ಚೆನ್ನೈ ಸೂಪರ್ ಕಿಂಗ್ಸ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಯಶಸ್ವೀ ತಂಡಗಳಲ್ಲಿ ಒಂದು. 4 ಬಾರಿ ಚಾಂಪಿಯನ್ ಆಗುವ ಮೂಲಕ ಮುಂಬೈ ಇಂಡಿಯನ್ಸ್ ನಂತರ ಅತಿ ಹೆಚ್ಚು ಬಾರಿ ಕಪ್ ಗೆದ್ದ ತಂಡ ಎನಿಸಿಕೊಂಡಿದೆ. ಸಿಎಸ್‌ಕೆ ತಂಡದ ಈ ಯಶಸ್ಸಿಗೆ ಧೋನಿ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಇಂದು ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ಪಂದ್ಯವನ್ನಾಡಲು ಸಜ್ಜಾಗಿದೆ. ಇಂದಿನ ಪಂದ್ಯ ಧೋನಿಗೆ ಬಹಳ ಮಹತ್ವದ್ದಾಗಿದೆ.
ಹೌದು, ಎಂಎಸ್ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಇಂದು 200ನೇ ಪಂದ್ಯವನ್ನಾಡಲು ಸಜ್ಜಾಗಿದೆ. ತವರಿನಲ್ಲಿ ಈ ವಿಶೇಷ ಪಂದ್ಯ ನಡೆಯುತ್ತಿರುವುದು ಅಭಿಮಾನಿಗಳ ಖುಷಿಯನ್ನು ಹೆಚ್ಚಿಸಿದೆ. ಗಮನಿಸಬೇಕಾದ ಸಂಗತಿ ಎಂದರೆ, 2021 ರ ಐಪಿಎಲ್ ಆವೃತ್ತಿಯಲ್ಲಿ ಧೋನಿ ನಾಯಕನಾಗಿ 200 ಪಂದ್ಯಗಳನ್ನು ಪೂರ್ಣಗೊಳಿಸಿದರು ಮತ್ತು ಹಾಗೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು.

ಆದರೆ, ಇದರಲ್ಲಿ ಅವರು 2016ರ ಆವೃತ್ತಿಯಲ್ಲಿ ರೈಸಿಂಗ್ ಪುಣೆ ಸೂಪರ್‌ಜೈಂಟ್ (ಆರ್‌ಪಿಎಸ್) ತಂಡಕ್ಕೆ ನಾಯಕತ್ವ ವಹಿಸಿದ್ದ ಪಂದ್ಯಗಳು ಕೂಡ ಸೇರಿದ್ದವು. ಈ ಬಾರಿ ಕೇವಲ ಸಿಎಸ್‌ಕೆ ತಂಡಕ್ಕೆ ನಾಯಕನಾಗಿರುವ ಪಂದ್ಯಗಳನ್ನು ಪರಿಗಣಿಸಿದರೆ, ಇಂದು 200ನೇ ಪಂದ್ಯದಲ್ಲಿ ನಾಯಕನಾಗಿ ಸಿಎಸ್‌ಕೆ ತಂಡವನ್ನು ಮುನ್ನಡೆಸಲಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ 200 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ಮೊದಲ ಆಟಗಾರ ಎನಿಸಿಕೊಂಡರು.

ಧೋನಿ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನ
ಧೋನಿ ಎಂದರೆ ಅದೊಂದು ಮ್ಯಾಜಿಕ್, ಎಂತಹದ್ದೇ ಆಟಗಾರನಾದರು ಧೋನಿ ನಾಯಕತ್ವದಲ್ಲಿ ಅದ್ಭುತವನ್ನೇ ಸೃಷ್ಟಿಸುತ್ತಾರೆ. ಅದಕ್ಕೆ ಇತ್ತೀಚಿನ ಉದಾಹರಣೆ ಅಜಿಂಕ್ಯ ರಹಾನೆ ಅವರ ಅಮೋಘ ಇನ್ನಿಂಗ್ಸ್. ಮುಂಬೈ ಇಂಡಿಯನ್ಸ್ ವಿರುದ್ಧ ಅವರು ಆಡಿದ ರೀತಿಯನ್ನು ಕಂಡು ಕ್ರಿಕೆಟ್ ಜಗತ್ತೇ ನಿಬ್ಬೆರಗಾಗಿದೆ. ಇದೆಲ್ಲಾ ಧೋನಿಯಿಂದ ಮಾತ್ರ ಸಾಧ್ಯ ಎಂದು ಅಭಿಮಾನಿಗಳು ಕೊಂಡಾಡಿದ್ದರು.
ಐಪಿಎಲ್ ಇತಿಹಾಸದಲ್ಲಿ 2008 ರಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ಅವರು 16ನೇ ಆವೃತ್ತಿಯಲ್ಲಿ ಕೂಡ ನಾಯಕರಾಗಿ ಮುಂದುವರೆದಿದ್ದಾರೆ. ಇದರಲ್ಲಿ ಸಿಎಸ್‌ಕೆ ತಂಡ 2 ವರ್ಷ ಐಪಿಎಲ್ ಆಡದಿರುವುದನ್ನು ಹೊರತುಪಡಿಸಿದರೆ, ಮತ್ತು ಕಳೆದ ಆವೃತ್ತಿಯಲ್ಲಿ ಕೆಲವು ಪಂದ್ಯಗಳಲ್ಲಿ ರವೀಂದ್ರ ಜಡೇಜಾ ತಂಡದ ನಾಯಕರಾಗಿದ್ದರು. ಮತ್ತೆ ಧೋನಿ ನಾಯಕತ್ವವನ್ನು ವಹಿಸಿಕೊಂಡರು.
14 ಆವೃತ್ತಿಯಲ್ಲಿ ಆಡಿರುವ ಸಿಎಸ್‌ಕೆ ತಂಡ 9 ಆವೃತ್ತಿಯಲ್ಲಿ ಫೈನಲ್‌ಗೆ ತಲುಪಿದೆ ಮತ್ತು 4 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಧೋನಿ ಇದುವರೆಗೂ 199 ಪಂದ್ಯಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಧೋನಿ ನಾಯಕರಾಗಿ 4,482 ರನ್‌ಗಳನ್ನು ಗಳಿಸಿದ್ದಾರೆ. ವಿರಾಟ್ ಕೊಹ್ಲಿ ನಾಯಕಾಗಿ 4881 ರನ್ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದು, ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ಧೋನಿ ಐಪಿಎಲ್‌ನಲ್ಲಿ ಒಟ್ಟಾರೆಯಾಗಿ ಐಪಿಎಲ್‌ನಲ್ಲಿ 5000 ರನ್‌ಗಳನ್ನು ಪೂರೈಸಿದ್ದಾರೆ.
ನಾಯಕನಾಗಿ ಅತಿ ಹೆಚ್ಚು ಗೆಲುವಿನ ಸರಾಸರಿ ಹೊಂದಿದವರ ಪಟ್ಟಿಯಲ್ಲಿ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ನಾಯಕರಾಗಿ ಅತಿ ಹೆಚ್ಚು ಗೆಲುವಿನ ಸರಾಸರಿ ಹೊಂದಿದ್ದಾರೆ. ಇಂದು ಚೆನ್ನೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಸಿಎಸ್‌ಕೆ ಗೆಲ್ಲಲೇಬೇಕು ಎಂದು ರವೀಂದ್ರ ಜಡೇಜಾ ಹೇಳಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಗೆಲ್ಲುವ ಮೂಲಕ ಈ ಸಂಭ್ರಮವನ್ನು ಆಚರಿಸಬೇಕು ಎಂದು ಹೇಳಿದ್ದಾರೆ.