ಸಿಎಸ್‌ಕೆಯಲ್ಲಿ 60 ವರ್ಷದವರೆಗೂ ಆಡಿ ಸರ್: ಶಿವಕಾರ್ತಿಕೇಯನ್ ಮನವಿಗೆ ಧೋನಿ ಕೊಟ್ಟ ಉತ್ತರ ಭಾರೀ ವೈರಲ್
MS Dhoni: ಎಂ.ಎಸ್.ಧೋನಿ ಅವರ ನಿವೃತ್ತಿ ಬಗ್ಗೆ ಹಲವಾರು ಬಾರಿ ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಅವರು ನಾನು ಬಿಡುತ್ತೇನೆಂದರೂ ಸಿಎಸ್‌ಕೆ ಫ್ರಾಂಚೈಸಿ ಮಾತ್ರ ಬಿಟ್ಟುಕೊಡುವುದಿಲ್ಲ ಅಂತಾ ಉತ್ತರಿಸುತ್ತಾ ಬಂದಿದ್ದಾರೆ. ಆರ್‌ಸಿಬಿಗೆ ಹೇಗೆ ವಿರಾಟ್ ಕೊಹ್ಲಿ ಕಳಸವೋ, ಹಾಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಿಗೆ ಧೋನಿ ಮನೆ ಯಜಮಾನ ಎಂದು ಅಭಿಮಾನಿಗಳು ಹೇಳುವ ಮಾತಾಗಿದೆ.
ಇದೀಗ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ಫ್ರಾಂಚೈಸಿಯ ಕಾರ್ಯಕ್ರಮದಲ್ಲಿ ಎಂಎಸ್ ಧೋನಿ ನಿವೃತ್ತಿ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿತು. ಚೆನ್ನೈನಲ್ಲಿ ನೆರೆದಿದ್ದ ಸಿಎಸ್‌ಕೆ ಅಭಿಮಾನಿಗಳ ಮುಂದೆ ಮಾತನಾಡಿದ ನಟ ಶಿವಕಾರ್ತಿಕೇಯನ್, ಕೋಟ್ಯಂತರ ಸಿಎಸ್‌ಕೆ ಬೆಂಬಲಿಗರು ವರ್ಷಗಳಿಂದ ಮನಸ್ಸಿನಲ್ಲಿಟ್ಟುಕೊಂಡಿದ್ದ ಮಾತಿಗೆ ಧ್ವನಿಯಾದರು.
ಧೋನಿ ತಮ್ಮ ನಿವೃತ್ತಿಯ ಬಗ್ಗೆ ಕುತೂಹಲವನ್ನು ಜೀವಂತವಾಗಿಟ್ಟಿರುವ ರೀತಿಯನ್ನು ಉಲ್ಲೇಖಿಸಿದ ಅವರು, "ಪ್ರತಿ ಸೀಸನ್‌ನಲ್ಲೂ ನಿವೃತ್ತಿಯ ಪ್ರಶ್ನೆಗೆ ನಿಮ್ಮ ಕಡೆಯಿಂದ ಖಂಡಿತವಾಗಿಯೂ ಇಲ್ಲ ಎನ್ನುವ ಉತ್ತರಕ್ಕಾಗಿಯೇ ಅಭಿಮಾನಿಗಳು ಕಾಯುತ್ತಿರುತ್ತಾರೆ" ಎಂದರು. ಅಲ್ಲದೆ, "ಪ್ರಸ್ತುತ 44 ವರ್ಷದ ಸಿಎಸ್‌ಕೆ ಐಕಾನ್ ಆಗಿರುವ ನೀವು 60 ವರ್ಷದವರೆಗೂ ಬೇಕಾದರೂ ಆಡಬಹುದು," ಎಂದು ಹೇಳಿದರು. ಈ ಮಾತಿಗೆ ಅಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಹರ್ಷೋದ್ಗಾರಗಳ ಸುರಿಮಳೆಯೇ ಹರಿಯಿತು.

ಅಭಿಮಾನಿಗಳಲ್ಲಿ ಹೊಸ ಭರವಸೆಯ ಕಿಡಿ
ಶಿವಕಾರ್ತಿಕೇಯನ್, ಧೋನಿ ಅವರು ನಿವೃತ್ತಿಯ ಮಾತುಗಳನ್ನು ನಿರ್ಲಕ್ಷಿಸಿ, ಹಳದಿ ಜೆರ್ಸಿ ಧರಿಸಿ ಆಟ ಮುಂದುವರಿಸಬೇಕೆಂದು ಮನವಿ ಮಾಡಿಕೊಂಡರು. ಅದಕ್ಕೆ ಧೋನಿ ನೀಡಿದ ಹಾಸ್ಯಭರಿತ ಪ್ರತಿಕ್ರಿಯೆ ಎಲ್ಲರ ಗಮನ ಸೆಳೆಯಿತು. "ನನ್ನ ಈ ವಯಸ್ಸಿನಲ್ಲಿ ಫಿಟ್‌ನೆಸ್ ಕಾಪಾಡಿಕೊಳ್ಳುವುದು ದಿನದಿಂದ ದಿನಕ್ಕೆ ಕಷ್ಟವಾಗುತ್ತಿದೆ" ಎಂದು ಹೇಳುವ ಮೂಲಕ, ಸಿಎಸ್‌ಕೆ ಅಭಿಮಾನಿಗಳಲ್ಲಿ ಹೊಸ ಭರವಸೆಯ ಕಿಡಿಯನ್ನು ಹಚ್ಚಿದರು.
ಈ ಮಾತುಗಳು ಕೇಳಿಬರುತ್ತಿದ್ದಂತೆಯೇ ಚೆಪಾಕ್ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಂದ ಹರ್ಷೋದ್ಗಾರದ ಅಲೆ ಎದ್ದಿತು. ಈ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 19ನೇ ಐಪಿಎಲ್ ಸೀಸನ್ ಆಡಲು ಸಜ್ಜಾಗಿರುವ ಎಂ.ಎಸ್. ಧೋನಿ, ಇಂದಿಗೂ ಲೀಗ್‌ನ ಅತ್ಯಂತ ಪ್ರಭಾವಶಾಲಿ ಆಟಗಾರರಲ್ಲಿ ಒಬ್ಬರಾಗಿದ್ದಾರೆ.
ಧೋನಿ ನಾಯಕತ್ವದಲ್ಲಿ ಐದು ಬಾರಿ ಟ್ರೋಫಿ ಗೆಲುವು
ಈವರೆಗೆ 278 ಪಂದ್ಯಗಳಲ್ಲಿ 5,439 ರನ್ ಗಳಿಸಿರುವ ಅವರು, ಸಿಎಸ್‌ಕೆ ತಂಡದ ಐತಿಹಾಸಿಕ ಪಯಣದಲ್ಲಿ ಕೇಂದ್ರ ಬಿಂದುವಾಗಿದ್ದಾರೆ. 2024ರ ಸೀಸನ್‌ಗೂ ಮುನ್ನ ನಾಯಕತ್ವದಿಂದ ಕೆಳಗಿಳಿಯುವ ಮೊದಲು, ಅವರು ಫ್ರಾಂಚೈಸಿಯನ್ನು ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಕಳೆದ ವರ್ಷ ಋತುರಾಜ್ ಗಾಯಕ್ವಾಡ್ ಅವರ ಗಾಯದ ಸಮಸ್ಯೆಯಿಂದಾಗಿ ಅವರು ಸ್ವಲ್ಪ ದಿನಗಳ ಕಾಲ ಮತ್ತೆ ನಾಯಕತ್ವ ವಹಿಸಿಕೊಂಡಿದ್ದರು. ಇದೀಗ ತಂಡವು ಹೊಸ ನಾಯಕತ್ವದ ಯುಗದತ್ತ ಸಾಗುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಸಿಎಸ್‌ಕೆ ಸಿಇಒ ಹೇಳಿದ್ದೇನು?
ಎಂ.ಎಸ್.ಧೋನಿ ಅವರ ಭವಿಷ್ಯದ ಕುರಿತಾದ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ವಿಶೇಷವಾಗಿ ತಂಡದಲ್ಲಿ ಅವರ ಸ್ಥಾನ ಬದಲಾಗುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇನ್ನೂ ಸಿಎಸ್‌ಕೆ ಸಿಇಒ ಕಾಶಿ ವಿಶ್ವನಾಥನ್ ಅವರು "ಧೋನಿ ಸಂಪೂರ್ಣ ಐಪಿಎಲ್ 2026 ಸೀಸನ್‌ಗೆ ಲಭ್ಯವಿರುತ್ತಾರೆ," ಎಂದು ಖಚಿತಪಡಿಸಿದ್ದಾರೆ.
ಕಳೆದ ಕೆಲವು ಸೀಸನ್‌ಗಳಿಂದ ಮೈದಾನದಲ್ಲಿ ಧೋನಿ ಅವರ ಜವಾಬ್ದಾರಿಗಳು ಕ್ರಮೇಣ ಕಡಿಮೆಯಾಗುತ್ತಾ ಬಂದಿವೆ. ಈಗಾಗಲೇ ಋತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವವನ್ನು ಹಸ್ತಾಂತರಿಸಿರುವ ಅವರು, ಹೆಚ್ಚಾಗಿ 'ಫಿನಿಶರ್' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತಿಮ ಓವರ್‌ಗಳಲ್ಲಿ ಬಂದು ಅಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಸ್ಕೋರ್ ಹೆಚ್ಚಿಸುವುದು ಅವರ ಈಗಿನ ಮುಖ್ಯ ಕೆಲಸವಾಗಿದೆ.
ಈಗ ತಂಡಕ್ಕೆ ಸಂಜು ಸ್ಯಾಮ್ಸನ್ ಎಂಟ್ರಿ ಕೊಟ್ಟಿದ್ದು, ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹಂಚಿಕೊಳ್ಳುವ ಅಥವಾ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಅವರಿಗೆ ಹಸ್ತಾಂತರಿಸುವ ಸಾಧ್ಯತೆಯಿದೆ. ಹಾಗಿದ್ದರೂ, ಧೋನಿ ಅವರ ಅನುಭವ ಮತ್ತು ಉಪಸ್ಥಿತಿಯು ತಂಡಕ್ಕೆ ಅಗತ್ಯವಾಗಿದೆ ಎಂದು ಹೇಳಲಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications