

ಚೆನ್ನೈ, ಏಪ್ರಿಲ್ 10: ಎಂಎಸ್ ಧೋನಿ ಮತ್ತು ಸಾಕ್ಷಿ ಧೋನಿ ವಿಮಾನ ನಿಲ್ದಾಣದ ನೆಲದ ಮೇಲೆ ಮಲಗಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಮುಂದಿನ ಪಂದ್ಯಕ್ಕಾಗಿ ಜೈಪುರ್‌ಗೆ ತೆರಳಬೇಕಿದ್ದ ತಂಡಕ್ಕೆ ಬುಧವಾರ (ಏಪ್ರಿಲ್ 10) ಮುಂಜಾನೆ ವಿಮಾನ ನಿಗದಿಯಾಗಿದ್ದರಿಂದ ಈ ಪರಿಸ್ಥಿತಿ ಬಂದೊದಗಿತ್ತು.
'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'
ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮಂಗಳವಾರ (ಏಪ್ರಿಲ್ 9) ರಾತ್ರಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಜಯ ದಾಖಲಿಸಿತ್ತು. ಚೆನ್ನೈ ತಂಡಕ್ಕೆ ಮುಂದಿನ ಪಂದ್ಯ ಗುರುವಾರ (ಏಪ್ರಿಲ್ 11) ಜೈಪುರ್‌ನನಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಲಿದೆ.
ಮುಂದಿನ ಪಂದ್ಯಕ್ಕೆ ತೆರಳಲು ತಂಡಕ್ಕೆ ಬುಧವಾರ ಮುಂಜಾನೆ ವಿಮಾನ ನಿಗದಿಯಾಗಿದ್ದ ಕಾರಣ ಚೆನ್ನೈ ನಿಲ್ದಾಣಕ್ಕೆ ಮಂಗಳವಾರ (ಏಪ್ರಿಲ್ 9) ತಡ ರಾತ್ರಿಯೇ ಬಂದಿದ್ದ ಚೆನ್ನೈ ತಂಡ ವಿಮಾನ ನಿಲ್ದಾಣದ ನೆಲದ ಮೇಲೆಯೇ ಸಮಯ ಕಳೆಯಬೇಕಾಗಿ ಬಂದಿತ್ತು. ಈ ಚಿತ್ರವನ್ನು ಎಂಎಸ್ ಧೋನಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದ್ದಾರೆ.
ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಮ್ ಚಿತ್ರ ಹಂಚಿಕೊಂಡಿರುವ ಧೋನಿ, ಚಿತ್ರದೊಂದಿಗೆ 'ಐಪಿಎಲ್ ಪಂದ್ಯದ ಸಮಯ ಮುಗಿದ ಬಳಿಕ ಒಂದು ವೇಳೆ ಮುಂಜಾನೆ ವಿಮಾನ ಹಿಡಿಯಬೇಕಿದ್ದರೆ ಇಂಥದ್ದಾಗುತ್ತದೆ' ಎಂದು ಸಾಲನ್ನೂ ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಧೋನಿ-ಸಾಕ್ಷಿ ನೆಲದ ಮೇಲೆ ಮಲಗಿದ್ದರೆ, ತಂಡದ ಸಹ ಆಟಗಾರರು ನೆಲದ ಮೇಲೆ ಕುಳಿತಿದ್ದಾರೆ.