ವಿಶ್ವದ ನಂಬರ್ 1 ಶ್ರೇಯಾಂಕಿತ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಫಾರ್ಮ್ ಕಳೆದುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಡಕೌಟ್ ಆಗಿದ್ದ ಸೂರ್ಯ, ಐಪಿಎಲ್‌ನಲ್ಲಿ ಕೂಡ ಕಳಪೆ ಫಾರ್ಮ್ ಮುಂದುವರೆಸಿದ್ದಾರೆ, ಎರಡೂ ಪಂದ್ಯಗಳಲ್ಲಿ ಕಡಿಮೆ ಮೊತ್ತಕ್ಕೆ ಔಟಾಗಿದ್ದು ತಂಡದ ಮೇಲಿನ ಒತ್ತಡವನ್ನು ಹೆಚ್ಚಿಸಿದೆ.
ಮುಂಬೈ ಇಂಡಿಯನ್ಸ್ ಮುಖ್ಯ ತರಬೇತುದಾರ ಮಾರ್ಕ್ ಬೌಚರ್ ಸೂರ್ಯಕುಮಾರ್ ಯಾದವ್ ಫಾರ್ಮ್ ಬಗ್ಗೆ ಮಾತನಾಡಿದ್ದಾರೆ. ಸದ್ಯ ಕಳಪೆ ಫಾರ್ಮ್‌ನಲ್ಲಿರುವ ಅವರು, ಮುಂದಿನ ಪಂದ್ಯಗಳಲ್ಲಿ ಮತ್ತೆ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸೂರ್ಯಕುಮಾರ್ ವಿಶ್ವದ ಅತ್ಯುತ್ತಮ ಟಿ20 ಆಟಗಾರರಲ್ಲಿ ಒಬ್ಬರು ಎಂದು ಹೇಳಿದ್ದು, ಅವರ ಮೇಲೆ ಹೆಚ್ಚು ಒತ್ತಡ ಹಾಕಲು ಬಯಸುವುದಿಲ್ಲ ಎಂದು ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಪಂದ್ಯದಲ್ಲಿ 15 ರನ್‌ಗಳಿಗೆ ಔಟಾದ ನಂತರ, ಶನಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಕೇವಲ ಒಂದು ರನ್ ಮಾತ್ರ ಗಳಿಸಿದರು. ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೆಡ್ ಕೋಚ್ ಬೌಚರ್ ಸೂರ್ಯಕುಮಾರ್ ಫಾರ್ಮ್ ಬಗ್ಗೆ ವಿವರ ನೀಡಿದರು.

ಅವರಿಗೆ ಬೆಂಬಲ ನೀಡುತ್ತೇವೆ
"ಸೂರ್ಯಕುಮಾರ್ ಯಾದವ್ ಪ್ರತಿಭಾವಂತ ಕ್ರಿಕೆಟಿಗ, ವಿಶ್ವದ ಅತ್ಯುತ್ತಮ ಟಿ20 ಆಟಗಾರರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚಿನ ರನ್‌ಗಳನ್ನು ಗಳಿಸಿಲ್ಲ, ಆದರೆ ಅವರೊಬ್ಬ ಅದ್ಭುತ ಆಟಗಾರ, ಮುಂದಿನ ದಿನಗಳಲ್ಲಿ ಉತ್ತಮವಾಗಿ ಆಡುತ್ತಾರೆ, ನಾನು ಅವರ ಮೇಲೆ ಹೆಚ್ಚಿನ ಒತ್ತಡ ಹಾಕಲು ಬಯಸುವುದಿಲ್ಲ, ಅವರು ಏನು ಮಾಡಬಹುದು ಎಂದು ನಮಗೆಲ್ಲರಿಗೂ ತಿಳಿದಿದೆ. ಅವರಿಗೆ ಬೆಂಬಲ ನೀಡುತ್ತೇವೆ. ಅಂತಿಮ ಹಂತಗಳಲ್ಲಿ ಉತ್ತಮ ಫಾರ್ಮ್ ಅನ್ನು ಪಡೆಯಲು ಪ್ರಯತ್ನಿಸಲು ಅವರಿಗೆ ಸಹಾಯ ಮಾಡಿದರೆ, ದೊಡ್ಡ ರನ್ ಗಳಿಸಬಹುದು" ಎಂದು ಹೇಳಿದರು.
ಕಳೆದ ಆವೃತ್ತಿಯಲ್ಲಿ ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು, ಅಲ್ಲದೆ ಭಾರತ ತಂಡಕ್ಕಾಗಿ ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದ್ದರು. ಕಡಿಮೆ ಸಮಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮೂಲಕ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದರು. ಆದರೆ, 2023ರಲ್ಲಿ ಸೂರ್ಯಕುಮಾರ್ ಯಾದವ್ ಅವರಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ವಿಫಲವಾದ ಬಳಿಕ, ಏಕದಿನ ಸರಣಿಯಲ್ಲಿ ಕೂಡ ಕಳಪೆ ಪ್ರದರ್ಶನ ನೀಡಿದ್ದರು.

ವಾಂಖೆಡೆಯಲ್ಲಿ 157 ರನ್ ಸಾಕಾಗಲ್ಲ
ಮುಂಬೈ ಇಂಡಿಯನ್ಸ್ ತಂಡದ ಎರಡನೇ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಾಂಖೆಡೆ ಅಂಗಳದಲ್ಲಿ 157 ರನ್‌ಗಳು ಸಾಕಾಗುವುದಿಲ್ಲ ಎಂದು ಹೇಳಿದರು. ಮಾರ್ಕ್ ಬೌಚರ್ ಅವರ ಪ್ರಕಾರ ಮುಂಬೈ ಇಂಡಿಯನ್ಸ್ 190 ರನ್‌ಗಳನ್ನು ಗಳಿಸಿದ್ದರೆ ಗೆಲ್ಲುವ ಅವಕಾಶ ಇರುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಉತ್ತಮ ಆರಂಭ ಪಡೆದರೂ ನಂತರ ಬ್ಯಾಟರ್ ಗಳು ಸಂಪೂರ್ಣವಾಗಿ ವಿಫಲವಾದರು ಎಂದು ಹೇಳಿದರು.
"ಅಜಿಂಕ್ಯ ರಹಾನೆ ಅತ್ಯುತ್ತಮ ಇನ್ನಿಂಗ್ಸ್ ಆಡಿದರು, ಆದರೆ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಹೆಚ್ಚಿನ ಮಾರಕ ಪರಿಣಾಮ ಬೀರಿತು. ಟಿ20 ಕ್ರಿಕೆಟ್‌ನಲ್ಲಿ ನಾವು ಅತ್ಯುತ್ತಮ ಬ್ಯಾಟರ್ ಗಳನ್ನು ಹೊಂದಿರುವಾಗ, ಅದರಲ್ಲೂ ತಂಡದಲ್ಲಿ ಏಳು ಜನ ಬ್ಯಾಟರ್ ಗಳು ಇದ್ದಾಗ ನಾವು 157 ರನ್ ಗಳಿಸಿದ್ದು ಉತ್ತಮವಾಗಿರಲಿಲ್ಲ, ನಾವು 180-190 ರನ್ ಗಳಿಸಬೇಕಿತ್ತು." ಎಂದರು.