ಐಪಿಎಲ್ 2025 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲುವು ಮರೀಚಿಕೆಯಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಚೆನ್ನೈ ತಂಡ ಐಪಿಎಲ್ ಪ್ಲೇ ಆಫ್ ರೇಸ್‌ನಿಂದ ಬಹುತೇಕ ಹೊರಗುಳಿದಿದೆ. ಆಡಿರುವ 9 ಪಂದ್ಯಗಳಲ್ಲಿ ಚೆನ್ನೈ ಕೇವಲ 2 ರಲ್ಲಿ ಗೆಲುವು ಸಾಧಿಸಿದರೆ, 7 ರಲ್ಲಿ ಸೋಲನ್ನು ಎದುರಿಸಿದೆ. ಶುಕ್ರವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೂಡ ಚೆನ್ನೈ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ಚೆನ್ನೈ ತಂಡದ ನಾಯಕ ಎಂಎಸ್ ಧೋನಿ ದಾಖಲೆ ಸೃಷ್ಟಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2025 ರ 43 ನೇ ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಈ ಟಾಸ್ ಬಳಿಕ ಟಿ20 ಕ್ರಿಕೆಟ್‌ನಲ್ಲಿ ಎಂಎಸ್ ಧೋನಿ ದೊಡ್ಡ ಸಾಧನೆ ಮಾಡಿದರು. ಈ ಮೈಲಿಗಲ್ಲು ಸಾಧಿಸಿದ ನಾಲ್ಕನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯುವ ಮೂಲಕ ಧೋನಿಯ 400ನೇ ಟಿ20 ಪಂದ್ಯವನ್ನು ಆಡಿದರು. ಇದರೊಂದಿಗೆ ಅವರು 400 ಟಿ20 ಪಂದ್ಯಗಳನ್ನು ಆಡಿದ ಕ್ರಿಕೆಟಿಗರ ಪಟ್ಟಿಗೆ ಸೇರಿದರು. ಈ ಮೈಲಿಗಲ್ಲು ತಲುಪಿದ ನಾಲ್ಕನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೂ ಧೋನಿ ಪಾತ್ರರಾಗಿದರು. ಐದು ಬಾರಿ ಚೆನ್ನೈ ತಂಡವನ್ನು ಚಾಂಪಿಯನ್ ಮಾಡಿದ ದಿಗ್ಗಜ ನಾಯಕ ಧೋನಿ, ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ವಿರಾಟ್ ಕೊಹ್ಲಿ ಅವರ ಕ್ಲಬ್‌ಗೆ ಸೇರ್ಪಡೆಗೊಂಡರು.
ರೋಹಿತ್ ಶರ್ಮಾ - 456 ಪಂದ್ಯ
ದಿನೇಶ್ ಕಾರ್ತಿಕ್ - 412 ಪಂದ್ಯ
ವಿರಾಟ್ ಕೊಹ್ಲಿ - 408 ಪಂದ್ಯ
ಎಂಎಸ್ ಧೋನಿ - 400 ಪಂದ್ಯ
ವಿಶ್ವ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕೀರನ್ ಪೊಲಾರ್ಡ್ ತಮ್ಮ 19 ವರ್ಷಗಳ ವೃತ್ತಿಜೀವನದಲ್ಲಿ 695 ಟಿ20 ಪಂದ್ಯಗಳನ್ನು ಆಡುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಡ್ವೇನ್ ಬ್ರಾವೋ 582 ಪಂದ್ಯಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಶೋಯೆಬ್ ಮಲಿಕ್ 557 ಪಂದ್ಯಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಸಕ್ರಿಯ ಕ್ರಿಕೆಟಿಗರಲ್ಲಿ, ಆಂಡ್ರೆ ರಸೆಲ್ 546 ಪಂದ್ಯಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಒಟ್ಟಾರೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ರೋಹಿತ್ ಭಾರತ ಪರ ಟಿ20 ಮಾದರಿಯಲ್ಲಿ ಅತಿ ಹೆಚ್ಚು 456 ಪಂದ್ಯಗಳನ್ನು ಆಡಿದ ಆಟಗಾರನಾಗಿ ಉಳಿದಿದ್ದಾರೆ.