ಇಂಥವರು ಭಾರತೀಯರೇ ಅಲ್ಲ, ಅವರು ಅತ್ತರೂ ನಕ್ಕರೂ ನಾನು ತಲೆ ಕೆಡಿಸಿಕೊಳ್ಳಲ್ಲ: ಶಮಿ ಕಿಡಿ

ಕ್ರಿಕೆಟಿಗರೆಂದ ಮೇಲೆ ಏಳುಬೀಳುಗಳು ಸಹಜ, ಅದರಲ್ಲಿಯೂ ಭಾರತದಲ್ಲಿ ಓರ್ವ ಕ್ರಿಕೆಟಿಗನ್ನು ಗೌರವಿಸುವಷ್ಟು, ಆರಾಧಿಸುವಷ್ಟು ಪಕ್ಕಾ ಅಭಿಮಾನಿಗಳು ಬೇರೆ ಯಾವುದೇ ದೇಶದಲ್ಲಿಯೂ ಕೂಡ ಇಲ್ಲ ಎಂದೇ ಹೇಳಬಹುದು. ಕೇವಲ ಭಾರತೀಯ ಕ್ರಿಕೆಟಿಗರು ಮಾತ್ರವಲ್ಲದೇ ವಿದೇಶಿ ಕ್ರಿಕೆಟಿಗರಿಗೂ ಸಹ ಭಾರತ ನೆಲದಲ್ಲಿ ಅಪಾರ ಗೌರವ ಮತ್ತು ಪ್ರೀತಿ ದೊರಕಿದೆ. ಹೌದು, ಎಬಿ ಡಿವಿಲಿಯರ್ಸ್ ಹಾಗೂ ಡೇವಿಡ್ ವಾರ್ನರ್ ರೀತಿಯ ವಿದೇಶಿ ಆಟಗಾರರಿಗೆ ವಿಶೇಷವಾದ ಪ್ರೀತಿ ಹಾಗೂ ಗೌರವ ನೀಡಿರುವ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭಾರತೀಯ ಕ್ರಿಕೆಟಿಗರಿಗರೆಂದರೆ ಇದಕ್ಕಿಂತ ಹೆಚ್ಚಿನ ಅಭಿಮಾನವನ್ನು ಹೊಂದಿದ್ದಾರೆ. ಹೀಗಿರುವ ಕೆಲ ಕ್ರಿಕೆಟ್ ಅಭಿಮಾನಿಗಳು ತಮ್ಮದೇ ದೇಶದ ಆಟಗಾರ ಕಳಪೆ ಪ್ರದರ್ಶನ ನೀಡಿದರೆ ಸಾಮಾಜಿಕ ಜಾಲತಾಣದಲದಲ್ಲಿ ಆತನ ವಿರುದ್ಧ ಕಿಡಿಕಾರುವುದು ಸಾಮಾನ್ಯ. ಅದರಲ್ಲಿಯೂ ವಿಶ್ವಕಪ್ ಟೂರ್ನಿಯ ಮಹತ್ವದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡುವ ಆಟಗಾರರ ವಿರುದ್ಧ ಕ್ರಿಕೆಟ್ ಅಭಿಮಾನಿಗಳ ಆಕ್ರೋಶ ತುಸು ಹೆಚ್ಚೇ ಇರುತ್ತದೆ ಎಂದು ಹೇಳಬಹುದು.
ಇನ್ನು ಬದ್ಧ ವೈರಿಗಳ ಕಾದಾಟ ಎಂದೇ ಖ್ಯಾತಿಯನ್ನು ಪಡೆದಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡುವ ಆಟಗಾರರ ವಿರುದ್ಧ ತೀರ ದೊಡ್ಡ ಮಟ್ಟದ ಆಕ್ರೋಶ ಹಾಗೂ ನಿಂದನೆಗಳು ವ್ಯಕ್ತವಾಗಿರುವ ಹಲವಾರು ಘಟನೆಗಳನ್ನು ನಾವು ನೀವೆಲ್ಲಾ ನೋಡಿದ್ದೇವೆ. ಅದೇ ರೀತಿ ಕಳೆದ ವರ್ಷ ಯುಎಇಯಲ್ಲಿ ನಡೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರಮುಖ ಬೌಲರ್ ಮೊಹಮ್ಮದ್ ಶಮಿ ಕಳಪೆ ಪ್ರದರ್ಶನ ನೀಡಿ ಭಾರೀ ಟೀಕೆಗೆ ಒಳಗಾಗಿದ್ದರು. ಹೌದು, ಮೊಹಮ್ಮದ್ ಶಮಿ ಕಳೆದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ್ದರು. ಪಂದ್ಯದಲ್ಲಿ ಒಟ್ಟು 3.5 ಓವರ್ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಶಮಿ 11.22ರ ದುಬಾರಿ ಎಕಾನಮಿಯಲ್ಲಿ 43 ರನ್ ನೀಡಿ ಯಾವುದೇ ವಿಕೆಟ್ ಪಡೆಯದೇ ಮಂಕಾಗಿದ್ದರು. ಇನ್ನು ಆ ಪಂದ್ಯದಲ್ಲಿ ಟೀಮ್ ಇಂಡಿಯಾದ ಇತರೆ ಬೌಲರ್‌ಗಳಾದ ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಮತ್ತು ರವೀಂದ್ರ ಜಡೇಜಾ ಕೂಡ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು.
ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿ 7 ವಿಕೆಟ್ ನಷ್ಟಕ್ಕೆ 151 ರನ್ ಕಲೆಹಾಕಿದ್ದ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಯಾವುದೇ ವಿಕೆಟ್ ನಷ್ಟವಿಲ್ಲದೇ 17.5 ಓವರ್‌ಗಳಲ್ಲಿ 152 ರನ್ ಬಾರಿಸಿ ಅದೇ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಭಾರತದ ವಿರುದ್ಧ ವಿಜಯ ಪತಾಕೆಯನ್ನು ಹಾರಿಸಿತ್ತು. ಹೀಗೆ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಹೊಂದಿದ್ದ ವಿಶೇಷ ದಾಖಲೆಯ ಸರಪಳಿಗೆ ಬ್ರೇಕ್ ಬಿದ್ದಿತ್ತು. ಟೀಮ್ ಇಂಡಿಯಾ ಬೌಲಿಂಗ್ ವಿಭಾಗದ ವಿಫಲತೆಯಿಂದ ಈ ಸೋಲು ಸಂಭವಿಸಿದೆ ಎಂದು ಆರೋಪಿಸಲು ಶುರುಮಾಡಿದ ನೆಟ್ಟಿಗರು ಕಿಡಿಕಾರಿದ್ದರು. ಅದರಲ್ಲಿಯೂ ಕಳಪೆ ಪ್ರದರ್ಶನ ನೀಡಿದ ಮೊಹಮ್ಮದ್ ಶಮಿ ವಿರುದ್ಧ ತೀರಾ ಕೆಳಮಟ್ಟದ ಟ್ರೋಲ್ ನಡೆದಿತ್ತು. ಈ ಕುರಿತು ಇದುವರೆಗೂ ಎಲ್ಲಿಯೂ ಪ್ರತಿಕ್ರಿಯಿಸದ್ದೇ ಇದ್ದ ಮೊಹಮ್ಮದ್ ಶಮಿ ಇದೀಗ ಮಾತನಾಡಿದ್ದು ಈ ಕೆಳಕಂಡಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಧರ್ಮದ ಆಧಾರದ ಮೇಲೆ ಟ್ರೋಲ್ ಮಾಡುವವರು ಭಾರತೀಯರೇ ಅಲ್ಲ
ಮೊಹಮ್ಮದ್ ಶಮಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ನೀಡಿದ್ದ ಕಳಪೆ ಪ್ರದರ್ಶನದಿಂದ ಸಾಕಷ್ಟು ಧರ್ಮ ಆಧಾರಿತ ಟೀಕೆಗಳನ್ನು ಎದುರಿಸಿದ್ದರು. ಹೀಗೆ ಧರ್ಮದ ಆಧಾರದ ಮೇಲೆ ತನ್ನನ್ನು ಟ್ರೋಲ್ ಮಾಡಿದವರ ವಿರುದ್ಧ ಕಿಡಿಕಾರಿರುವ ಮೊಹಮ್ಮದ್ ಶಮಿ ಈ ರೀತಿಯ ಟ್ರೋಲ್ ಮಾಡುವವರು ನಿಜವಾದ ಅಭಿಮಾನಿಗಳಲ್ಲ ಹಾಗೂ ಅಂಥವರು ನಿಜವಾದ ಭಾರತೀಯರೇ ಅಲ್ಲ ಮತ್ತು ಈ ರೀತಿಯ ಟೀಕಾ ಪಿಡುಗಿಗೆ ಪರಿಹಾರವೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇಂಥವರು ಅತ್ತರೂ ನಕ್ಕರೂ ತಲೆಕೆಡಿಸಿಕೊಳ್ಳುವುದಿಲ್ಲ
ಇನ್ನೂ ಮುಂದುವರಿದು ತಾವು ಎದುರಿಸಿದ್ದ ಟೀಕೆಗಳ ವಿರುದ್ಧ ಮಾತನಾಡಿರುವ ಮೊಹಮ್ಮದ್ ಶಮಿ ಕೆಲವರು ಈ ರೀತಿಯ ಟೀಕೆಗಳನ್ನು ಮಾಡಿ ತಾವು ಅವಿದ್ಯಾವಂತರು ಎಂಬುದನ್ನು ತೋರಿಸಿಕೊಳ್ಳುತ್ತಿದ್ದಾರೆ ಅಷ್ಟೇ ಎಂದಿದ್ದಾರೆ. ನಿಜವಾಗಿಯೂ ತನ್ನ ತಂಡಕ್ಕೆ ಅಭಿಮಾನಿಯಾದವರು ಯಾರೂ ಸಹ ಈ ರೀತಿಯ ಕೆಟ್ಟ ಟೀಕೆಗಳನ್ನು ಮಾಡಿ ವಿವಾದಗಳನ್ನು ಹುಟ್ಟು ಹಾಕಲು ಯತ್ನಿಸುವುದಿಲ್ಲ ಎಂದು ಮೊಹಮ್ಮದ್ ಶಮಿ ಕಿಡಿಕಾರಿದ್ದಾರೆ. ಹಾಗೂ ಈ ರೀತಿ ವಿವಾದವನ್ನು ಹುಟ್ಟು ಹಾಕಲು ಟೀಕೆಗಳನ್ನು ಮಾಡುವವರು ಎಷ್ಟೇ ಅತ್ತರೂ ಅಥವಾ ನಕ್ಕರೂ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮಹಮ್ಮದ್ ಶಮಿ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ನಾವೂ ಮನುಷ್ಯರೇ ತಪ್ಪುಗಳಾಗುವುದು ಸಹಜ
ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹೇಳಿಕೊಳ್ಳುವಂತಹ ಯಶಸ್ಸು ಸಾಧಿಸದ ಕುರಿತು ಪ್ರತಿಕ್ರಿಯಿಸಿರುವ ಮೊಹಮ್ಮದ್ ಶಮಿ ತಪ್ಪುಗಳಾಗುವುದು ಸಹಜ, ಇದ್ದ ನಿರೀಕ್ಷೆಯಷ್ಟು ನಮ್ಮ ತಂಡ ಪ್ರದರ್ಶನ ನೀಡದೇ ಇದ್ದದ್ದು ಕೂಡ ನಿಜ, ಆದರೆ ನಾವು ಕೂಡಾ ಮನುಷ್ಯರಾಗಿದ್ದು ತಪ್ಪುಗಳಾಗುವುದು ಸಹಜ, ನಿರೀಕ್ಷೆಯ ಮಟ್ಟವನ್ನು ಪ್ರತಿ ಬಾರಿಯೂ ಯಶಸ್ವಿಯಾಗಿ ತಲುಪಲಾಗುವುದಿಲ್ಲ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications