ಆಶಸ್ ಸರಣಿಯ 4ನೇ ಪಂದ್ಯ ಮಳೆಯಿಂದಾಗಿ ಡ್ರಾ ಕಂಡಿದೆ. ಈ ಮೂಲಕ ಗೆಲುವಿನ ಸನಿಹದಲ್ಲಿದ್ದ ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತವುಂಟಾಗಿದ್ದು ಆಸ್ಟ್ರೇಲಿಯಾ ಸೋಲಿನ ದವಡೆಯಿಂದ ಅದೃಷ್ಟವಶಾತ್ ಪಾರಾಗಿದೆ. ಈ ಸಂದರ್ಭದಲ್ಲಿ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ತಂಡದ ಹಿರಿಯ ವೇಗಿ ಜೇಮ್ಸ್ ಆಂಡರ್ಸನ್ ವಿಚಾರವಾಗಿ ಕಟುಮಾತುಗಳನ್ನಾಡಿದ್ದು ಈ ಪಂದ್ಯದಲ್ಲಿ ಅವಕಾಶ ನೀಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಜೇಮ್ಸ್ ಆಂಡರ್ಸನ್ ಈ ಆಶಸ್ ಸರಣಿಯಲ್ಲಿ ಅಷ್ಟೇನೂ ಪರಿಣಾಮಕಾರಿಯಾಗಿರಲಿಲ್ಲ. ಹೀಗಾಗಿ ಮೊದಲ ಎರಡು ಟೆಸ್ಟ್ ಪಂದ್ಯಗಳ ಬಳಿಕ ಮೂರನೇ ಪಂದ್ಯದಲ್ಲಿ ಆಂಡರ್ಸನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಆ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ನಾಲ್ಕನೇ ಪಂದ್ಯದಲ್ಲಿ ಆಂಡರ್ಸನ್ ಮತ್ತೆ ಅವಕಾಶ ಗಿಟ್ಟಿಸಿಕೊಂಡರು. ಇದಕ್ಕೆ ಮೈಕಲ್ ವಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಂಡರ್ಸನ್ ಬದಲಿಗೆ ಜೋಶ್ ಟಂಗ್‌ಗೆ ಅವಕಾಶ ನೀಡಬೇಕಾಗಿತ್ತು ಎಂದಿದ್ದಾರೆ ಮೈಕಲ್ ವಾನ್.

"ಜೇಮ್ಸ್ ಆಂಡರ್ಸನ್ ಕ್ರಿಕೆಟ್‌ನ ದಿಗ್ಗಜ ಆಟಗಾರ ಹಾಗಾಗಿ ಭಾವನಾತ್ಮಕವಾಗಿ ಅವರು ಆಡುಬೇಕು ಎಂದು ಎಲ್ಲರೂ ಬಯಸುತ್ತಾರೆ. ಆದರೆ ಅದು ಇಂಗ್ಲೆಂಡ್ ತಂಡಕ್ಕೆ ಮುಳುವಾಗಬಹುದು. ಜೋಶ್ ಟಂಗ್ ಒಂದು ಪಂದ್ಯದಲಲ್ಇ ಆಡಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ಆಸ್ಟ್ರೇಲಿಯನ್ನರು ಆತನನ್ನು ಎದುರಿಸಲು ಇಷ್ಟ ಪಡುವುದಿಲ್ಲ ಎನ್ನುವುದು ನನಗೆ ಗೊತ್ತಿದೆ" ಎಂದು ಹೇಳಿಕೆ ನೀಡಿದ್ದಾರೆ ಮೈಕಲ್ ವಾನ್.
ಆಶಸ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 317 ರನ್‌ಗಳನ್ನು ಗಳಿಸಿತ್ತು. ನಂತರ ಇಂಗ್ಲೆಂಡ್ ತಂಡ ಬ್ಯಾಸ್‌ಬಾಲ್ ಶೈಲಿಯಲ್ಲಿ ಬ್ಯಾಟಿಂಗ್ ನಡೆಸಿ 592 ರನ್‌ಗಳನ್ನು ಗಳಿಸಿ ಭರ್ಜರಿ ಮುನ್ನಡೆಯೊಂದಿಗೆ ಮೊದಲ ಇನ್ನಿಂಗ್ಸ್ ಮುಕ್ತಾಯಗೊಳಿಸಿತ್ತು. ಆಸ್ಟ್ರೇಲಿಯಾ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 214 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಬಳಿಕ ಅಂತಿಮ ಎರಡು ದಿಮಗಳ ಕಾಲ ಭಾರೀ ಮಳೆ ಸುರಿದ ಪರಿಣಾಮ ಪಂದ್ಯದ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲ. ಆಶಸ್ ಸರಣಿಯ ಕೊನೆಯ ಪಂದ್ಯ ಜುಲೈ 27 ಗುರುವಾರದಿಂದ ಆರಂಭವಾಗಲಿದೆ.
ಇಂಗ್ಲೆಂಡ್ ಆಡುವ ಬಳಗ: ಬೆನ್ ಡಕೆಟ್, ಝಾಕ್ ಕ್ರಾಲಿ, ಮೊಯಿನ್ ಅಲಿ, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್
ಬೆಂಚ್: ಆಲಿ ರಾಬಿನ್ಸನ್, ಡೇನಿಯಲ್ ಲಾರೆನ್ಸ್, ಜೋಶ್ ಟಂಗ್
ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್
ಬೆಂಚ್: ಟಾಡ್ ಮರ್ಫಿ, ಸ್ಕಾಟ್ ಬೋಲ್ಯಾಂಡ್, ಮಾರ್ಕಸ್ ಹ್ಯಾರಿಸ್, ಮೈಕೆಲ್ ನೆಸರ್, ಜೋಶ್ ಇಂಗ್ಲಿಸ್