ನಮ್ಮೂರ ಪ್ರತಿಭೆ: ವಯಸ್ಸು 95, 84 ಆದರೂ ಕ್ರೀಡೆಯಲ್ಲಿ ಭಾಗಿಯಾಗುತ್ತಿದ್ದಾರೆ ಕೊಡಗಿನ ಈ ಸಹೋದರರು!

ಸಾಧಿಸಬೇಕೆಂಬ ಛಲವಿರುವವರಿಗೆ ವಯಸ್ಸು ಅಡ್ಡಿಯಾಗುವುದಿಲ್ಲ ಎಂಬ ಮಾತನ್ನು ಕೊಡಗಿನ ಸಹೋದರರಾದ ಪಾಲೆಕಂಡ ಪಿ ಬೋಪಯ್ಯ ಮತ್ತು ಪಾಲೆಕಂಡ ಬೆಳ್ಳಿಯಪ್ಪ ಸಾಬೀತುಪಡಿಸಿದ್ದಾರೆ. ಮೂಲತಃ ಕರ್ನಾಟಕದ ಕೊಡಗು ಜಿಲ್ಲೆಯ ಕುಟ್ಟಂದಿ ಗ್ರಾಮದ ನಿವಾಸಿಗಳಾದ ಈ ಇಬ್ಬರು ಸಹೋದರರು ತಮ್ಮ ಇಳಿವಯಸ್ಸಿನಲ್ಲಿಯೂ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಹೆಸರು ತರುತ್ತಿದ್ದಾರೆ.
ಪಾಲೇಕಂಡ ಪಿ ಬೋಪಯ್ಯ ಅವರಿಗೆ ಸದ್ಯ 94 ವರ್ಷ ವಯಸ್ಸಾಗಿದ್ದರೆ, ಪಾಲೇಕಂಡ ಬೆಳ್ಳಿಯಪ್ಪ ಅವರಿಗೆ 85 ವರ್ಷ ವಯಸ್ಸಾಗಿದೆ. ಹೀಗೆ ಇಷ್ಟು ವಯಸ್ಸಿಗೆ ನಾವೇನಾದರೂ ತಲುಪಿದರೆ ಊರುಗೋಲು ಹಿಡಿದು ಜೀವನ ಸಾಗಿಸಬೇಕಾದ ಪರಿಸ್ಥಿತಿಯನ್ನು ಎದುರಿಸುವುದು ಖಚಿತ. ಆದರೆ ಈ ಸೋದರರ ಜೋಡಿ ಊರುಗೋಲಿನ ಬದಲು ಜಾವೆಲಿನ್ ಹಿಡಿದು ಸಾಧನೆ ಮಾಡಿದ್ದಾರೆ ಹಾಗೂ ವಿವಿಧ ಮ್ಯಾರಾಥಾನ್, ವಾಕಥಾನ್ ಮತ್ತು ಓಟಗಳಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಗೆದ್ದು ಇತರರಿಗೆ ಮಾದರಿಯಾಗಿದ್ದಾರೆ.
ಇನ್ನು ಕೇವಲ ಒಂದು ಕ್ರೀಡೆಯಲ್ಲಿ ಮಾತ್ರ ತಮ್ಮನ್ನು ತಾವು ತೊಡಗಿಸಿಕೊಳ್ಳದ ಈ ಜೋಡಿ ವಿವಿಧ ಕ್ರೀಡೆಗಳಲ್ಲಿ ಕಣಕ್ಕಿಳಿದು ಈ ವಯಸ್ಸಿನಲ್ಲಿಯೂ ತೊಡೆ ತಟ್ಟಿ ಯುವಕರೂ ನಾಚುವಂತೆ ಸ್ಪರ್ಧೆ ಒಡ್ಡುತ್ತಿದ್ದು, ಮುಂದಿನ ವರ್ಷ ಸಿಡ್ನಿ ಮತ್ತು ಜಪಾನ್‌ನಲ್ಲಿ ನಡೆಯಲಿರುವ ಟ್ರ್ಯಾಕ್ & ಫೀಲ್ಡ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸುವತ್ತ ಚಿತ್ತ ನೆಟ್ಟಿದ್ದಾರೆ.

ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್‌ನಲ್ಲಿ ಪದಕ
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಪ್ಯಾನ್ ಇಂಡಿಯಾ ಮಾಸ್ಟರ್ಸ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಪಾಲೆಕಂಡ ಪಿ ಬೋಪಯ್ಯ ಮತ್ತು ಪಾಲೆಕಂಡ ಬೆಳ್ಳಿಯಪ್ಪ ಸಹೋದರರು ಜಾವೆಲಿನ್ ಥ್ರೋ, ರಿಲೇ ಓಟ, 1500 ಮೀ ಓಟ, ವಾಕಥಾನ್ ಮತ್ತು 100 ಮೀಟರ್ ಓಟಗಳಲ್ಲಿ ಭಾಗವಹಿಸಿ 3 ಚಿನ್ನದ ಪದಕಗಳು ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದಿದ್ದರು.

ಪಾಲೆಕಂಡ ಪಿ ಬೋಪಯ್ಯ ನಿವೃತ್ತ ಯೋಧ
95 ವರ್ಷ ವಯಸ್ಸಿನಲ್ಲಿಯೂ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವ ಪಾಲೆಕಂಡ ಪಿ ಬೋಪಯ್ಯ ನಿವೃತ್ತ ಯೋಧರಾಗಿದ್ದಾರೆ. ಇನ್ನು ಇವರು ಮತ್ತು ಇವರ ತಮ್ಮ ಪಾಲೆಕಂಡ ಬೆಳ್ಳಿಯಪ್ಪ 3 ವರ್ಷಗಳ ಹಿಂದೆ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಪುನಃ ಪ್ರಾರಂಭಿಸುವ ಯೋಚನೆಯನ್ನು ಮಾಡಿ ನಿರ್ಣಯವನ್ನು ತೆಗೆದುಕೊಂಡಿದ್ದಾರೆ. ಅಷ್ಟೆ ಅಲ್ಲದೇ ಕೊಡಗಿನಲ್ಲಿ ಹಿರಿಯ ನಾಗರಿಕರಿಗಾಗಿ ಮಾಸ್ಟರ್ ಗೇಮ್ಸ್ ಅಸೋಸಿಯೇಶನ್ ಅನ್ನೂ ಕೂಡ ಸ್ಥಾಪಿಸಿದ್ದು, ಆಸಕ್ತಿ ಇರುವವರು ಈ ಅಸೋಸಿಯೇಷನ್ ಸೇರಿ ಕ್ರೀಡಾಭ್ಯಾಸ ನಡೆಸಲು ಸಹಕರಿಸುತ್ತಿದ್ದಾರೆ.

ಚಿಕ್ಕವಯಸ್ಸಿನಿಂದಲೂ ಕ್ರೀಡೆಯತ್ತ ಬೆಳ್ಳಿಯಪ್ಪಗೆ ಆಸಕ್ತಿ
ಇನ್ನು ಪಾಲೆಕಂಡ ಬೆಳ್ಳಿಯಪ್ಪ ತಮ್ಮ ಪ್ರಾಥಮಿಕ ಶಾಲಾ ದಿನಗಳಿಂದಲೂ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು, ಆಗಿನಿಂದಲೂ ವಿವಿಧ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದರು. ಆದರೆ ವಯಸ್ಸಾದ ನಂತರ ಕ್ರೀಡೆಯಿಂದ ದೂರ ಉಳಿದಿದ್ದ ಇವರು ವಡೋದರದಲ್ಲಿ ನಡೆದ ಹಿರಿಯ ನಾಗರೀಕರ ಸ್ಪೋರ್ಟ್ಸ್ ಚಾಂಪಿಯನ್‍ಶಿಪ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಮತ್ತೆ ಕ್ರೀಡೆಯತ್ತ ಮುಖಮಾಡಿದ್ದಾರೆ ಹಾಗೂ ಮುಂದಿನ ದಿನಗಳಲ್ಲಿ ಮತ್ತಷ್ಟು ಕ್ರೀಡಾಕೂಟಗಳಲ್ಲಿ ಭಾಗವಹಿಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications