
ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ಮತ್ತೊಮ್ಮೆ ಬಹುತೇಕ ಸೋಲಿನ ಹಂತಕ್ಕೆ ತಲುಪಿ ಅಂತಿಮ ಹಂತದಲ್ಲಿ ವಿಜಯ ಸಾಧಿಸಿದೆ. ದುರ್ಬಲ ತಂಡವೆನಿಸಿರುವ ನೆದರ್ಲೆಂಡ್ಸ್ ತಂಡ ಪಾಕಿಸ್ತಾನಕ್ಕೆ ಈ ಸರಣಿಯಲ್ಲಿ ಎರಡನೇ ಬಾರಿ ಭಾರೀ ಪ್ರಮಾಣದಲ್ಲಿ ಪೈಪೋಟಿ ನೀಡಿ ಅಂತಿಮ ಹಂತದಲ್ಲಿ ಎಡವಿದೆ. ಈ ಗೆಲುವಿನೊಂದಿಗೆ ಪಾಕಿಸ್ತಾನ ಏಕದಿನ ಸರಣಿಯನ್ನು ವೈಟ್‌ವಾಶ್ ಮೂಲಕ ವಶಕ್ಕೆ ಪಡೆದುಕೊಂಡಿದೆ.
ಮೊದಲಿಗೆ ಬೌಲಿಂಗ್‌ನಲ್ಲಿ ಮಿಂಚಿದ ನೆದರ್ಲೆಂಡ್ಸ್: ಈ ಪಂದ್ಯದಲ್ಲಿ ಟಾಸ್ ಗೆದ್ದ ಪ್ರವಾಸಿ ಪಾಕಿಸ್ತಾನ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಪ್ರವಾಸಿ ತಂಡದ ಲೆಕ್ಕಾಚಾರವನ್ನು ನೆದರ್ಲೆಂಡ್ಸ್ ತಮಡದ ಬೌಲರ್‌ಗಳು ಬುಡಮೇಲು ಮಾಡುವಲ್ಲಿ ಯಶಸ್ವಿಯಾದರು. ನಾಯಕ ಬಾಬರ್ ಅಜಂ ಹೊರತುಪಡಿಸಿ ಉಳಿದ ಯಾವೊಬ್ಬ ಬ್ಯಾಟರ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲೇ ಇಲ್ಲ.
ಬಾಬರ್ ಅಜಂ ಮಾತ್ರ 91 ರನ್‌ಗಳನ್ನು ಗಳಿಸಿ 9 ರನ್‌ಗಳ ಅಂತರದಿಂದ ಶತಕ ವಂಚಿತವಾಗಿದ್ದಾರೆ. 49.4 ಓವರ್‌ಗಳಲ್ಲಿ ಕೇವಲ 206 ರನ್‌ಗಳನ್ನು ಗಳಿಸಿ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ನೆದರ್ಲೆಂಡ್ಸ್ ತಂಡದ ಪರವಾಗಿ ಬಾಸ್ ಡೆ ಲೀಡ್ 3 ವಿಕೆಟ್ ಪಡೆದು ಮಿಂಚಿದರೆ ಕಿಂಗ್ಮಾ ಎರಡು ವಿಕೆಟ್ ಕಬಳಿಸಿದರು. ಆರ್ಯನ್ ದತ್, ಶರಿಸ್ ಅಹ್ಮದ್, ವಾನ್ ಬೀಕ್ ತನಾ ಒಂದು ವಿಕೆಟ್ ಸಂಪಾದಿಸಿದ್ದಾರೆ.
ಭರ್ಜರಿ ಹೋರಾಟ ಪ್ರದರ್ಶಿಸಿದ ನೆದರ್ಲೆಂಡ್ಸ್: ಪಾಕಿಸ್ತಾನ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ ನೆದರ್ಲೆಂಡ್ಸ ತಂಡದ ಪರವಾಗಿ ಆರಂಭದ ಮೂರು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಂಡರೂ ಆರಂಭಿಕ ಆಟಗಾರ ವಿಕ್ರಮ್‌ಜೀತ್ ಸಿಂಗ್ ಹಾಗೂ ಟಾಮ್ ಕೂಪರ್ ಅವರ ಅದ್ಭುತ ಪ್ರದರ್ಶನದಿಂದಾಗಿ ಭರ್ಜರಿ ಪೈಪೋಟಿ ನೀಡಲು ಆರಂಭಿಸಿತು. ತೆಜ ನಿಡುಮನುರು ಕೂಡ ಕೆಲ ಕಾಲ ಪೈಪೋಟಿ ನಡೆಸಿದರಾದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 9 ರನ್‌ಗಳ ಅಂತರದಿಂದ ಪಾಕಿಸ್ತಾನ ಗೆಲುವು ಸಾಧಿಸಿದೆ.
ಇದಕ್ಕೂ ಮುನ್ನ ನೆದರ್ಲೆಂಡ್ಸ್ ತಂಡ ಈ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡಕ್ಕೆ ಅದ್ಭುತ ಪ್ರತಿರೋದವೊಡ್ಡುವಲ್ಲಿ ಯಶಸ್ವಿಯಾಗಿತ್ತು. ಒಂದು ಹಂತದಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆಯುಂಟು ಮಾಡುವಲ್ಲಿಯೂ ಯಶಸ್ವಿಯಾಗಿತ್ತು.
ಅಂತಿಮವಾಗಿ ಪಾಕಿಸ್ತಾನವೇ ಮೇಲುಗೈ ಸಾಧಿಸಿ 16 ರನ್‌ಗಳ ಅಂತರದ ಗೆಲುವು ಸಾಧಿಸಿತ್ತು. ನಂತರ ಎರಡನೇ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡದ ಪರವಾಗಿ ಸಾಂಘಿಕ ಪ್ರದರ್ಶನ ಬಾರದ ಪರಿಣಾಮವಾಗಿ 7 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿತು. ಅಂತಿಮ ಪಂದ್ಯದಲ್ಲಿಯೂ ಸೋಲಿನ ಸನಿಹಕ್ಕೆ ತಲುಪಿ ಪಾಕಿಸ್ತಾನ ಪಂದ್ಯ ಗೆದ್ದುಕೊಂಡಿದ್ದು ಸರಣಿಯನ್ನು ವೈಟ್‌ವಾಶ್ ಮಾಡಿಕೊಂಡಿದೆ.
ನೆದರ್ಲೆಂಡ್ಸ್ ಆಡುವ ಬಳಗ: ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ನಾಯಕ & ವಿಕೆಟ್ ಕೀಪರ್), ತೇಜ ನಿಡಮನೂರು, ಲೋಗನ್ ವ್ಯಾನ್ ಬೀಕ್, ಮೂಸಾ ಅಹ್ಮದ್, ಶರೀಜ್ ಅಹ್ಮದ್, ಆರ್ಯನ್ ದತ್, ವಿವಿಯನ್ ಕಿಂಗ್ಮಾ
ಬೆಂಚ್: ವೆಸ್ಲಿ ಬ್ಯಾರೆಸಿ, ಟಿಮ್ ಪ್ರಿಂಗಲ್, ರಿಯಾನ್ ಕ್ಲೈನ್, ಅರ್ನವ್ ಜೈನ್
ಪಾಕಿಸ್ತಾನ ಆಡುವ ಬಳಗ: ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಬಾಬರ್ ಅಜಮ್ (ನಾಯಕ), ಅಘಾ ಸಲ್ಮಾನ್, ಖುಶ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ, ಜಾಹಿದ್ ಮಹಮೂದ್
ಬೆಂಚ್: ಇಮಾಮ್-ಉಲ್-ಹಕ್, ಮೊಹಮ್ಮದ್ ರಿಜ್ವಾನ್, ಶಾದಾಬ್ ಖಾನ್, ಹಾರಿಸ್ ರೌಫ್