ಇನ್ನೇನು ಎಂಟು ದಿನಗಳಲ್ಲಿ ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್ ಸರಣಿ ಚೆನ್ನೈನಲ್ಲಿ ಆರಂಭವಾಗಲಿದೆ. ಈ ಸರಣಿಗೆ ಉಭಯ ತಂಡಗಳು ಭರ್ಜರಿ ತಯಾರಿ ಮಾಡಿಕೊಂಡಿವೆ. ಈಗಾಗಲೇ ಪಾಕಿಸ್ತಾನ ತಂಡವನ್ನು ತವರಿನಲ್ಲಿ ಸೋಲಿಸಿ ಟೆಸ್ಟ್ ಸರಣಿ ಗೆದ್ದಿರುವ ಪಾಕ್, ಭಾರತವನ್ನು ಕಾಡಲು ಸಜ್ಜಾಗಿದೆ. ಇನ್ನು ಈ ಸರಣಿಯಲ್ಲಿ ಹಲವು ದಾಖಲೆಗಳು ನಿರ್ಮಾಣವಾಗುವ ನಿರೀಕ್ಷೆ ಇದೆ. ಈ ಸರಣಿಯಲ್ಲಿ ಸ್ಟಾರ್ ಆಟಗಾರರು ಮೈದಾನಕ್ಕೆ ಇಳಿಯಲಿದ್ದು, ರೋಚಕತೆ ಹುಟ್ಟಿಸಿದೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳ ಒಡೆಯ. ಇವರ ಒಂದು ದಾಖಲೆಯ ಮೇಲೆ ಬಾಂಗ್ಲಾದೇಶದ ಬ್ಯಾಟರ್ ಒಬ್ಬರು ಕಣ್ಣು ನೆಟ್ಟಿದ್ದಾರೆ. ಈ ಸರಣಿಯಲ್ಲಿ ಬಾಂಗ್ಲಾದೇಶದ ಭರವಸೆಯ ಬ್ಯಾಟರ್, ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಅಳಿಸಿ ಹಾಕಬಹುದು ಎಂಬ ನಿರೀಕ್ಷೆಗಳು ಹೆಚ್ಚಿವೆ. ಬಾಂಗ್ಲಾದೇಶದ ಒಬ್ಬ ಬ್ಯಾಟ್ಸ್‌ಮನ್ ಸಚಿನ್ ಅವರ ಆ ಒಂದು ದಾಖಲೆಗೆ ತೀರಾ ಹತ್ತಿರ ಬಂದಿದ್ದಾರೆ.

ಟೀಮ್ ಇಂಡಿಯಾದ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್. ಅವರು ಕ್ರಿಕೆಟ್‌ನಲ್ಲಿ ಅದೆಷ್ಟೋ ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತ ಹಾಗೂ ಬಾಂಗ್ಲಾದೇಶಗಳ ನಡುವಣ ಟೆಸ್ಟ್ ಕ್ರಿಕೆಟ್‌ನಲ್ಲೂ ಸಚಿನ್ ಹೆಸರಿನಲ್ಲಿ ಒಂದು ದಾಖಲೆ ಇದೆ. 2000 ರಿಂದ 2010 ರವರೆಗೆ, ಸಚಿನ್ ತೆಂಡೂಲ್ಕರ್ ಬಾಂಗ್ಲಾದೇಶ ವಿರುದ್ಧ 7 ಟೆಸ್ಟ್ ಪಂದ್ಯಗಳ 9 ಇನ್ನಿಂಗ್ಸ್‌ಗಳಲ್ಲಿ ಒಟ್ಟು 820 ರನ್ ಗಳಿಸಿದ್ದಾರೆ. ಈ ವೇಳೆ 5 ಶತಕಗಳನ್ನು ಸಿಡಿಸಿದ್ದಾರೆ.
ಉಭಯ ದೇಶಗಳ ಬ್ಯಾಟರ್‌ಗಳಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಎರಡನೇ ಆಟಗಾರ ಎಂಬ ಕೀರ್ತಿ ಬಾಂಗ್ಲಾದ ಭರವಸೆಯ ಬ್ಯಾಟರ್ ಮುಶ್ಫಿಕರ್ ರಹೀಮ್ ಅವರಿಗೆ ಸಲ್ಲುತ್ತದೆ. ಬಾಂಗ್ಲಾದೇಶದ ಮುಶ್ಫಿಕರ್ ರಹೀಮ್ 2010 ರಲ್ಲಿ ಭಾರತದ ವಿರುದ್ಧ ಮೊದಲ ಟೆಸ್ಟ್ ಆಡಿದ್ದರು. ಈ ವರೆಗೆ ಭಾರತದ ವಿರುದ್ಧ 8 ಟೆಸ್ಟ್ ಪಂದ್ಯಗಳ 15 ಇನ್ನಿಂಗ್ಸ್‌ಗಳಲ್ಲಿ ಒಟ್ಟು 604 ರನ್ ಗಳಿಸಿದ್ದಾರೆ. ಇದರಲ್ಲಿ ಎರಡು ಶತಕ ಮತ್ತು ಎರಡು ಅರ್ಧ ಶತಕಗಳಿವೆ.

ಸಚಿನ್ ತೆಂಡೂಲ್ಕರ್ ಉಭಯ ದೇಶಗಳ ನಡುವಣ ಟೆಸ್ಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟರ್. ಒಂದು ವೇಳೆ ಈ ಸರಣಿಯಲ್ಲಿ ಮುಶ್ಪಿಕರ್ ರಹೀಮ್ 216 ರನ್ ಸಿಡಿಸಿದಲ್ಲಿ ಅವರು ಸಚಿನ್ ದಾಖಲೆ ಅಳಿಸಿ ಹಾಕುತ್ತಾರೆ. ಅಂಕಿ ಅಂಶಗಳ ಲೆಕ್ಕಾಚಾರವನ್ನು ನೋಡಿದರೆ, ಸಚಿನ್ ಕಡಿಮೆ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಮುಶ್ಫಿಕರ್ ಈಗಾಗಲೇ ಭಾರತದ ಪರ 15 ಬಾರಿ ಬ್ಯಾಟ್ ಬೀಸಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ಸರಣಿಗೆ ಬಾಂಗ್ಲಾದೇಶ ಇನ್ನೂ ತಂಡವನ್ನು ಪ್ರಕಟಿಸಿಲ್ಲ. ಬಾಂಗ್ಲಾ ತಂಡದಲ್ಲಿ ನಿಶ್ಚಿತವಾಗಿ ಮುಶ್ಫಿಕರ್ ರಹೀಮ್‌ಗೆ ಸ್ಥಾನ ಸಿಗುತ್ತದೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಮುಶ್ಫಿಕರ್ ರಹೀಮ್ 191 ರನ್‌ಗಳ ಅದ್ಭುತ ಇನ್ನಿಂಗ್ಸ್ ಕಟ್ಟಿದ್ದರು.