
ನವದೆಹಲಿ: ಭಾರತ ಕ್ರಿಕೆಟ್ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ ಕೋವಿಡ್-19 ವ್ಯಾಕ್ಸಿನ್ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸದ ನಿಮಿತ್ತ ಸದ್ಯ ಮುಂಬೈಯಲ್ಲಿ ಕ್ವಾರಂಟೈನ್ ಪಾಲಿಸುತ್ತಿರುವ ಶಮಿ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ಭಾರತೀಯ ಕ್ರಿಕೆಟ್ ತಂಡ ಅಲ್ಲಿ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಅದಾಗಿ ಬಳಿಕ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ.
'ನಾನು ನನ್ನ ಮೊದಲ ಡೋಸ್ ವ್ಯಾಕ್ಸಿನ್ ಪಡೆದುಕೊಂಡಿದ್ದೇನೆ. ಎಲ್ಲರೂ ಪಡೆದುಕೊಳ್ಳುವಂತೆ ಬಯಸುತ್ತಿದ್ದೇನೆ. ಎಲ್ಲರೂ ಸುರಕ್ಷಿತವಾಗಿರಿ' ಎಂದು ಟ್ವೀಟ್ ನಲ್ಲಿ ಮೊಹಮ್ಮದ್ ಶಮಿ ಬರೆದುಕೊಂಡಿದ್ದಾರೆ. ಇಂಗ್ಲೆಂಡ್‌ಗೆ ಹೋಗುವ ಮುನ್ನ ಮುಂಬೈ ಹೋಟೆಲ್‌ನಲ್ಲಿ ತಂಡದೊಂದಿಗೆ ಶಮಿ ಕ್ವಾರಂಟೈನ್ ಪಾಲಿಸುತ್ತಿದ್ದಾರೆ.
ಭಾರತ ತಂಡದಲ್ಲಿರುವ ನಾಯಕ ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಜಸ್‌ಪ್ರೀತ್ ಬೂಮ್ರಾ, ರಿಷಭ್ ಪಂತ್, ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಇಶಾಂತ್ ಶರ್ಮಾ ಈಗಾಗಲೇ ವ್ಯಾಕ್ಸಿನ್ ಮೊದಲ ಡೋಸ್ ಪಡೆದುಕೊಂಡಿದ್ದಾರೆ.