ಏಷ್ಯಾ ಕಪ್ ಸೋಲಿನ ಬೆನ್ನಲ್ಲೇ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಮುಷ್ಫಿಕರ್ ರಹೀಮ್!

ಏಷ್ಯಾ ಕಪ್‌ನಲ್ಲಿ ಬಾಂಗ್ಲಾದೇಶ ತಂಡ ಲೀಗ್ ಹಂತದಿಂದ ಹೊರಬಿದ್ದಿದ್ದು ಈ ಸಂದರ್ಭದಲ್ಲಿ ತಂಡದ ಅನುಭವಿ ಆಟಗಾರ ಮುಶ್ಫಿಕರ್ ರಹೀಮ್ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಣೆ ಮಾಡಿದ್ದಾರೆ. ಟ್ವಿಟ್ಟರ್‌ನಲ್ಲಿ ಭಾನುವಾರ ತಮ್ಮ ನಿವೃತ್ತಿಯ ಘೋಷಣೆ ಮಾಡಿದ್ದು ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಹೆಚ್ಚಿನ ಗಮನ ಹರಿಸುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಪ್ರಕಟಿಸಿದ್ದಾರೆ.
35ರ ಹರೆಯದ ಅನುಭವಿ ಆಟಗಾರ ಏಷ್ಯಾಕಪ್‌ನಲ್ಲಿ ನೀಡಿದ ಪ್ರದರ್ಶನ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಬ್ಯಾಟಿಂಗ್‌ನಲ್ಲಿ ವೈಫಲ್ಯವನ್ನು ಅನುಭವಿಸಿದ್ದ ಮುಷ್ಫಿಕರ್ ರಹೀಮ್ ವಿಕೆಟ್ ಕೀಪರ್ ಆಗಿಯೂ ಕಳಪೆ ಪ್ರದರ್ಶನ ನೀಡುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅನೇಕ ಅವಕಾಶಗಳನ್ನು ಕೈಚೆಲ್ಲುವ ಮೂಲಕ ತಂಡದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು. ಶ್ರೀಲಂಕಾ ವಿರುದ್ಧ ಮಹತ್ವದ ಪಂದ್ಯದಲ್ಲಿ ರಹೀಮ್ ಮಾಡಿದ ಕೆಲ ಎಡವಟ್ಟುಗಳು ತಂಡದ ಸೋಲಿಗೆ ಕಾರಣವಾಗಿತ್ತು ಎಂದು ವಿಶ್ಲೇಷಣೆಗಳು ನಡೆದಿತ್ತು. ಈ ಪಂದ್ಯದಲ್ಲಿ ಬಾಂಗ್ಲಾದೇಶ 2 ವಿಕೆಟ್‌ಗಳ ಅಂತರದಿಂದ ಸೋಲು ಅನುಭವಿಸುವುದರ ಜೊತೆಗೆ ಟೂರ್ನಿಯಿಂದಲೇ ಹೊರಬಿದ್ದಿದೆ.

102 ಟಿ20ಐ ಪಂದ್ಯಗಳನ್ನಾಡಿರುವ ರಹೀಮ್
ಬಾಂಗ್ಲಾದೇಶದ ಅನುಭವಿ ಆಟಗಾರ ಮುಷ್ಫಿಕರ್ ರಹೀಮ್ 102 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ. ತಮ್ಮ 17 ವರ್ಷಗಳ ಸುದೀರ್ಘ ಟಿ20ಐ ವೃತ್ತಿ ಜೀವನದಲ್ಲಿ 1500 ರನ್‌ಗಳನ್ನು ಗಳಿಸಿದ್ದು 19.48ರ ಸರಾಸರಿ ಹೊಂದಿದ್ದಾರೆ. ಅವರ ಸ್ಟ್ರೈಕ್‌ರೇಟ್ 115.03 ಆಗಿದೆ. ಅಂತಾರಾಷ್ಟ್ರೀಯ ಚುಟುಕು ಕ್ರಿಕೆಟ್ ಮಾದರಿಯಲ್ಲಿ 50 ಸಿಕ್ಸರ್ ಬಾರಿಸಿದ್ದಾರೆ.

ಫ್ರಾಂಚೈಸಿ ಲೀಗ್‌ಗಳಲ್ಲಿ ಮುಂದುವರಿಯುವುದಾಗಿ ಸ್ಪಷ್ಟನೆ
ಇನ್ನು ಮುಷ್ಫಿಕರ್ ರಹೀಮ್ ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಏಕದಿನ ಹಾಗೂ ಟೆಸ್ಟ್ ಪಂದ್ಯಗಳ ಜೊತೆಗೆ ಲೀಗ್ ಕ್ರಿಕೆಟ್‌ನಲ್ಲಿ ಅವಕಾಶ ಸಿಕ್ಕರೆ ಆಟವನ್ನು ಮುಂದುವರಿಸುವುದಾಗಿಯೂ ಹೇಳಿಕೊಂಡಿದ್ದಾರೆ. "ನಾನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಣೆ ಮಾಡುತ್ತಿದ್ದೇನೆ. ಟೆಸ್ಟ್ ಹಾಗೂ ಏಕದಿನ ಮಾದರಿಗೆ ಹೆಚ್ಚಿನ ಗ,ನಹರಿಸುವ ಕಾರಣ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅವಕಾಶ ಸಿಕ್ಕಾಗ ನಾನು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದೇನೆ. ಎರಡು ಮಾದರಿಗಳಲ್ಲಿ ಆಟವನ್ನು ಮುಂದುವರಿಸಲು ಹೆಮ್ಮೆಯಿಂದ ಕಾಯುತ್ತಿದ್ದೇನೆ" ಎಂದಿದ್ದಾರೆ ಮುಷ್ಫಿಕರ್ ರಹೀಮ್.

ವಿಶ್ವಕಪ್‌ನ ಸನಿಹದಲ್ಲಿರುವಾಗಲೇ ನಿವೃತ್ತಿ ಘೋಷಣೆ
ಇನ್ನು ಟಿ20 ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದೆ. ತಂಡಗಳ ಸ್ಕ್ವಾಡ್‌ಗಳ ಘೋಷಣೆಗೂ ದಿನಗಳು ಸಮೀಪಿಸುತ್ತಿದ್ದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಈ ಮಹತ್ವದ ಟೂರ್ನಿಯಲ್ಲಿ ಭಾಗವಹಿಸುವ ತಮ್ಮ ತಂಡದ ಆಟಗಾರರ ಪಡೆಯನ್ನು ಈಗಾಗಲೇ ಘೋಷಣೆ ಮಾಡಿದೆ. ಈ ಹಂತದಲ್ಲಿ ಭಾಂಗ್ಲಾದೇಶದ ಅನುಭವಿ ಆಟಗಾರ ಚುಟುಕು ಕ್ರಿಕೆಟ್‌ನಿಂದ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications