'ನನಗೆ ರೋಹಿತ್ ಆದರ್ಶ, ಆತ ಮ್ಯಾಚ್ ವಿನ್ನರ್' ಎಂದ ಪಾಕ್ ಕ್ರಿಕೆಟಿಗ!

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್‌ಮನ್ ಹೈದರ್ ಅಲಿ, ಟೀಮ್ ಇಂಡಿಯಾ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರು ತನ್ನ ಆದರ್ಶ ಕ್ರಿಕೆಟಿಗ ಎಂದಿದ್ದಾರೆ. ಆರಂಭಿಕರಾಗಿ ಭಾರತದ ಉಪನಾಯಕ ರೋಹಿತ್ ಅವರನ್ನು ಅನುಸರಿಸಲು ಬಯಸಿರುವುದಾಗಿ ಹೈದರ್ ಹೇಳಿದ್ದಾರೆ. ಅದ್ಭುತ ಬ್ಯಾಟಿಂಗ್‌ಗಾಗಿ ಸೆಳೆಯುತ್ತಿರುವ ಹೈದರ್ ಅಲಿ, ಆಗಸ್ಟ್-ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ಪ್ರವಾಸ ಸರಣಿಗೆ ಆಯ್ಕೆಯಾಗಿದ್ದಾರೆ. ಪಾಕ್-ಇಂಗ್ಲೆಂಡ್ ಸರಣಿ ಇಂಗ್ಲೆಂಡ್‌ನ ಜೈವಿಕ ಸುರಕ್ಷಾ ಸ್ಟೇಡಿಯಂನಲ್ಲಿ ನಡೆಯಲಿದೆ.
2019-20ರ ಸೀಸನ್‌ನಲ್ಲಿ ಹೈದರ್ ಅಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ 2020-21ರ ಸೀಸನ್‌ನಲ್ಲೂ ಹೈದರ್ ಉದಯೋನ್ಮುಖ ಆಟಗಾರನಾಗಿ ಪಾಕ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಪಾಕ್ ಅಂಡರ್ 19 ತಂಡದಲ್ಲಿದ್ದು ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯಧಿಕ ರನ್ ಗಳಿಸಿದ್ದ ಹೈದರ್ ಅಲಿ, ಹಿಟ್‌ಮ್ಯಾನ್ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ.

ನನಗೆ ರೋಹಿತ್ ಶರ್ಮಾ ಆದರ್ಶ
'ಆದರ್ಶ ಆಟಗಾರನ ಬಗ್ಗೆ ಹೇಳೋದಾದ್ರೆ, ನನಗೆ ರೋಹಿತ್ ಶರ್ಮಾ ಆದರ್ಶ,' ಎಂದು 19ರ ಹರೆಯದ ಹೈದರ್ ಅಲಿ ಹೇಳಿದ್ದಾರೆ. ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಹೈದರ್, ರೋಹಿತ್ ಬಗ್ಗೆ ಅಭಿಪ್ರಾಯ ಹಂಚಿಕೊಂಡರು. 2007ರಲ್ಲಿ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರಾದರೂ, 2013ರಲ್ಲಿ ಲಿಮಿಟೆಡ್ ಓವರ್‌ನಲ್ಲಿ ಆರಂಭಿಕರಾಗಿ ಬಡ್ತಿ ಪಡೆದುಕೊಂಡರು. ಆವತ್ತಿನಿಂದಲೂ ರೋಹಿತ್ ಆಕರ್ಷಕ ಹೊಡೆತಗಳಿಗೆ ವಿಶ್ವದ ಗಮನ ಸೆಳೆಯುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯಧಿಕ ರನ್
ಪಾಕಿಸ್ತಾನ ಹಿರಿಯರ ತಂಡದಲ್ಲಿ ಕಾಣಿಸಿಕೊಳ್ಳುವುದಕ್ಕೂ ಮುನ್ನ ದೈದರ್ ಅಲಿ, ಪಾಕ್ ಅಂಡರ್ 19 ತಂಡದಲ್ಲಿ ಆಡುತ್ತಿದ್ದರು. 2019ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗಿದ್ದ ಪಾಕ್ ಅಂಡರ್ 19 ತಂಡ, ಆತಿಥೇಯರ ವಿರುದ್ಧ ಏಳು ಏಕದಿನ ಪಂದ್ಯಗಳನ್ನಾಡಿತ್ತು. ಈ ಸರಣಿಯಲ್ಲಿ ಹೈದರ್ 317 ರನ್ ಕಲೆ ಹಾಕಿದ್ದರು. ಇದು ಟೂರ್ನಿಯಲ್ಲಿ ಆಟಗಾರ ಗಳಿಸಿದ್ದ ಎರಡನೇ ಅತ್ಯಧಿಕ ರನ್ ಆಗಿತ್ತು. ಬಾಂಗ್ಲಾದಲ್ಲಿ ನಡೆದಿದ್ದ ಎಸಿಸಿ ಎಮರ್ಜಿಂಗ್ ಟೀಮ್ಸ್ ಕಪ್ ಟೂರ್ನಿಯಲ್ಲೂ ಹೈದರ್ ಐದನೇ ಅತ್ಯಧಿಕ ರನ್ ಸರದಾರನಾಗಿ ಗುರುತಿಸಿಕೊಂಡಿದ್ದರು.

ರೋಹಿತ್ ಹಾಗೇ ಆಕ್ರಮಣಕಾರಿ ಆಗುತ್ತೇನೆ
'ಆಟಗಾರನಾಗಿ ನಾನು ನಿಜಕ್ಕೂ ರೋಹಿತ್ ಅವರನ್ನು ಇಷ್ಟಪಡುತ್ತೇನೆ. ಪಾಕ್ ತಂಡದ ಪರ ಆರಂಭಿಕನಾಗಿ ಅವರಂತೆಯೇ ಆಕ್ರಮಣಕಾರಿ ಬ್ಯಾಟಿಂಗ್ ನಡೆಸಲು ಬಯಸಿದ್ದೇನೆ. ಅವರಂತೆಯೇ ಕ್ಲೀಯರ್ ಶಾಟ್ ಹೊಡೆಯಬಯಸಿದ್ದೇನೆ. ರೋಹಿತ್ ಒಬ್ಬರು ಎಲ್ಲಾ ಮಾದರಿಯಲ್ಲೂ ಅದ್ಭುತ ಆಟಗಾರ,' ಎಂದು ಹೈದರ್, ಭಾರತದ ಹಿಟ್‌ಮ್ಯಾನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅವರೊಬ್ಬರು ಮ್ಯಾಚ್ ವಿನ್ನರ್
ಮಾತು ಮುಂದುವರೆಸಿದ ಹೈದರ್, 'ರೋಹಿತ್ 50 ರನ್ ಗಳಿಸುತ್ತಲೇ 100ರತ್ತ ಮುನ್ನುಗ್ಗುತ್ತಾರೆ, 100 ರನ್ ಬರುತ್ತಲೇ 150, ಮತ್ತೆ 200 ರನ್‌ನತ್ತವೂ ಯೋಚಿಸುತ್ತಾರೆ. ಇದು ಹೆಚ್ಚು ಇಷ್ಟವಾಗುತ್ತದೆ. ಅದನ್ನೇ ನಾನೂ ಮಾಡಬಯಸುತ್ತೇನೆ. ಮೈದಾನಕ್ಕಿಳಿದಾಗ ನಾನೂ ದೊಡ್ಡ ರನ್ ಗಳಿಸಲು ಯೋಚಿಸುತ್ತೇನೆ. ಭಾರತ ಪರ ರೋಹಿತ್ ಪಂದ್ಯ ಮುಗಿಸಿಕೊಡುತ್ತಾರೆ. ಅವರೊಬ್ಬರು ನಿಜಕ್ಕೂ ಮ್ಯಾಚ್ ವಿನ್ನರ್,' ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications