ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್ ತಂಡಗಳು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಿದೆ. ಮೊದಲ ಪಂದ್ಯ ಮಳೆಗೆ ಆಹುತಿಯಾದ ಬಳಿಕ ಎರಡನೇ ಪಂದ್ಯದಲ್ಲಿ ಪ್ರವಾಸ ನ್ಯೂಜಿಲೆಂಡ್ ತಂಡ ಬರೊಬ್ಬರಿ 86 ರನ್‌ಗಳ ಅಂತರದಿಮದ ಗೆಲುವು ಸಾಧಿಸಿತ್ತು. ಹೀಗಾಗಿ ಸರಣಿಯ ಕೊನೆಯ ಪಂದ್ಯದಲ್ಲಿ ಕಿವೀಸ್ ಪಡೆ ಗೆದ್ದು ಸರಣಿ ಜಯದ ಮೇಲೆ ಕಣ್ಣಿಟ್ಟಿದ್ದರೆ ಬಾಂಗ್ಲಾದೇಶ ಸರಣಿ ಸಮಬಲಗೊಳಿಸುವ ಪ್ರಯತ್ನ ನಡೆಸಿದಿದೆ.
ವಿಶ್ವಕಪ್‌ಗೆ ಮುನ್ನ ಆಡುತ್ತಿರುವ ಅಂತಿಮ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಇದಾಗಿರುವ ಕಾರಣ ಅದ್ಭುತ ಪ್ರದರ್ಶನ ನೀಡಿ ಆತ್ಮವಿಶ್ವಾಸದೊಂದಿಗೆ ವಿಶ್ವಕಪ್‌ಗೆ ಪ್ರವೇಶಿಸಲು ಹಾತೊರೆಯುತ್ತಿದೆ. ಆದರೆ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್‌ಗೆ ಕಣಕ್ಕಿಳಿದ ಬಾಂಗ್ಲಾದೇಶ 171 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಇನ್ನು ಈ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿದಿತ್ತು. ಲಿಟನ್ ದಾಸ್, ತಮಿಮ್ ಇಕ್ಬಾಲ್, ಸೌಮ್ಯ ಸರ್ಕಾರ್ ಹಾಗೂ ಮುಸ್ತಫಿಜುರ್ ರಹ್ಮಾನ್ ಆಡುವ ಬಳಗದಿಂದ ಹೊರಗುಳಿದಿದ್ದರು.

ಇನ್ನು ಈ ಪಂದ್ಯದಲ್ಲಿ ಬಾಂಗ್ಲಾದೇಶ ಬ್ಯಾಟಿಂಗ್ ನಡೆಸುತ್ತಿದ್ದಾಗ ವಿಚಿತ್ರ ಸನ್ನಿವೇಶವೊಂದು ಭಾರೀ ವೈರಲ್ ಆಗಿದೆ. ತಂಡದ ಅನುಭವಿ ಆಟಗಾರ, ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ವಿಲಕ್ಷಣ ರೀತಿಯಲ್ಲಿ ವಿಕೆಟ್ ಕಳೆದುಕೊಂಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಅದು ಪಂದ್ಯದ 16ನೇ ಓವರ್‌ನ ಮೊದಲ ಎಸೆತ. 88 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು ಬಾಂಗ್ಲಾದೇಶ. ಈ ಸಂದರ್ಭದಲ್ಲಿ ಫರ್ಗ್ಯೂಸನ್ ಎಸೆತವನ್ನು ಮುಷ್ಫಿಕರ್ ಬ್ಲಾಕ್ ಮಾಡುವ ಪ್ರಯತ್ನ ನಡೆಸಿದರು. ಆದರೆ ಇಲ್ಲಿ ಬ್ಯಾಟರ್ ಎಡವಟ್ಟು ಮಾಡಿಕೊಂಡರು. ಚೆಂಡು ವಿಕೆಟ್‌ನತ್ತಲೇ ಹಾರಿತ್ತು. ಈ ಸಂದರ್ಭದಲ್ಲಿ ರಹೀಮ್ ತನ್ನಲ್ಲಿನ ಫುಟ್ಬಾಲ್ ಕೌಶಲ್ಯವನ್ನು ಬಳಸಿ ಚೆಂಡನ್ನು ವಿಕೆಟ್‌ಗೆ ಬೀಳುವುದನ್ನು ತಪ್ಪಿಸುವ ಪ್ರಯತ್ನ ನಡೆಸಿದರಾದರೂ ಚೆಂಡು ವಿಕೆಟ್‌ಗೆ ಬಡಿದಿತ್ತು.
ಈ ಸಂದರ್ಭದಲ್ಲಿ ಮುಷ್ಫಿಕರ್ ವಿಕೆಟ್ ಉಳಿಸಿಕೊಳ್ಳುವುದಕ್ಕಾಗಿ ನಡೆಸಿದ ಪ್ರಯತ್ನ ಕ್ಯಾಮರಾದಲ್ಲಿ ಸಂಪೂರ್ಣವಾಗಿ ಸೆರೆಯಾಗಿದ್ದು ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಕೂಡ ಚಿತ್ರ ವಿಚಿತ್ರ ಕಾಮೆಂಟ್ಸ್‌ಗಳ ಮೂಲಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಇದು ಈ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವಾಗಿದೆ. ಸರಣಿಯ ಮೊದಲ ಪಂದ್ಯ ಮಳೆಗೆ ಆಹುತಿಯಾದ ಬಳಿಕ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಅದ್ಭುತ ಪ್ರದರ್ಶನ ನೀಡಿದ್ದು ಭರ್ಜರಿ ಗೆಲುವು ಸಾಧಿಸಿದೆ. ಹೀಗಾಗಿ ಈ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸುವ ಲೆಕ್ಕಾಚಾರದೊಂದಿಗೆ ಬಾಂಗ್ಲಾದೇಶ ತಂಡ ಇಂದು ಕಣಕ್ಕಿಳಿದಿದೆ. ಆದರೆ ಬ್ಯಾಟಿಂಗ್ ನಡೆಸಿರುವ ತಂಡಕ್ಕೆ ಆರಂಭದಲ್ಲಿಯೇ ಭಾರೀ ಹಿನ್ನಡೆಯಾಗಿದ್ದು ಕಿವೀಸ್ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸಿತ್ತು.
ಇನ್ನು ಈ ಪಂದ್ಯದಲ್ಲಿಯೂ ಬಾಂಗ್ಲಾದೇಶ ತಂಡವನ್ನು ನ್ಯೂಜಿಲೆಂಡ್ ಮಣಿಸುವಲ್ಲಿ ಯಶಸ್ವಿಯಾಯಿತು. ಬಾಂಗ್ಲಾದೇಶ ನೀಡಿದ ಗುರಿಯನ್ನು ಸುಲಭವಾಗಿ ಬೆನ್ನಟ್ಟಿದ ಕಿವೀಸ್ ಪಡೆ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಈ ಮೂಲಕ ಬಾಂಗ್ಲಾದೇಶ 7 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿತು.
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತಂಝೀದ್ ಹಸನ್, ತೌಹಿದ್ ಹೃದಯೋಯ್, ಮಹಮ್ಮದುಲ್ಲಾ, ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಜಾಕಿರ್ ಹಸನ್, ಮಹೇದಿ ಹಸನ್, ನಸುಮ್ ಅಹ್ಮದ್, ಹಸನ್ ಮಹಮೂದ್, ಶೋರಿಫುಲ್ ಇಸ್ಲಾಂ, ಖಲೀದ್ ಅಹ್ಮದ್
ಬೆಂಚ್: ರಿಶಾದ್ ಹೊಸೈನ್, ಅನಾಮುಲ್ ಹಕ್, ಮೆಹಿದಿ ಹಸನ್ ಮಿರಾಜ್, ತಸ್ಕಿನ್ ಅಹ್ಮದ್
ನ್ಯೂಜಿಲೆಂಡ್: ಫಿನ್ ಅಲೆನ್, ವಿಲ್ ಯಂಗ್, ಡೀನ್ ಫಾಕ್ಸ್‌ಕ್ರಾಫ್ಟ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೋಲ್ ಮೆಕ್‌ಕಾಂಚಿ, ಇಶ್ ಸೋಧಿ, ಆಡಮ್ ಮಿಲ್ನೆ, ಲಾಕಿ ಫರ್ಗುಸನ್ (ನಾಯಕ), ಟ್ರೆಂಟ್ ಬೌಲ್ಟ್
ಬೆಂಚ್: ಚಾಡ್ ಬೋವ್ಸ್, ಕೈಲ್ ಜೇಮಿಸನ್, ಬ್ಲೇರ್ ಟಿಕ್ನರ್, ಡೇನ್ ಕ್ಲೀವರ್