ಕಳಪೆ ಆರಂಭದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್‌ನಲ್ಲಿ ಪ್ಲೇಆಪ್ ಹಂತಕ್ಕೆ ಪ್ರವೇಶಿಸಿದ್ದು ಫೈನಲ್ ಹಂತಕ್ಕೆ ಪ್ರವೇಶಿಸುವಲ್ಲಿ ಎಡವಿದೆ. ಈ ಆವೃತ್ತಿಯಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿರುವ ಮುಂಬೈ ಇಂಡಿಯನ್ಸ್ ತಂಡ ಕೊನೆಯ ಹಂತದಲ್ಲಿ ಅದ್ಭುತ ಲಯಕ್ಕೆ ಮರಳಿತ್ತು. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡದಲ್ಲಿ ಸಾಕಷ್ಟು ಸಕಾರಾತ್ಮಕ ಅಂಶಗಳಿದ್ದರೂ ಅನೇಕ ಋನಣಾತ್ಮಕ ಅಂಶಗಳು ತಂಡಕ್ಕೆ ಕಾಡಿರುವುದು ಸುಳ್ಳಲ್ಲ.
ಇನ್ನು ಮುಂದಿನ ಐಪಿಎಲ್ ಆವೃತ್ತಿಯಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುವ ಹಿನ್ನೆಲೆಯಲ್ಲಿ ಮುಂಬೈ ಇಂಡಿಯನ್ಸ್ ಕೆಲ ಬದಲಾವಣೆ ಮಾಡಿಕೊಳ್ಳುವುದು ಸಹಜ. ಹೀಗಾಗಿ ಈ ಬಾರಿಯ ತಂಡದಲ್ಲಿರುವ ನಾಲ್ವರು ಆಟಗಾರರನ್ನು ತಂಡದಿಂದ ಕೈಬಿಟ್ಟು ಅವರ ಬದಲಿಗೆ ಪರಿಣಾಮಕಾರಿ ಆಟಗಾರರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ತಂಡ ತಂಡದಿಂದ ಕೈಬಿಡಬಹುದಾದ ಆ ನಾಲ್ವರು ಆಟಗಾರರು ಯಾರು ಎಂಬುದನ್ನು ಈ ವರದಿಯಲ್ಲಿ ನೋಡೋಣ. ಮುಂದೆ ಓದಿ..

ಕ್ರಿಸ್ ಜೋರ್ಡನ್‌ಗೆ ಕೊಕ್ ಸಾಧ್ಯತೆ
ಈ ಬಾರಿಯ ಐಪಿಎಲ್‌ನಲ್ಲಿ ಜೋಫ್ರಾ ಆರ್ಚರ್ ಬದಲಿಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಿಕೊಂಡಿದ್ದರು ಕ್ರಿಸ್ ಜೋರ್ಡನ್. ಡೆತ್ ಓವರ್ ಸ್ಪೆಶಲಿಸ್ಟ್ ಎಂದು ಕರೆಸಿಕೊಳ್ಳುವ ಈ ಅನುಭವಿ ಆಟಗಾರನ ಮೇಲೆ ಮುಂಬೈ ಇಂಡಿಯನ್ಸ ತಂಡ ಸಾಕಷ್ಟು ನಿರೀಕ್ಷೆ ಹೊಂದಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡದ ನಿರೀಕ್ಷೆಯ ಮಟ್ಟವನ್ನು ಮುಟ್ಟುವಲ್ಲಿ ಜೋರ್ಡನ್ ವಿಫಲವಾದರು ಅಲ್ಲದೆ ರನ್ ಬಿಟ್ಟುಕೊಡುವುದರಲ್ಲಿಯೂ ಧಾರಾಳವಾದರು. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡ ಮುಂದಿನ ಆವೃತ್ತಿಗೆ ಜೋರ್ಡನ್ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ.
ಯುವ ಆಟಗಾರ ಹೃತಿಕ್ ಶೋಕೀನ್
ಈ ಆವೃತ್ತಿಯಲ್ಲಿರುವ ಎರಡನೇ ಹೆಸರು ಹೃತಿಕ್ ಶೋಕೀನ್. 2022ರ ಆವೃತ್ತಿಯಲ್ಲಿ ಶೋಕೀನ್ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದರು. ಆದರೆ ಈ ಬಾರಿಯ ಆವೃತ್ತಿಯಲ್ಲಿ ಅಂಥಾದ್ದೇ ಪ್ರದರ್ಶನ ನೀಡುವಲ್ಲಿ ಅವರು ವಿಫಲವಾದರು. ಈ ಆವೃತ್ತಿಯಲ್ಲಿ ಶೋಕೋನ್ 8 ಪಂದ್ಯಗಳಲ್ಲಿ ಆಡಿದ್ದು ಕೇವಲ 3 ವಿಕೆಟ್ ಪಡೆದುಕೊಂಡಿದ್ದಾರೆ ಅಲ್ಲದೆ 23 ರನ್‌ಗಳನ್ನು ಮಾತ್ರವೇ ಗಳಿಸಿದ್ದಾರೆ.
ಅರ್ಶದ್ ಖಾನ್
ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಅರ್ಶದ್ ಖಾನ್ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟಿದ್ದರು. ಕೆಲ ಕಾಲದಿಂದ ಮುಂಬೈ ಇಮಡಿಯನ್ಸ್ ತಂಡದಲ್ಲಿರುವ ಅರ್ಶದ್ ನೆಟ್ಸ್‌ನಲ್ಲಿ ಸಾಕಷ್ಟು ಪರಿಶ್ರಮಪಟ್ಟಿದ್ದರು. ಆದರೆ ಆಡಿದ ಐದು ಪಂದ್ಯಗಳಲ್ಲಿ ಅರ್ಶದ್ ಖಾನ್ ಕೇವಲ 6 ವಿಕೆಟ್‌ಗಳನ್ನು ಮಾಥ್ರವೇ ಪಡೆದುಕೊಂಡಿದ್ದು 13.41ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಹೀಗಾಗಿ ಅರ್ಶದ್ ಖಾನ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ.
ಡುವಾನ್ ಜಾನ್ಸನ್
ಮಾರ್ಕೋ ಜಾನ್ಸನ್ ಅವರ ಅವಳಿ ಸೋದರ ಡುವಾನ್ ಜಾನ್ಸನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಮುಂದಿನ ಆವೃತ್ತಿಗೆ ಉಳಿದುಕೊಳ್ಳುವ ಸಾಧ್ಯತೆ ಬಹಳ ಕಡಿಮೆಯಿದೆ. ಈ ಆವೃತ್ತಿಯಲ್ಲಿ ಡುವಾನ್‌ಗೆ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಆಡುವ ಅವಕಜಾಶ ದೊರೆಯಿತು. ಆ ಪಂದ್ಯದಲ್ಲಿ ಅವರು 51 ರನ್‌ಗಳನ್ನು ನೀಡಿದ್ದು ಕೇವಲ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಗೂ ಮುನ್ನ ತಂಡದಿಂದ ಅವರನ್ನು ಬಿಡುಗಡೆಗೊಳಿಸುವ ಸಾಧ್ಯತೆ ಹೆಚ್ಚಿದೆ.