ಐಪಿಎಲ್ ಜಾಹೀರಾತಿನಲ್ಲಿ ಮಿಂಚಿದ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ: ವಿಡಿಯೋ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ದ್ವಿತೀಯ ಹಂತದ ಟೂರ್ನಿ ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿದೆ. ಭಾರತದಲ್ಲಿ ನಡೆಯಬೇಕಿದ್ದ ಐಪಿಎಲ್ ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸ್ಥಳಾಂತರವಾಗಿದ್ದು, 31 ಪಂದ್ಯಗಳು ಯುಎಇಯಲ್ಲಿ ನಡೆಯಲಿವೆ. ಐಪಿಎಲ್ ದ್ವಿತೀಯ ಹಂತದ ಟೂರ್ನಿಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಹೊಸ ಜಾಹೀರಾತು ಬಿಡುಗಡೆಯಾಗಿದೆ. ಶುಕ್ರವಾರ (ಆಗಸ್ಟ್ 20) ಬಿಡುಗಡೆಯಾಗಿರುವ ಈ ಜಾಹೀರಾತಿನಲ್ಲಿ ಕೂಲ್ ಕ್ಯಾಪ್ಟನ್ ಧೋನಿ ಸಕ್ಕತ್ ಆಗಿ ಮಿಂಚಿದ್ದಾರೆ.
ಬಹಳಷ್ಟು ಕಮರ್ಷಿಯಲ್ ಜಾಹೀರಾತುಗಳಲ್ಲಿ ಗಮನ ಸೆಳೆಯುವ ಎಂಎಸ್ ಧೋನಿ ಈ ಬಾರಿಯೂ ಅದ್ಭುತ ರೀತಿಯಲ್ಲಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ, ನಟಿಸಿದ್ದಾರೆ. ಯಾವ ನಟನಿಗೂ ಕಮ್ಮಿಯಿಲ್ಲ ಎಂಬಂತೆ ಧೋನಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಜಾಹೀರಾತಿನ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಡೈಲಾಗಿನ ಮೂಲಕ ಸಂಪೂರ್ಣ ಮಾಹಿತಿಯಿತ್ತ ಧೋನಿ
ಭಾರತದಲ್ಲಿ ಅರ್ಧಕ್ಕೆ ನಿಲ್ಲಿಸಲ್ಪಟ್ಟ ಟೂರ್ನಿ ಯುಎಇಯಲ್ಲಿ ಪುನರಾರಂಭವಾಗಲಿದೆ. ದ್ವಿತೀಯ ಹಂತದ ಐಪಿಎಲ್‌ನಲ್ಲಿ ಡ್ರಾಮಾ, ಕ್ಲೈಮ್ಯಾಕ್ಸ್, ಸಸ್ಪೆನ್ಸ್ ಎಲ್ಲವೂ ಇರಲಿದೆ. ಹಿಟ್‌ಮ್ಯಾನ್, ಗಬ್ಬರ್, ಹೆಲಿಕ್ಯಾಪ್ಟರ್ ಶಾಟ್ ಎಲ್ಲವೂ ಈ ಬಾರಿ ಗಮನ ಸೆಳೆಯಲಿದೆ. ಲೀಗ್ ಇದೆ, ಪ್ಲೇ ಆಫ್ ಇದೆ, ಸೂಪರ್ ಓವರ್ ಕೂಡ ಇದೆ. ಆರಂಭಿಕವಾಗಿ ಅರ್ಧ ನಿಲ್ಲಿಸಲ್ಪಟ್ಟರೇನಂತೆ ಮತ್ತೊಂದು ಅರ್ಧ ಶುರುವಾಗಲಿದೆ' ಎಂದು ಡೈಲಾಗಿನ ಮೂಲಕ ಧೋನಿ ದ್ವಿತೀಯ ಹಂತದ ಐಪಿಎಲ್ ಬಗ್ಗೆ ಮಾಹಿತಿ ನೀಡಿದ್ದಾರೆ. ಐಪಿಎಲ್‌ನಲ್ಲಿ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುವ ಧೋನಿ, ಈಗಾಗಲೇ ಸಿಎಸ್‌ಕೆ ಜೊತೆ ಯುಎಇಗೆ ತೆರಳಿದ್ದಾರೆ. ಸಿಎಸ್‌ಕೆ ಈಗಾಗಲೇ ಅಭ್ಯಾಸ ಆರಂಭಿಸಿದೆ. ಸದ್ಯದ ಐಪಿಎಲ್ ಅಂಕಪಟ್ಟಿಯಲ್ಲಿ ಸಿಎಸ್‌ಕೆ ದ್ವಿತೀಯ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ಚೆನ್ನೈ ತಂಡ ಡೆಲ್ಲಿ ಕ್ಯಾಪಿಟಲ್ಸ್ ನಂತರ ದ್ವಿತೀಯ ಸ್ಥಾನದಲ್ಲಿದೆ.
27 ದಿನಗಳವರೆಗೆ ದ್ವಿತೀಯ ಹಂತದ ಐಪಿಎಲ್ ಟೂರ್ನಿ
ಐಪಿಎಲ್ ಆರಂಭಿಕ ಹಂತದಲ್ಲಿ ಭಾರತದಲ್ಲಿ ಒಟ್ಟು 29 ಪಂದ್ಯಗಳು ನಡೆದಿದ್ದವು. ಇನ್ನು 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ. ಐಪಿಎಲ್ ಫ್ರಾಂಚೈಸಿಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದ್ದರಿಂದ ಅನಿವಾರ್ಯವಾಗಿ ಟೂರ್ನಿ ಅರ್ಧಕ್ಕೆ ನಿಲ್ಲಿಸಲ್ಪಟ್ಟು ಮುಂದೂಡಲಾಗಿತ್ತು. ನಡೆಯಲಿರುವ 31 ಪಂದ್ಯಗಳಲ್ಲಿ 13 ಪಂದ್ಯಗಳು ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿವೆ. ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಇದೇ ಸ್ಟೇಡಿಯಂನಲ್ಲಿ ನಡೆಯಲಿವೆ. ಶಾರ್ಜಾ ಸ್ಟೇಡಿಯಂನಲ್ಲಿ 10 ಪಂದ್ಯಗಳು ನಡೆಯಲಿವೆ. ಇದರಲ್ಲಿ ದ್ವಿತೀಯ ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯ ಸೇರಿದೆ. ಐಪಿಎಲ್ ದ್ವಿತೀಯ ಹಂತದ ಐಪಿಎಲ್ ಪಂದ್ಯಗಳ ವೇಳೆ ಒಟ್ಟು 7 ಡಬಲ್ ಹೆಡ್ಡರ್ ಪಂದ್ಯಗಳು ನಡೆಯಲಿವೆ. ಸುಮಾರು 27 ದಿನಗಳ ಕಾಲ ದ್ವಿತೀಯ ಹಂತದ ಐಪಿಎಲ್ ನಡೆಯಲಿದೆ. ಅಂದ್ಹಾಗೆ ಐಪಿಎಲ್ ದ್ವಿತೀಯ ಹಂತದ ಉದ್ಘಾಟನಾ ಪಂದ್ಯದಲ್ಲಿ ಅಂದರೆ ಸೆಪ್ಟೆಂಬರ್ 19ಕ್ಕೆ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಮತ್ತು ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಬಯೋಬಬಲ್ ನಿರ್ಬಂಧ ಸಡಿಲಿಕೆ
ಐಪಿಎಲ್ ದ್ವಿತೀಯ ಹಂತದ ಪಂದ್ಯಗಳು ಆರಂಭವಾಗುವಾಗ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಆಟಗಾರರು, ಸಿಬ್ಬಂದಿಗಳು ಪ್ರವಾಸ ಸರಣಿಯಲ್ಲಿರುತ್ತಾರೆ. ಅವರೆಲ್ಲಾ ಬಯೋಬಬಲ್ ಒಳಗೇ ಇರುವುದರಿಂದ ಅಲ್ಲಿನ ಬಯೋಬಬಲ್‌ನಿಂದ ನೇರವಾಗಿ ಯುಎಇಯಲ್ಲಿರುವ ಐಪಿಎಲ್ ಬಯೋಬಬಲ್‌ಗೆ ಪ್ರವೇಶಿಸಬಹುದು ಎಂದು ಬಿಸಿಸಿಐ ಹೇಳಿದೆ. ಹೀಗಾಗಿ ಐಪಿಎಲ್‌ನಲ್ಲಿ ಪಾಲ್ಗೊಳ್ಳುವ ಇಂಗ್ಲೆಂಡ್, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಆಟಗಾರರು ಐಪಿಎಲ್ ಆರಂಭಕ್ಕೂ ಮುನ್ನ ಬೇರೆ ಬಯೋಬಬಲ್ ಒಳಗಿದ್ದರೆ ಅವರು ನೇರವಾಗಿ ಐಪಿಎಲ್ ಬಯೋಬಬಲ್ ಒಳಗೆ ಪ್ರವೇಶಿಸಬಹುದು ಎಂದು ಬಿಸಿಸಿಐ ಹೇಳಿದೆ. ಅಂದ್ಹಾಗೆ ಐಪಿಎಲ್ ಮಾಜಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಆಗಸ್ಟ್ 13ರಂದು ಐಪಿಎಲ್‌ಗಾಗಿ ಯುಎಇಗೆ ತೆರಳಿದೆ. ಯುಎಇಗೆ ತೆರಳುವುದಕ್ಕೂ ಮುನ್ನ ಎಲ್ಲಾ 8 ತಂಡಗಳ ಆಟಗಾರರು ಕೋವಿಡ್-19 ವ್ಯಾಕ್ಸಿನೇಶನ್ ಮುಗಿಸಿರಬೇಕು ಎಂದು ಬಿಸಿಸಿಐ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications