
ಪಾಕಿಸ್ತಾನದ ಹಿರಿಯ ವೇಗದ ಬೌಲರ್ ವಹಾಬ್ ರಿಯಾಜ್ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವೇಗಿ ಮೊಹಮ್ಮದ್ ಆಮಿರ್ ನಿವೃತ್ತಿ ವಾಪಾಸ್ ಪಡೆಯುವ ಬಗ್ಗೆ ಸುಳಿವು ನೀಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಮಿರ್ ಮತ್ತೆ ವಾಪಾಸಾಗುವ ಸಾಧ್ಯತೆಯಿದೆ ಎಂದಿದ್ದು ಇದರಿಂದಾಗಿ ಪಾಕಿಸ್ತಾನದ ವೇಗದ ಬೌಲಿಂಗ್ ವಿಭಾಗ ಮತ್ತಷ್ಟು ತೀಕ್ಷ್ಣಗೊಳ್ಳಲಿದೆ ಎಂದು ರಿಯಾಜ್ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಆಮಿರ್ ಕಳೆದ ಎರಡು ವರ್ಷಗಳ ಹಿಂದೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಟಿ20 ಹಾಗೂ ಏಕದಿನ ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ್ದರು. ಆದರೆ ಅದಾದ ಬಳಿಕವೂ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಮಿರ್ ಸಕ್ರಿಯವಾಗಿ ಭಾಗಿಯಾಗುತ್ತಿದ್ದಾರೆ. ಇನ್ನು ಆಮಿರ್ 2019ರ ಜುಲೈ ತಿಂಗಳಿನಲ್ಲಿಯೇ ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿದ್ದರು.
2020ರ ಡಿಸೆಂಬರ್ ತಿಂಗಲಿನಲ್ಲಿ ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಆಮಿರ್ 28ನೇ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಗೆ ನಿವೃತ್ತಿ ಘೋಷಣೆ ಮಾಡುವ ಮೂಲಕ ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೆ ದೂಡಿದ್ದರು. ಈ ಸಂದರ್ಭದಲ್ಲಿ ಅವರು ಪಾಕಿಸ್ತಾನ ಕ್ರಿಕೆಟ್ ತಂಡದ ಮ್ಯಾನೇಜ್‌ಮೆಂಟ್ ತಮ್ಮನ್ನು ತುಚ್ಚವಾಗಿ ನೋಡಿಕೊಂಡಿತು ಎಂದು ಗಂಭೀರ ಆರೋಪವನ್ನು ಮಾಡಿ ಇದೇ ಕಾರಣದಿಂದಾಗಿ ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುತ್ತಿರುವುದಾಗಿ ತಿಳಿಸಿದ್ದರು.
ಇದೀಗ ಪಾಕಿಸ್ತಾನದ ವಾಹಬ್ ರಿಯಾಜ್ ನೀಡಿರುವ ಹೇಳಿಕೆ ಕುತೂಹಲ ಮೂಡಿಸಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಆಮಿರ್ ಮತ್ತೆ ವಾಪಾಸಾಗುವ ಸಾಧ್ಯತೆಯಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಅನುಭವಿ ವೇಗಿ ಪಾಕ್ ತಂಡದಲ್ಲಿ ಶಾಹೀನ್ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ಜೊತೆಗೆ ಮೂರನೇ ವೇಗಿಯಾಗಿ ಆಮಿರ್ ಸೇರ್ಪಡೆಯಾಗಬಹುದು ಎಂದಿದ್ದಾರೆ.
"ಮೊಹಮ್ಮದ್ ಆಮಿರ್ ಮತ್ತೊಮ್ಮೆ ಪಾಕಿಸ್ತಾನ ತಂಡದ ಪರವಾಗಿ ಆಡುವುದನ್ನು ನೋಡುವ ಸಾಧ್ಯತೆಯಿದೆ. ಈಗಾಗಲೇ ಶಾಹೀನ್ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್ ಇದ್ದಾರೆ. ಆದರೆ ಮೂರನೇ ವೇಗಿಯ ಸ್ಥಾನ ಖಾಲಿಯಿದೆ. ಹಸನ್ ಅಲಿ, ಶಹ್ಜವಾನ್ ದಹಾನಿ, ನಸೀಮ್ ಶಾ ಮತ್ತು ಮೊಹಮ್ಮದ್ ವಾಸಿಮ್ ಅವರಂತಾ ಆಟಗಾರರು ಈ ಸ್ಥಾನಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಈಗ ಆಮಿರ್ ಕೂಡ ಕಮ್‌ಬ್ಯಾಕ್ ಮಾಡುವ ಸಾಧ್ಯತೆಯಿದೆ" ಎಂದಿದ್ದಾರೆ ವಹಾಬ್ ರಿಯಾಜ್.
ಪಾಕ್ ಮಂಡಳಿಯಲ್ಲಿ ಭಾರೀ ಬದಲಾವಣೆ: ಇನ್ನು ಈ ತಿಂಗಳು ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಭಾರೀ ಬದಲಾವಣೆ ಆದ ಬಳಿಕ ವಹಾಬ್ ರಿಯಾಜ್ ಈ ಹೇಳಿಕೆ ನೀಡಿದ್ದಾರೆ. ರಮೀಜ್ ರಾಜಾ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮ್ಯಾನೇಜ್‌ಮೆಂಟನ್ನು ವಿಸರ್ಜಿಸಿದ ಪಾಕಿಸ್ತಾನ ಸರ್ಕಾರ ಮಾಜಿ ಮುಖ್ಯಸ್ಥನಾಗಿದ್ದ ನಜಮ್ ಸೇಥಿ ನೇಥೃತ್ವದ 14 ಸದಸ್ಯರ ಸಮಿತಿಯನ್ನು ಕಳೆದವಾರ ನೇಮಿಸಿದೆ. ಈ ಸಮಿತಿ ಮಾಜಿ ನಾಯಕ ಶಾಹಿದ್ ಅಫ್ರಿದಿಯನ್ನು ಮಧ್ಯಂತರ ಮುಖ್ಯ ಆಯ್ಕೆಗಾರನನ್ನಾಗಿ ನೇಮಿಸುವ ಮೂಲಕ ಮೊದಲ ಮಹತ್ವದ ನಿರ್ಧಾರ ತೆಗೆದುಕೊಂಡಿತ್ತು.