ಕೊಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಇತಿಹಾಸದ ಮೂರನೇ ಅತ್ಯಂತ ಯಶಸ್ವಿ ತಂಡ. ಎರಡು ಬಾರಿ ಚಾಂಪಿಯನ್ ಎನಿಸಿಕೊಂಡಿರುವ ಕೆಕೆಆರ್ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದು. ಪ್ರತಿ ಆವೃತ್ತಿಯಲ್ಲಿಯೂ ಕೆಕೆಆರ್ ಅದ್ಭುತ ಪ್ರದರ್ಶನಗಳನ್ನು ನೀಡುಕೊಂಡು ಬರುತ್ತಿದ್ದು ಅನೇಕ ದಾಖಲೆಗಳನ್ನು ತನ್ನ ಹೆಸರಿನಲ್ಲಿ ಬರೆದಿದೆ. ಆದರೆ ಒಂದು ಕೆಟ್ಟ ದಾಖಲೆ ಪ್ರತಿ ಐಪಿಎಲ್ ಆವೃತ್ತಿಯಲ್ಲಿಯೂ ಕೆಕೆಆರ್ ತಂಡವನ್ನು ಕಾಡುತ್ತಿತ್ತು. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅದನ್ನು ತೊಡೆದು ಹಾಕುವಲ್ಲಿ ಯಶಸ್ವಿಯಾಗಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ವೆಂಕಟೇಶ್ ಐಯ್ಯರ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಅಮೋಘ ಶತಕ ಸಿಡಿಸಿದ್ದಾರೆ. ವೆಂಕಟೇಶ್ ಐಯ್ಯರ್ ಸಿಡಿಸಿದ ಈ ಶತಕ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಕಳೆದ 15 ವರ್ಷಗಳಲ್ಲಿಯೇ ಮೊದಲ ಶತಕವಾಗಿದೆ. ಈ ಮೂಲಕ ಕೆಕೆಆರ್ ಫ್ರಾಂಚೈಸಿಯ ಸುದೀರ್ಘ ಕಾಲದ ಶತಕದ ಬರವನ್ನು ನೀಗಿಸಿದ್ದಾರೆ ವೆಂಕಟೇಶ್ ಐಯ್ಯರ್.

ಅಂದ ಹಾಗೆ ಇದಕ್ಕೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಶತಕ ದಾಖಲಾಗಿದ್ದು ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಪ್ರಥಮ ಪಂದ್ಯದಲ್ಲಿ. 2008 ಏಪ್ರಿಲ್ 18ರಂದು ರಾಯಲ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಐಪಿಎಲ್‌ನ ಪ್ರಪ್ರಥಮ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಪರವಾಗಿ ಸೌರವ್ ಗಂಗೂಲಿ ಜೊತೆಗೆ ಆರಂಭಿಕನಾಗಿ ಕಣಕ್ಕಿಳಿದ ಬ್ರೆಂಡನ್ ಮೆಕ್ಕಲಮ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಅಜೇಯ ಶತಕ ಸಿಡಿಸಿದ್ದರು. ಕೇವಲ 73 ಎಸೆತಗಳಲ್ಲಿ 158 ರನ್ ಬಾರಿಸಿ ಐಪಿಎಲ್‌ಗೆ ಅಭೂತಪೂರ್ವ ಆರಂಭವನ್ನು ನೀಡಿದ್ದರು.
ಈ ಅವಧಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಅನೇಕ ಸ್ಟಾರ್ ಆಟಗಾರರು ಆಡಿದ್ದಾರೆ. ಅಲ್ಲದೆ ಎರಡು ಭಾರಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್‌ನ ಚಾಂಪಿಯನ್ ಪಟ್ಟಕ್ಕೆರಿದೆ. ಆದರೆ ವಿಪರ್ಯಾಸ ಎನ್ನುವಂತೆ ಒಮ್ಮೆಯೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಶತಕ ದಾಖಲಾಗಲೇ ಇಲ್ಲ. ಆದರೆ ಇದೀಗ ವೆಂಕಟೇಶ್ ಐಯ್ಯರ್ ಶತಕ ಸಿಡಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಬ್ಯಾಟಿಂಗ್‌ನಲ್ಲಿ ವೆಂಕಟೇಶ್ ಐಯ್ಯರ್ ಏಕಾಂಗಿ ಹೋರಾಟ ನಡೆಸಿದ್ದಾರೆ. ಆರಂಭಿಕ ವಿಕೆಟ್ ಶೀಘ್ರದಲ್ಲಿಯೇ ಕಳೆದುಕೊಂಡ ಬಳಿಕ ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ಐಯ್ಯರ್ ಸ್ಪೋಟಕ ಪ್ರದರ್ಶನ ನೀಡುತ್ತಾ ಸಾಗಿದರು. ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಅವರು ಭರ್ಜರಿ ಸಿಕ್ಸರ್ ಬೌಂಡರಿಗಳನ್ನು ಸಿಡಿಸುತ್ತಾ ಬೃಹತ್ ಮೊತ್ತದತ್ತ ಮುನ್ನುಗ್ಗಿಸಿದರು. ಕೇವಲ 51 ಎಸೆತಗಳನ್ನು ಎದುರಿಸಿದ ವೆಂಕಟೇಶ್ ಐಯ್ಯರ್ 104 ರನ್‌ಗಳಿಸಿ ವಿಕೆಟ್ ಕಳೆದುಕೊಂಡದ್ದಾರೆ. 6 ಬೌಂಡರಿ ಹಾಗೂ 9 ಭರ್ಜರಿ ಸಿಕ್ಸರ್‌ಗಳು ಈ ಇನ್ನಿಂಗ್ಸ್‌ನಲ್ಲಿ ಒಳಗೊಂಡಿದ್ದವು.
ಇನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ವೆಂಕಟೇಶ್ ಐಯ್ಯರ್ ಸಿಡಿಸಿದ ಸ್ಪೋಟಕ ಶತಕದ ನೆರವಿನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಬೃಹತ್ ಮೊತ್ತವನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ನಿಗದಿತ 20 ಓವರ್‌ಗಳಲ್ಲಿ ಕೆಕೆಆರ್ 6 ವಿಕೆಟ್ ಕಳೆದುಕೊಂಡಿದ್ದು 185 ರನ್‌ಗಳನ್ನು ಗಳಿಸಿದೆ. ವೆಂಕಟೇಶ್ ಐಯ್ಯರ್ ಹೊರತುಪಡಿಸಿ ಇತರ ಆಟಗಾರರಿಂದ ಹೇಳಿಕೊಳ್ಳುವಂತಾ ಪ್ರದರ್ಶನ ಬಾರದ ಕಾರಣ ಕೆಕೆಆರ್ ಮುಂಬೈಗೆ ಮತ್ತಷ್ಟು ಕಠಿಣ ಗುರಿ ನೀಡಲು ಕೆಕೆಆರ್ ವಿಫಲವಾಯಿತು.