ಒಂದೂ ಪಂದ್ಯ ಗೆಲ್ಲದೆ ವಿಶ್ವಕಪ್‌ನಿಂದ ಹೊರಬಿದ್ದ ಬೆನ್ನಲ್ಲೇ ಅಫ್ಘಾನಿಸ್ತಾನಕ್ಕೆ ಮತ್ತೊಂದು ಆಘಾತ!

ಟಿ20 ವಿಶ್ವಕಪ್‌ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನದ ವಿರುದ್ಧ ನಾಲ್ಕು ರನ್‌ಗಳ ಅಂತರದ ರೋಚಕ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಆತಿಥೇಯ ಆಸ್ಟ್ರೇಲಿಯಾ ತಂಡ ಸೆಮಿಫೈನಲ್‌ಗೇರುವ ಕನಸನ್ನು ಜೀವಂತವಾಗಿಸಿಕೊಂಡಿದೆ. ಈ ಮಧ್ಯೆ ಗೆಲುವಿನ ಸನಿಹದವರೆಗೂ ತಲುಪಿದ್ದ ಅಫ್ಘಾನಿಸ್ತಾನ ತಂಡ ಅಂತಿಮ ಹಂತದಲ್ಲಿ ಎಡವಿದ್ದು ನಿರಾಸೆ ಅನುಭವಿಸಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ತಂಡ ಒಂದೂ ಗೆಲುವು ಕಾಣದೆ ಟೂರ್ನಿಯಿಂದ ಹೊರಬಿದ್ದಂತಾಗಿದೆ. ಈ ನಿರ್ಗಮನದ ಬಳಿಕ ಅಫ್ಘಾನಿಸ್ತಾನ ತಂಡದ ನಾಯಕ ಮೊಹಮ್ಮದ್ ನಬಿ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ವಿಶ್ವಕಪ್‌ನಲ್ಲಿ ಅನುಭವಿಸಿದ ಹಿನ್ನಡೆಯ ಬಳಿಕ ಅಫ್ಘಾನಿಸ್ತಾನ ತಂಡದ ನಾಯಕತ್ವದಿಂದ ಮೊಹಮ್ಮದ್ ನಬಿ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆಯನ್ನು ಕೂಡ ನೀಡಿದ್ದು ನಾಯಕತ್ವ ತ್ಯಜಿಸುವ ನಿರ್ಧಾರವನ್ನು ಪ್ರಕಟಿಸಿದ್ದಾರೆ. ತಂಡದಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಬಾರದಿರುವುದರಿಂದಾಗಿ ತಾವು ಕೂಡ ಅಭಿಮಾನಿಗಳಷ್ಟೇ ನಿರಾಸೆಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ಒಮ್ಮತ ಇರಲಿಲ್ಲ ಎಂದ ನಬಿ
ಇನ್ನು ಮೊಹಮ್ಮದ್ ನಬಿ ತಮ್ಮ ನಿವೃತ್ತಿಯ ಪ್ರಕಟಣೆಯಲ್ಲಿ ತಂಡದ ಆಯ್ಕೆಯ ವಿಚಾರವಾಗಿ ನಾಯಕ ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆ ಸಮಿತಿಯ ಮಧ್ಯೆ ಒಮ್ಮತಗಳು ಇರಲಿಲ್ಲ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ. ಇದು ಕೂಡ ವಿಶ್ವಕಪ್‌ನಂತಾ ವೇದಿಕೆಯಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗದಿರಲು ಕಾರಣವಾಗಿದೆ ಎಂಬರ್ಥದಲ್ಲಿ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ ಮೊಹಮ್ಮದ್ ನಬಿ.
ಈ ಎಲ್ಲಾ ಕಾರಣಗಳಿಂದಾಗಿ ತಾನು ತಕ್ಷಣದಿಂದಲೇ ಜಾರಿಯಾಗುವಂತೆ ನಾಯಕತ್ವದಿಂದ ಕೆಳಗಿಳಿಯುತ್ತಿದ್ದು ತಂಡ ಹಾಗೂ ಮ್ಯಾನೇಜ್‌ಮೆಂಟ್ ಬಯಸಿದರೆ ಆಟಗಾರನಾಗಿ ದೇಶವನ್ನು ಪ್ರತಿನಿಧಿಸಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ.

ಬೆಂಬಲಿಸಿದವರಿಗೆ ಧನ್ಯವಾದ
ಇನ್ನು ಈ ಸಂದರ್ಭದಲ್ಲಿ ಮಳೆ ಬಂದು ಪಂದ್ಯಗಳಿಗೆ ಅಡ್ಡಿಯುಂಟು ಮಾಡಿದ್ದರೂ ಮೈದಾನಕ್ಕೆ ಆಗಮಿಸಿ ಬೆಂಬಲವನ್ನು ನಿಡಿದ್ದ ಅಭಿಮಾನಿಗಳಿಗೆ ಹಾಗೂ ವಿಶ್ವಾದ್ಯಂತ ಪ್ರೀತಿ ತೋರಿಸಿದ ಎಲ್ಲಾ ಅಭಿಮಾನಿಗಳಿಗೂ ಹೃದಯಂತರಾಳದಿಂದ ಧನ್ಯವಾದವನ್ನು ತಿಳಿಸುತ್ತಿದ್ದೇನೆ ಎಂದು ಮೊಹಮ್ಮದ್ ನಬಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪತ್ರದಲ್ಲಿ ತಿಳಿಸಿದ್ದಾರೆ.

ನಾಯಕನಾಗಿ ಮೊಹಮ್ಮದ್ ನಬಿ
ಮೊಹಮ್ಮದ್ ನಬಿ 2013ರಲ್ಲಿ ಮೊದಲ ಬಾರಿಗೆ ಅಫ್ಘಾನಿಸ್ತಾನ ತಂಡದ ನಾಯಕತ್ವ ವಹಿಸಿಕೊಂಡಿದ್ದು 2015ರವರೆಗೆ ತಂಡವನ್ನು ಮುನ್ನಡೆಸಿದ್ದರು. ನಬಿ ನಾಯಕತ್ವದಲ್ಲಿ ಅಫ್ಘಾನಿಸ್ತಾನ ತಂಡ 13 ಏಕದಿನ ಹಾಗೂ 16 ಟಿ20 ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಇನ್ನು ನಾಯಕನಾಗಿ ಆಡಿದ 28 ಏಕದಿನ ಪಂದ್ಯಗಳಲ್ಲಿ 601 ರನ್‌ಗಳಿಸಿದ್ದು 35 ಟಿ20 ಪಂದ್ಯಗಳಲ್ಲಿ 422 ರನ್‌ಗಳನ್ನು ಗಳಿಸಿದ್ದಾರೆ. ಅಫ್ಘಾನಿಸ್ತಾನ ತಂಡದ ನಾಯಕನಾಗಿ ನಬಿ 47 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.

ರೋಚಕ ಹೋರಾಟ ನಡೆಸಿದ ಅಫ್ಘಾನಿಸ್ತಾನ
ಟಿ20 ವಿಶ್ವಕಪ್‌ನಲ್ಲಿ ಶುಕ್ರವಾರ ಆಸ್ಟ್ರೇಲಿಯಾಗೆ ನಿರ್ಣಾಯಕವಾಗಿದ್ದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಸೋಲಿನ ಅಂಚಿಗೆ ತಲುಪಿ ಕಡೆಗೂ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಆಲ್‌ರೌಂಡರ್ ರಶೀದ್ ಖಾನ್ ಅಂತಿಮ ಹಂತದಲ್ಲಿ ಅದ್ಭುತ ಹೋರಾಟವನ್ನು ಪ್ರದರ್ಶಿಸಿದ್ದು ತಂಡವನ್ನ ಗೆಲುವಿನ ಸನಿಹಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು ಕೂಡ ಗೆಲುವಿನ ದಡ ದಾಟಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂತಿಮ ಹಂತದಲ್ಲಿ ಆಸ್ಟ್ರೇಲಿಯಾ ತಂಡ ಗೆಲುವಿನ ನಗೆ ಬೀರುವಲ್ಲಿ ಯಶಸ್ವಿಯಾಯಿತು.
ಆಸ್ಟ್ರೇಲಿಯಾ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿತ್ತು. ಸೆಮಿಫೈನಲ್ ಹಂತಕ್ಕೇರುವ ಸ್ಪರ್ಧೆಯಲ್ಲಿ ಮುಂದುವರಿಯಬೇಕಾದರೆ ಆಸ್ಟ್ರೇಲಿಯಾ ತಂಡಕ್ಕೆ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿತ್ತು. ತೀವ್ರ ಪೈಪೋಟಿಯನ್ನು ನಡೆಸಿದ ಬಳಿಕ ಆಸಿಸ್ ಪಡೆ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದು ಅಫ್ಘಾನಿಸ್ತಾನ ತಂಡ ಒಂದೂ ಗೆಲುವು ಕಾಣದೆ ನಿರಾಸೆ ಅನುಭವಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications