
ಕೊರೊನಾ ವೈರಸ್‌ನ ಕಾರಣದಿಂದಾಗಿ ಕ್ರೀಡಾಲೋಕ ಸಂಪೂರ್ಣವಾಗಿ ನಿಂತುಹೋಗಿತ್ತು. ಈಗ ಮತ್ತೆ ಕ್ರಿಕೆಟ್ ಆರಂಭವಾಗಲು ಸಜ್ಜುಗೊಳ್ಳುತ್ತಿದೆ. ಪಾಕಿಸ್ತಾನ ಕೂಡ ಇಂಗ್ಲೆಂಡ್ ಪ್ರವಾಸವನ್ನು ಕೈಗೊಳ್ಳಲು ಸಿದ್ಧತೆಗಳನ್ನು ನಡೆಸುತ್ತಿದೆ. ಈ ಮಧ್ಯೆ ಪಾಕಿಸ್ತಾನದ ಇಬ್ಬರು ಸ್ಟಾರ್ ಆಟಗಾರರು ಇಂಗ್ಲೆಂಡ್ ಪ್ರವಾಸದಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನುವುದು ಬೆಳಕಿಗೆ ಬಂದಿದೆ.
ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ವೇಗಿ ಮೊಹಮ್ಮದ್ ಆಮಿರ್ ಮತ್ತು ಆಲ್‌ರೌಂಡರ್ ಹಾರಿಸ್ ಸೋಹೈಲ್ ನಕಾರ ವ್ಯಕ್ತಪಡಿಸಿದ್ದಾರೆ. ಇಬ್ಬರೂ ಪ್ರವಾಸಕ್ಕೆ ಹಿಂದೆ ಸರಿಯಲು ವೈಯಕ್ತಿಕ ಕಾರಣವನ್ನು ನೀಡಿದ್ದಾರೆ.
ಪಿಸಿಬಿ ಈ ಬಗ್ಗೆ ಪ್ರಕಟಣೆಯನ್ನು ಹೊರಡಿಸಿದೆ.' ಮೊಹಮದ್ ಆಮಿರ್ ಆಗಸ್ಟ್ ತಿಂಗಳಲ್ಲಿ ಎರಡನೇ ಮಗುವಿನ ತಂದೆಯಾಗಲಿದ್ದಾರೆ. ಹಾಗಾಗಿ ಪ್ರವಾಸಕ್ಕೆ ಬರುವುದರಿಂದ ಹಿಂದೆಕ್ಕೆ ಸರಿಯುತ್ತಿದ್ದಾರೆ. ಇನ್ನು ಹಾರಿಸ್ ಕೌಟುಂಬಿಕ ಕಾರಣದಿಂದಾಗಿ ಈ ಪ್ರವಾಸದಲ್ಲಿ ಪಾಲ್ಗೊಳ್ಳುತ್ತಿಲ್ಲ' ಎಂದು ಪಿಸಿಬಿ ತಿಳಿಸಿದೆ.
ಈ ಪ್ರವಾಸಕ್ಕಾಗಿ ಪಾಕಿಸ್ತಾನ ಇಂಗ್ಲೆಂಡ್‌ಗೆ 28 ಆಟಗಾರರು ಮತ್ತು 14 ಇತರೆ ಸಿಬ್ಬಂದಿಗಳನ್ನು ಕಳುಹಿಸಿಕೊಡಲಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಮೂರು ಟೆಸ್ಟ್ ಪಂದ್ಯ ಹಾಗೂ ಮೂರು ಟಿ20 ಪಂದ್ಯಗಳ ಸರಣಿ ಎರಡು ದೇಶಗಳ ನಡುವೆ ನಡೆಯಲಿದೆ.
ಕೊರೊನಾ ವೈರಸ್ ಪ್ರಕರಣ ಪಾಕಿಸ್ತಾನದಲ್ಲಿ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ಅಟಗಾರರ ತರಬೇತಿ ಶಿಬಿರವನ್ನು ಪಿಸಿಬಿ ರದ್ದುಗೊಳಿಸಿತ್ತು. ಇದರ ಬದಲಾಗಿ ನಿಗದಿಗಿಂತ ಒಂದು ತಿಂಗಳು ಮುಂಚಿತವಾಗಿ ಇಂಗ್ಲೆಂಡ್‌ಗೆ ತೆರಳಿ ಅಲ್ಲೇ ಅಭ್ಯಾಸವನ್ನು ನಡೆಸಲು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಜೊತೆಗೆ ಮಾತುಕತೆಯನ್ನು ನಡೆಸಿದೆ. ಹೀಗಾಗಿ ಇದೇ ತಿಂಗಳಲ್ಲಿ ಪಾಕಿಸ್ತಾನ ಇಂಗ್ಲೆಂಡ್ ಪ್ರವಾಸವನ್ನು ಆರಂಭಿಸಲಿದ್ದಾರೆ.