮಣಿಸಿ, ಸೋಲಿನ ಕೊಂಡಿಯನ್ನು ಕಳಚಿದೆ. ಮುಂಬೈ ಇಂಡಿಯನ್ಸ್ ಈ ಲೀಗ್‌ನಲ್ಲಿ ಎರಡನೇ ಗೆಲುವು ದಾಖಲಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದ ಆರಂಭ ಕಳಪೆಯಾಗಿತ್ತು. ಆರಂಭಿಕರಾಗಿ ಆಡುವ ಅವಕಾಶ ಪಡೆದ ಡ್ಯಾನಿಶ್ ಮಾಲೆವಾರ್ ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಹಿಂದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ಕ್ವಿಂಟನ್ ಡಿಕಾಕ್ ಗುಜರಾತ್ ಟೈಟಾನ್ಸ್ ವಿರುದ್ಧ 13 ರನ್‌ಗಳಿಗೆ ಆಟ ಮುಗಿಸಿದರು. ಭರವಸೆಯ ಬ್ಯಾಟರ್ ಸೂರ್ಯಕುಮಾರ್ ಯಾದವ್ 15 ರನ್‌ಗಳಿಗೆ ಆಟ ಮುಗಿಸಿದರು.

ಪವರ್ ಪ್ಲೇನಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ನಮನ್ ಧೀರ್ ಹಾಗೂ ತಿಲಕ್ ವರ್ಮಾ ಆಧಾರವಾದರು. ಈ ಜೋಡಿ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ತಂಡದ ಮೊತ್ತವನ್ನು ಹೆಚ್ಚಿಸುತ್ತಾ ಸಾಗಿದರು. ಈ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿತು. ನಮನ್ ಧೀರ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 45 ರನ್ ಬಾರಿಸಿ ಮಿಂಚಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ತಿಲಕ್ ಶತಕ
ಭರವಸೆಯ ಮಧ್ಯಮ ಕ್ರಮಾಂಕದ ಆಟಗಾರ ತಿಲಕ್ ವರ್ಮಾ ಆರ್ಭಟಿಸಿದರು. ಇವರು 8 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 101 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 199 ರನ್ ಸೇರಿಸಿತು.
ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಕಳಪೆಯಾಗಿತ್ತು. ಸಾಯಿ ಸುದರ್ಶನ್ ಇನಿಂಗ್ಸ್‌ನ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಜಸ್ಪ್ರೀತ್ ಬುಮ್ರಾ ಅವರಿಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜೋಸ್ ಬಟ್ಲರ್ (5) ರನ್ ಕಲೆ ಹಾಕುವಲ್ಲಿ ಎಡವಿದರು. ನಾಯಕ ಶುಭಮನ್ ಗಿಲ್ 14 ರನ್‌ಗಳಿಗೆ ಆಟ ಮುಗಿಸಿದರು. ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ 26, ಶಾರೂಕ್ ಖಾನ್ 17, ಕಗಿಸೊ ರಬಾಡ 12 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಗುಜರಾತ್ ಟೈಟಾನ್ಸ್ 15.5 ಓವರ್‌ಗಳಲ್ಲಿ 100 ರನ್‌ಗೆ ಆಲೌಟ್ ಆಯಿತು.
ಯುವ ವೇಗದ ಬೌಲರ್ ಅಶ್ವನಿ ಕುಮಾರ್ 24 ರನ್ ನೀಡಿ 4 ವಿಕೆಟ್ ಪಡೆದರು. ಸ್ಪಿನ್ ಬೌಲರ್ ಮಿಚೆಲ್ ಸ್ಯಾಂಟ್ನರ್ 2 ವಿಕೆಟ್ ಕಬಳಿಸಿದರು.
ಮುಂಬೈಗೆ 7ನೇ ಸ್ಥಾನ
ಮುಂಬೈ 19ನೇ ಆವೃತ್ತಿಯ ಐಪಿಎಲ್‌ನಲ್ಲಿ ಎರಡನೇ ಗೆಲುವು ದಾಖಲಿಸುತ್ತಿದ್ದಂತೆ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಮುಂಬೈ ಆಡಿದ 6 ಪಂದ್ಯಗಳಲ್ಲಿ 2 ಜಯ, 4 ಸೋಲು ಕಂಡಿದ್ದು 4 ಅಂಕಗಳನ್ನು ಕಲೆ ಹಾಕಿದೆ. ಮುಂಬೈ ಇಂಡಿಯನ್ಸ್ ಇದೇ ಮೊದಲ ಬಾರಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಅಹಮದಾಬಾದ್‌ನಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications