
ಟೀಮ್ ಇಂಡಿಯಾದ ಹಿರಿಯ ಆಟಗಾರ ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಮಿಂಚಿದ್ದಾರೆ. ಮೊಹಮ್ಮದ್ ಶಮಿ ಕೇವಲ ಒಂದೇ ಓವರ್ ಬೌಲಿಂಗ್ ನಡೆದ್ದರೂ ಈ ಓವರ್‌ನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ರುಚಿ ತೋರಿಸಲು ಪ್ರಮುಖ ಕಾರಣವಾದರು. ಈ ಮೂಲಕ ಭಾರತ ತಂಡಕ್ಕೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.
ಈ ಪಂದ್ಯದ ಬಳಿಕ ಮಾತನಾಡಿದ ಮೊಹಮ್ಮದ್ ಶಮಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಮತ್ತೆ ಭಾರತ ತಂಡದ ಪರವಾಗಿ ಮೈದಾನಕ್ಕೆ ಇಳಿದು ಆಡುವುದು ಶ್ರೇಷ್ಠವಾದ ಅನುಭವ ಎಂದಿದ್ದಾರೆ ಮೊಹಮ್ಮದ್ ಶಮಿ. "ನನ್ನ ಮೇಲೆ ಪ್ರೀತಿ ಹಾಗೂ ಅಭಿಮಾನ ತೋರಿದ ಎಲ್ಲರಿಗೂ ಧನ್ಯವಾದಗಳು. ಕಠಿಣ ಪರಿಶ್ರಮಕ್ಕೆ ಬೆಲೆ ಇದ್ದೇ ಇದೆ. ಮತ್ತೆ ಮೈದಾನಕ್ಕೆ ಇಳಿದು ಭಾರತ ತಂಡದ ಪರವಾಗು ಆಡುತ್ತಿರುವುದು ವಿಶೇಷವಾದ ಅನುಭವ" ಎಂದಿದ್ದಾರೆ ಮೊಹಮ್ಮದ್ ಶಮಿ.
ಕಳೆದ ವರ್ಷದ ಟಿ20 ವಿಶ್ವಕಪ್‌ನ ಬಳಿಕ ಟೀಮ್ ಇಂಡಿಯಾ ಟಿ20 ತಂಡದಿಂದ ಮೊಹಮ್ಮದ್ ಶಮಿ ಹೊರಬಿದ್ದಿದ್ದರು. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು ಕೂಡ ಟೀಮ್ ಇಂಡಿಯಾ ಆಯ್ಕೆ ಮಂಡಳಿ ಚುಟುಕು ಮಾದರಿಯಿಂದ ಮೊಹಮ್ಮದ್ ಶಮಿ ಅವರನ್ನು ದೂರವಿಡಲು ಬಯಸಿತ್ತು. ಆದರೆ ಬೂಮ್ರಾ ಗಾಯಗೊಂಡ ಕಾರಣದಿಂದಾಗಿ ಮೊಹಮ್ಮದ್ ಶಮಿ ಭಾರತ ತಂಡದಲ್ಲಿ ಮತ್ತೆ ಅವಕಾಶ ಪಡೆದುಕೊಂಡರು. ಹೀಗಾಗಿ ವಿಶ್ವಕಪ್‌ಗೂ ಮುನ್ನ ಮೊಹಮ್ಮದ್ ಶಮಿ ಇದೇ ಮೊದಲ ಬಾರಿಗೆ ಚುಟುಕು ಮಾದರಿಯಲ್ಲಿ ಅಭ್ಯಾಸ ಪಂದ್ಯದ ಮೂಲಕ ಕಣಕ್ಕಿಳಿದಿದ್ದರು. ಆದರೆ ಈ ಪಂದ್ಯದಲ್ಲಿ ಮೊಹಮ್ಮದ್ ಶಮಿಗೆ ಕೇವಲ ಒಂದೇ ಓವರ್ ನೀಡುವ ಮೂಲಕ ನಾಯಕ ರೋಹಿತ್ ಶರ್ಮಾ ಅಚ್ಚರಿ ಮೂಡಿಸಿದ್ದರು. ಆದರೆ ಈ ಒಂದೇ ಓವರ್‌ನಲ್ಲಿ ಶಮಿ ಅಮೋಘ ಬೌಲಿಂಗ್ ದಾಳಿ ನಡೆಸಿ ಪಂದ್ಯವನ್ನು ಭಾರತ ಗೆಲ್ಲಲು ಕಾರಣವಾದರು. ಈ ಓವರ್‌ನಲ್ಲಿ ಒಂದು ರನೌಟ್ ಸಹಿತ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು ಆಸ್ಟ್ರೇಲಿಯಾ.
ಈ ಅಂತಿಮ ಓವರ್‌ನಲ್ಲಿ ಆಸ್ಟ್ರೇಲಿಯಾ ತಂಡದ ಗೆಲುವಿಗೆ 11 ರನ್‌ಗಳ ಅಗತ್ಯವಿತ್ತು. ಮೊದಲ ಎರಡು ಎಸೆತಗಳಲ್ಲಿ ತಲಾ ಎರಡು ರನ್‌ಗಳಂತೆ ನಾಲ್ಕು ರನ್‌ಗಳನ್ನು ಗಳಿಸಿತು ಆಸ್ಟ್ರೇಲಿಯಾ. ಶಮಿ ಎಸೆದ ಮೂರನೇ ಎಸೆತದಲ್ಲಿ ನಾಯಕ ವಿರಾಟ್ ಕೊಹ್ಲಿ ಎಸೆದ ಅದ್ಭುತ ಕ್ಯಾಚ್‌ಗೆ ಪ್ಯಾಟ್ ಕಮ್ಮಿನ್ಸ್ ಬಲಿಯಾದರು. ಅದರ ಮುಂದನ ಎಸೆತದಲ್ಲಿಯೇ ಆಷ್ಟನ್ ಅಗರ್ ರನೌಟ್ ಆಗುವ ಮೂಲಕ ವಿಕೆಟ್ ಕಳೆದುಕೊಂಡರು. ಅಂತಿಮ ಎರಡು ಎಸೆತಗಳಲ್ಲಿ ಜೋಶ್ ಇಂಗ್ಲಿಸ್ ಹಾಗೂ ಕೇನ್ ರಿಚರ್ಡ್ಸನ್ ವಿಕೆಟ್ ಪಡೆಯುವಲ್ಲಿ ಶಮಿ ಯಶಸ್ವಿಯಾದರು. ಈ ಮೂಲಕ ಆಸ್ಟ್ರೇಲಿಯಾ 180 ರನ್‌ಗಳಿಗೆ ಆಲೌಟ್ ಆಗಿದೆ.
ಇನ್ನು ಅನುಭವಿ ಆಟಗಾರ ಜಸ್ಪ್ರೀತ್ ಬೂಮ್ರಾ ಅಲಭ್ಯತೆಯ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾಗೆ ಡೆತ್ ಓವರ್ ಬೌಲಿಂಗ್ ದೊಡ್ಡ ತಲೆನೋವಾಗಿದೆ. ಆದರೆ ಈ ಪಂದ್ಯದಲ್ಲಿ ಮೊಹಮ್ಮದ್ ಶಮಿ ನೀಡಿದ ಪ್ರದರ್ಶನ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ನ ತಲೆನೋವನ್ನು ಒಂದು ಮಟ್ಟಿಗೆ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದೆ. ಮುಂದಿನ ಪಂದ್ಯಗಳಲ್ಲಿಯೂ ಮೊಹಮ್ಮದ್ ಶಮಿಯಿಂದ ಇಂಥಾದ್ದೇ ಪ್ರದರ್ಶನದ ನಿರೀಕ್ಷೆಯಲ್ಲಿ ಮ್ಯಾನೇಜ್‌ಮೆಂಟ್ ಮಾತ್ರವಲ್ಲದೆ ಟೀಮ್ ಇಂಡಿಯಾ ಅಭಿಮಾನಿಗಳು ಕೂಡ ಇದ್ದಾರೆ. ಇನ್ನು ಭಾರತ ತಂಡ ಎರಡನೇ ಅಭ್ಯಾಸ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಬುಧವಾರದಂದು ಆಡಲಿದೆ. ಭಾನುವಾರ ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನ ಮೊದಲ ಪಂದ್ಯವನ್ನಾಡಲಿದೆ.