ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ ಆಟಗಾರ ಮಹೇಂದ್ರ ಸಿಂಗ್ ಧೋನಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಲಕ್ನೋ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ತಮ್ಮ ಹಳೆಯ ಧಾಟಿಯಲ್ಲಿ ಕಾಣಿಸಿಕೊಂಡರು. ರುತುರಾಜ್ ಗಾಯಕ್ವಾಡ್ ಗಾಯದಿಂದ ಟೂರ್ನಿಯಿಂದ ಹೊರ ನಡೆದಿದ್ದರಿಂದ, ಚೆನ್ನೈ ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸುತ್ತಿದ್ದಾರೆ. ಈ ವೇಳೆ ಧೋನಿ ಅವರ ಮೇಲೆ ಅಭಿಮಾನಿಗಳ ಚಿತ್ತ ನೆಟ್ಟಿತ್ತು. ಈ ವೇಳೆ ಧೋನಿ ರಿವ್ಯೂ ಸಿಸ್ಟಮ್ ಮತ್ತೆ ಕೈ ಹಿಡಿದಿದೆ.
ವಿಕೆಟ್ ಕೀಪಿಂಗ್ ಮಾಡುವಾಗ ಧೋನಿ ಹಿಂದೆ ನಿಂತಿದ್ದಾರೆ ಎಂದರೆ ಎದುರಾಳಿಗಳಿಗೆ ಯಾವಾಗಲೂ ನಡುಕ ಇದ್ದೇ ಇರುತ್ತದೆ. ಧೊನಿ ಡಿಆರ್‌ಎಸ್ ತೆಗೆದುಕೊಳ್ಳುವುದರಲ್ಲಿ ಎತ್ತಿದ ಕೈ. ವಿಕೆಟ್ ಹಿಂದೆ ನಿಂತು ಔಟ್ ಅಥವಾ ನಾಟೌಟ್ ಎಂಬ ತೀರ್ಮಾನವನ್ನು ಧೋನಿ ಸರಿಯಾಗಿ ತೆಗೆದುಕೊಳ್ಳುತ್ತಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ ಧೋನಿ ಇಂತಹದ್ದೇ ಒಂದು ಡಿಆರ್‌ಎಸ್ ಪಡೆದು ಸುದ್ದಿಯಲ್ಲಿದ್ದಾರೆ.

ಎಲ್‌ಎಸ್‌ಜಿಯ ಸ್ಫೋಟಕ ಬ್ಯಾಟ್ಸ್‌ಮನ್ ನಿಕೋಲಸ್ ಪೂರನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅನ್ಶುಲ್ ಕಾಂಬೋಜ್ ಫುಲರ್ ಎಸೆತವನ್ನು ನಿಕೋಲಸ್ ಎದುರಿಸುವಲ್ಲಿ ವಿಫಲರಾದರು. ಚೆಂಡು ಇವರ ಪ್ಯಾಡ್‌ಗೆ ಬಡಿಯಿತು. ಸಿಎಸ್‌ಕೆ ಆಟಗಾರರು ಔಟ್‌ಗೆ ಮನವಿಯನ್ನು ಸಲ್ಲಿಸಿದರು. ಅಂಪೈರ್ ನಾಟೌಟ್ ಎಂದು ತೀರ್ಪನ್ನು ನೀಡಿದರು. ಆದರೆ ಧೋನಿ ಡಿಆರ್‌ಎಸ್ ಪಡೆದರು. ಅನ್ಶುಲ್ ಕಾಂಬೋಜ್ ಎಸೆದ ಎಸೆತ ಎಡಗೈ ಆಟಗಾರನನ್ನು ವಂಚಿಸಿ ಲೆಗ್‌ಸ್ಟಂಪ್‌ಗೆ ತಾಗುತ್ತಿರುವುದು ಸ್ಪಷ್ಟವಾಗಿ ಕಂಡಿತು. ಪೂರನ್ ನಿರಾಸೆಯಿಂದ ಪೆವಿಲಿಯನ್ ನತ್ತ ಹೆಜ್ಜೆಹಾಕಿದರು.
ನಿಕೋಲಸ್ ಪೂರನ್ ಪ್ರಸಕ್ತ ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಸಿಎಸ್‌ಕೆ ವಿರುದ್ಧ ಕೇವಲ 8 ರನ್‌ಗಳಿಸಿದರು. ಸದ್ಯ ಇವರ ತಲೆಯ ಮೇಲೆ ಆರೆಂಜ್ ಕ್ಯಾಪ್ ಇದೆ. ಇವರು 7 ಪಂದ್ಯಗಳಲ್ಲಿ 357 ರನ್ ಕಲೆ ಹಾಕಿದ್ದಾರೆ.
ಪ್ರಸಕ್ತ ಐಪಿಎಲ್‌ನಲ್ಲಿ ಧೋನಿ ಎಂಟು ಹಾಗೂ ಒಂಬತ್ತನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಟೀಕೆಗೆ ಗುರಿಯಾಗಿದ್ದರು. ಧೋನಿ ಅವರಿಗೆ ವಯಸ್ಸು ಆಗುತ್ತಿದೆ ನಿವೃತ್ತಿ ಪಡೆಯಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದರು. ಧೋನಿ ಬ್ಯಾಟಿಂಗ್‌ನಲ್ಲಿ ಕೊಂಚ ವೈಫಲ್ಯವನ್ನು ಎದುರಿಸಿದ್ದಾರೆ. ಆದರೆ ವಿಕೆಟ್ ಕೀಪಿಂಗ್‌ನಲ್ಲಿ ತಮ್ಮ ಅಮೋಘ ಪ್ರದರ್ಶನ ಮುಂದುವರೆಸಿದ್ದಾರೆ. ಸ್ಟಂಪಿಂಗ್, ಕ್ಯಾಚಿಂಗ್ ಹಾಗೂ ಡಿಆರ್‌ಎಸ್ ಪಡೆದು ಧೋನಿ ಎಲ್ಲರ ಮನ ಗೆದ್ದಿದ್ದಾರೆ.
ಇದೇ ಪಂದ್ಯದಲ್ಲಿ ಧೋನಿ ಮತ್ತೊಂದು ಚಮತ್ಕಾರ ಮಾಡಿದ್ದಾರೆ. ಕೊನೆಯ ಓವರ್‌ನಲ್ಲಿ ಮತೀಶ್ ಪತಿರಾಣ ಅವರ ಎಸೆತ ಅಬ್ದುಲ್ ಸಮದ್ ವಂಚಿಸಿತು. ಆದರೆ ಸಮದ್ ರಿಷಭ್ ಪಂತ್ ಅವರಿಗೆ ಸ್ಟ್ರೈಕ್ ನೀಡುವ ಭರಾಟೆಯಲ್ಲಿ ಸಿಂಗಲ್ ರನ್‌ಗೆ ಓಡಿದರು. ಆದರೆ ವಿಕೆಟ್ ಹಿಂದೆ ಇದ್ದ ಧೋನಿ ತಮ್ಮ ಚೆಂಡನ್ನು ಹಿಡಿದು, ಥ್ರೋ ಮಾಡಿದರು. ಚೆಂಡು ನೇರವಾಗಿ ನಾನ್ ಸ್ಟ್ರೈಕರ್ ಎಂಡನ್ ಸ್ಟಂಪ್ಸ್ ಎಗುರಿಸಿತು. ಸಮದ್ ಬ್ಯಾಟ್ ಕ್ರೀಸ್‌ನಲ್ಲಿ ಇಡುವ ಮುನ್ನವೇ ಸ್ಟಂಪ್ಸ್‌ಗೆ ಚೆಂಡು ಬಡೆಯಿತು. ಅಬ್ದುಲ್ ಸಮದ್ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.