ಗುಜರಾತ್ ಟೈಟಾನ್ಸ್ ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ತನ್ನ ಸ್ಥಿರ ಪ್ರದರ್ಶನವನ್ನು ಮುಂದುವರೆಸಿದೆ. 18ನೇ ಆವೃತ್ತಿಯ ಐಪಿಎಲ್‌ನ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ಅಬ್ಬರಿಸಿದೆ. ಏಳು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದ ಟೈಟಾನ್ಸ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆ ಒಂದು ತಪ್ಪು ಬಹುವಾಗಿ ಕಾಡಿದೆ.
ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಸ್ಟಾರ್ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲರಾದರು. ಈ ತಂಡದ ಪರ ಯಾವೊಬ್ಬ ಬ್ಯಾಟರ್ ಅರ್ಧಶತಕದ ಮಾರ್ಕ್ ದಾಟಲೇ ಇಲ್ಲ. ಆದರೂ ಸಹ ಡೆಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಸೇರಿಸಿತು. ಡೆಲ್ಲಿ ತಂಡದ ಪರ ಗರಿಷ್ಠ ಸ್ಕೋರ್‌ರ ಎಂಬ ಹೆಗ್ಗಳಿಕೆ ಅಕ್ಷರ್ ಪಟೇಲ್ ಅವರದ್ದಾಯಿತು. ಇವರು 39 ರನ್ ಸಿಡಿಸಿದರೆ, ಭರವಸೆಯ ಬ್ಯಾಟರ್ ಆಶುತೋಷ್ ಶರ್ಮಾ 37 ರನ್ ಬಾರಿಸಿ ತಂಡದ ಮೊತ್ತ ಹಿಗ್ಗಿಸಿದರು.

ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡದ ಆರಂಭ ಕಳಪೆಯಾಗಿತ್ತು. ನಾಯಕ ಶುಭಮನ್ ಗಿಲ್ ಸಿಂಗಲ್ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಸಾಯಿ ಸುದರ್ಶನ್ ಹಾಗೂ ಜೋಸ್ ಬಟ್ಲರ್ ಜೋಡಿ 60 ರನ್‌ಗಳ ಜತೆಯಾಟವನ್ನು ನೀಡಿತು. ಈ ಲೀಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಸುದರ್ಶನ್ 36 ರನ್ ಬಾರಿಸಿದರು. ಆದರೆ ಮೂರನೇ ವಿಕೆಟ್‌ಗೆ ಬಟ್ಲರ್ ಹಾಗೂ ಶೆರ್ಫೇನ್ ರುದರ್ಫೋರ್ಡ್ ಜೋಡಿ ಶತಕದ ಜೊತೆಯಾಟವನ್ನು ನೀಡಿ ತಂಡದ ಗತಿಯನ್ನು ಬದಲಿಸಿತು. ಅಲ್ಲದೆ ಶತಕದ ಜೊತೆಯಾಟವನ್ನು ನೀಡಿತು. ಆದರೆ ಈ ಜೊತೆಯಾಟ ಪಂದ್ಯದ ತಿರುವ ಅಲ್ಲವೇ ಅಲ್ಲ.
ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಬ್ಯಾಕ್ ಟು ಬ್ಯಾಕ್ ಯಾರ್ಕ್ ಹಾಕಿ ಮಿಂಚಿದ್ದ ಮಿಚೆಲ್ ಸ್ಟಾರ್ಕ್, ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೊಂಚ ದುಬಾರಿಯಾದರು. ಇವರ ವೇಗದ ಎಸೆತಗಳಲಿಗೆ ಜೋಸ್ ಬಟ್ಲರ್ ಭರ್ಜರಿ ಉತ್ತರ ನೀಡಿದರು. ಆದರೆ ಸ್ಟಾರ್ಕ್ ಎಸೆದ ಆ ಒಂದು ಓವರ್ ಗುಜರಾತ್ ಮೇಲಿನಿಂದ ಒತ್ತಡವನ್ನೇ ಕಡಿಮೆ ಮಾಡಿತು.
ಇನಿಂಗ್ಸ್‌ನ 15ನೇ ಓವರ್ ಮಾಡುವ ಜವಾಬ್ದಾರಿ ಮಿಚೆಲ್ ಸ್ಟಾರ್ಕ್ ಹೊತ್ತುಕೊಂಡರು. ಈ ಓವರ್‌ನಲ್ಲಿ ಡೆಲ್ಲಿ ಫ್ಯಾನ್ಸ್ ಮ್ಯಾಜಿಕ್ ನೋಡಲು ಬಯಸಿದ್ದರು. ಆದರೆ ಆಗಿದ್ದೇ ಬೇರೆ. 15ನೇ ಓವರ್ ಆರಂಭಕ್ಕು ಮುನ್ನ ಟೈಟಾನ್ಸ್ ಗೆಲುವಿಗೆ 36 ಎಸೆತಗಳಲ್ಲಿ 66 ರನ್ ಅವಶ್ಯಕತೆ ಇತ್ತು. ಈ ಒತ್ತಡ ರಿಲೀಸ್ ಆಗಬೇಕು ಎಂದರೆ ಒಂದು ಬಿಗ್ ಓವರ್ ಬೇಕಿತ್ತು. ಇದನ್ನು ಮಾಡುವ ಕೆಲಸವನ್ನು ಜೋಸ್ ಬಟ್ಲರ್ ತಮ್ಮ ಹೆಗಲ ಮೇಲೆ ಹೊತ್ತುಕೊಂಡರು. ಮಿಚೆಲ್ ಸ್ಟಾರ್ಕ್ ಎಸೆದ 15ನೇ ಓವರ್‌ನಲ್ಲಿ 5 ಬೌಂಡರಿ ಬಾರಿಸಿದ ಬಟ್ಲರ್ ಪಂದ್ಯದ ಗತಿಯನ್ನೇ ಬದಲಿಸಿದರು. ಈ ಓವರ್ ಅಂತ್ಯದಲ್ಲಿ ಗುಜರಾತ್ ಗೆಲುವಿಗೆ 30 ಎಸೆತಗಳಲ್ಲಿ 46 ರನ್ ಅವಶ್ಯಕತೆ ಇತ್ತು.
ಟಿ20 ಕ್ರಿಕೆಟ್ ಬಾದ್‌ಷಾ ರೀತಿ ಕಾಣಿಸಿಕೊಳ್ಳುತ್ತಿರುವ ಬಟ್ಲರ್ ಈ ಗುರಿಯನ್ನು ಬೆನ್ನಟ್ಟಲು ತಂಡಕ್ಕೆ ನೆರವಾದರು. ಅಲ್ಲದೆ ಗೆಲುವಿನಲ್ಲಿ ಹೀರೋ ರೀತಿ ಮಿಂಚಿದರು.