ಕಳೆದ ಬಾರಿ ಏಷ್ಯಾಕಪ್ ಟಿ20ಗಿಂತ ಎಷ್ಟು ಬದಲಾಗಿದೆ ಟೀಮ್ ಇಂಡಿಯಾ?
ಸೆಪ್ಟಂಬರ್ 9ರಿಂದ ಯುಎಇನಲ್ಲಿ ಭಾರತದ ಆತಿಥ್ಯದಲ್ಲಿ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾಗವಹಿಸಲು 8 ತಂಡಗಳು ಸಜ್ಜಾಗಿವೆ. ಭಾರತ ಸಹ ಈ ಟೂರ್ನಿಗೆ ತನ್ನ ತಂಡವನ್ನು ಪ್ರಕಟಿಸಿದೆ. ಪ್ರಕಟಿತ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸುತ್ತಿದ್ದಾರೆ. ಶುಭಮನ್ ಗಿಲ್ ಈ ತಂಡದ ಉಪನಾಯಕರಾಗಿದ್ದಾರೆ. ಹಾಗಿದ್ರೆ ಕಳೆದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯನ್ನು ಆಡಿದ ಭಾರತ ತಂಡಕ್ಕೂ, ಈಗಿನ ಭಾರತ ತಂಡಕ್ಕೂ ಎಷ್ಟು ವ್ಯತ್ಯಾಸ ಇದೆ ಎಂಬ ಬಗ್ಗೆ ವರದಿ ಇಲ್ಲಿದೆ.
ಏಷ್ಯಾ ಕಪ್ ಟಿ20 ಟೂರ್ನಿಯನ್ನು ಮೂರನೇ ಬಾರಿ ಆಡಿಸಲಾಗುತ್ತಿದೆ. ಇದಕ್ಕೂ ಮೊದಲು 2016 ಹಾಗೂ 2022ರಲ್ಲಿ ಟಿ20 ಟೂರ್ನಿಗಳು ನಡೆದಿದ್ದವು. ಈಗ ಮತ್ತೊಮ್ಮೆ ಟ20 ಮಾದರಿಯಲ್ಲಿ ಏಷ್ಯಾ ಕಪ್ ಆಯೋಜಿಸಲಾಗುತ್ತಿದೆ. ಕಳೆದ ಬಾರಿ ಟೀಮ್ ಇಂಡಿಯಾವನ್ನು ಏಷ್ಯಾ ಕಪ್‌ನಲ್ಲಿ ರೋಹಿತ್ ಶರ್ಮಾ ಮುನ್ನಡೆಸಿದ್ದರು, ಅಲ್ಲದೆ ಉಪನಾಯಕನ ಜವಾಬ್ದಾರಿಯನ್ನು ಕೆಎಲ್ ರಾಹುಲ್ ಅವರಿಗೆ ವಹಿಸಲಾಗಿತ್ತು. ಆದರೆ ಈ ಬಾರಿ ತಂಡ ಸಂಪೂರ್ಣ ಭಿನ್ನವಾಗಿದೆ. ಹೊಸ ಮುಖಗಳು ತಂಡವನ್ನು ಪ್ರತಿನಿಧಿಸುತ್ತಿವೆ.

ಕಳೆದ ಬಾರಿ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರರು ಇದ್ದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಕೆಎಲ್ ರಾಹುಲ್ ಸ್ಥಾನ ಪಡೆದಿದ್ದರು. ಇದರಲ್ಲಿ ರೋಹಿತ್, ವಿರಾಟ್ ಈಗಾಗಲೇ ಟಿ20 ಫಾರ್ಮೆಟ್‌ಗೆ ವಿದಾಯ ಹೇಳಿದ್ದಾರೆ. ಡಿಕೆ ನಿವೃತ್ತಿ ಘೋಷಿಸಿದ್ದಾರೆ. ಇನ್ನು ಗಾಯದಿಂದ ಬಳಲುತ್ತಿರುವ ರಿಷಭ್ ಪಂತ್ ಟೂರ್ನಿಗೆ ಆಯ್ಕೆ ಆಗಿಲ್ಲ. ಕೆಎಲ್ ರಾಹುಲ್ ಅವರನ್ನು ಕೈ ಬಿಡಲಾಗಿದೆ.
ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಸಹ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಅಲ್ಲದೆ ರವೀಂದ್ರ ಜಡೇಜಾ ಟಿ20 ಫಾರ್ಮೆಟ್‌ನಿಂದ ಹಿಂದೆ ಸರಿದಿದ್ದಾರೆ. ಕಳೆದ ಬಾರಿಯ ಟೂರ್ನಿಯಲ್ಲಿ ದೀಪಕ್ ಹೂಡ ಸ್ಥಾನ ಪಡೆದಿದ್ದರು. ಈ ಬಾರಿ ಇವರು ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಯುಜುವೇಂದ್ರ ಚಹಾಲ್, ದೀಪಕ್ ಚಹಾರ್, ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯಿ 2022ರಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ ಈ ಬಾರಿ ಇವರು ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

4 ಆಟಗಾರರಿಗೆ ಅವಕಾಶ
ಕಳೆದ ಬಾರಿಯ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಸ್ಥಾನ ಪಡೆದ ಸೂರ್ಯಕುಮಾರ್ ಯಾದವ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದು, ನಾಯಕತ್ವ ಜವಾಬ್ದಾರಿ ಹೊರಲಿದ್ದಾರೆ. ಇನ್ನು ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್ ಸಹ ಈ ಬಾರಿಯೂ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಏಷ್ಯಾಕಪ್‌ನಲ್ಲಿ ಆಡಿದ ಕೇವಲ ನಾಲ್ಕು ಆಟಗಾರರು ಮಾತ್ರ ಈ ಬಾರಿಯ ಏಷ್ಯಾ ಕಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಹೊಸ ಮುಖಗಳು ಟೀಮ್ ಇಂಡಿಯಾವನ್ನು ಬಿಗ್ ಟೂರ್ನಿಯಲ್ಲಿ ಪ್ರತಿನಿಧಿಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications