
ನಾಯಕತ್ವದ ವಿಚಾರವಾಗಿ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ನಡುವೆ ಉಂಟಾಗಿದ್ದ ಬಿರುಕು ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ಹೋಗುತ್ತಿದೆ. ಕ್ರಿಕೆಟ್ ಮ್ಯಾನೇಜ್ಮೆಂಟ್ ಎಂದರೆ ಬಿಸಿಸಿಐ ರೀತಿ ಇರಬೇಕು ಎಂದು ಹೇಳುತ್ತಿದ್ದವರು ಇಂದು ಬಿಸಿಸಿಐ ವಿರುದ್ಧ ಕಿಡಿಕಾರುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಸಿಐ ವಿರುದ್ಧವಾಗಿ ಟ್ರೆಂಡ್ ಮಾಡುತ್ತಿದ್ದಾರೆ.
ಹೌದು, ಈ ಹಿಂದೆ ಸಾಕಷ್ಟು ಒಳ್ಳೆಯ ಹೆಸರನ್ನು ಸಂಪಾದಿಸಿದ್ದ ಬಿಸಿಸಿಐ ಇದೀಗ ಸಾಕಷ್ಟು ದೊಡ್ಡ ಮಟ್ಟದಲ್ಲಿ ಟೀಕೆಗಳನ್ನು ಎದುರಿಸುತ್ತಾ ಅವಮಾನಕ್ಕೊಳಗಾಗಿದೆ. ಅದರಲ್ಲಿಯೂ ಬಿಸಿಸಿಐನ ಅಧ್ಯಕ್ಷರಾದ ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಟೀಕೆ ಮತ್ತು ವಿರೋಧಗಳನ್ನು ಎದುರಿಸುತ್ತಿದ್ದು ನೆಟ್ಟಿಗರಿಂದ ಛೀಮಾರಿ ಹಾಕಿಸಿಕೊಳ್ಳುತ್ತಿದ್ದಾರೆ. ಹೀಗೆ ಬಿಸಿಸಿಐ ಮತ್ತು ಸೌರವ್ ಗಂಗೂಲಿ ನೆಟ್ಟಿಗರಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಟೀಕೆಗಳನ್ನು ಎದುರಿಸುತ್ತಿರುವುದಕ್ಕೆ ಕಾರಣ ವಿರಾಟ್ ಕೊಹ್ಲಿ ಇಂದು ನಡೆಸಿದ ಮಾಧ್ಯಮಗೋಷ್ಠಿ.
ಹೌದು, ಇತ್ತೀಚೆಗಷ್ಟೇ ಭಾರತ ಏಕದಿನ ತಂಡದ ನಾಯಕತ್ವದಿಂದ ಹೊರಬಿದ್ದ ವಿರಾಟ್ ಕೊಹ್ಲಿ ಕುರಿತು ಸಾಕಷ್ಟು ಸುದ್ದಿಗಳು ಮತ್ತು ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ವಿರಾಟ್ ಕೊಹ್ಲಿ ಭಾರತ ಏಕದಿನ ತಂಡದ ನಾಯಕತ್ವವನ್ನು ಕಳೆದುಕೊಂಡಿದ್ದರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ವೈಯಕ್ತಿಕ ಕಾರಣಗಳನ್ನು ನೀಡಿ ವಿಶ್ರಾಂತಿ ತೆಗೆದುಕೊಳ್ಳಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿದವು. ಹೀಗೆ ತನ್ನ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿವೆ ಎಂದು ತಿಳಿದ ಕೂಡಲೇ ಎಚ್ಚೆತ್ತುಕೊಂಡ ವಿರಾಟ್ ಕೊಹ್ಲಿ ಇಂದು ವಿಶೇಷವಾದ ಮಾಧ್ಯಮಗೋಷ್ಠಿಯನ್ನು ಏರ್ಪಡಿಸುವುದರ ಮೂಲಕ ತನ್ನ ಕುರಿತು ಹರಿದಾಡುತ್ತಿರುವ ಸುದ್ದಿಗಳೆಲ್ಲಾ ಸುಳ್ಳು ಎಂದು ಹೇಳಿಕೆಗಳನ್ನು ನೀಡಿದ್ದಾರೆ. ತಾನು ಮತ್ತು ರೋಹಿತ್ ಶರ್ಮಾ ಚೆನ್ನಾಗಿಯೇ ಇದ್ದೇವೆ ಇಬ್ಬರ ನಡುವೆ ಯಾವುದೇ ಮನಸ್ತಾಪಗಳಿಲ್ಲ ಎಂದು ಸ್ಪಷ್ಟನೆಯನ್ನೂ ನೀಡಿದ ವಿರಾಟ್ ಕೊಹ್ಲಿ ತಾನು ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಕೈಗೊಂಡಾಗ ಬಿಸಿಸಿಐ ಯಾವುದೇ ಮಾತನ್ನೂ ಆಡದೆ ತನ್ನ ನಿರ್ಧಾರವನ್ನು ಸ್ವೀಕರಿಸಿತು ಎಂಬ ಹೇಳಿಕೆಯನ್ನು ನೀಡಿದರು.
ಆದರೆ, ಈ ಹಿಂದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮಾತನಾಡಿ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸಲು ಮುಂದಾದಾಗ ಬಿಸಿಸಿಐ ವಿರಾಟ್ ಕೊಹ್ಲಿ ನಿರ್ಧಾರವನ್ನು ಒಪ್ಪಿರಲಿಲ್ಲ ಬದಲಾಗಿ ನಾಯಕತ್ವವನ್ನು ತ್ಯಜಿಸಬೇಡಿ ಎಂದು ಮನವಿಯನ್ನು ಮಾಡಿತ್ತು ಎಂಬ ಹೇಳಿಕೆಯನ್ನು ನೀಡಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಹೇಳಿರುವ ಪ್ರಕಾರ ಬಿಸಿಸಿಐನಿಂದ ನಾಯಕತ್ವ ತ್ಯಜಿಸಬಾರದಂತೆ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ ಎಂಬುದು ತಿಳಿದು ಬಂದಿದೆ. ಹೀಗೆ ವಿರಾಟ್ ಕೊಹ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದ ಅಂಶಗಳನ್ನು ಗಮನಿಸಿದ ವಿರಾಟ್ ಕೊಹ್ಲಿ ಅಭಿಮಾನಿಗಳು ಮತ್ತು ನೆಟ್ಟಿಗರು ಬಿಸಿಸಿಐ ಹಾಗೂ ಸೌರವ್ ಗಂಗೂಲಿ ಸುಳ್ಳು ಹೇಳಿದ್ದಾರೆ ಮತ್ತು ವಿರಾಟ್ ಕೊಹ್ಲಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಲು ರಾಜಕೀಯ ಮಾಡಿದ್ದಾರೆ ಎಂದು ಕಿಡಿಕಾರಿದ್ದು ಈ ಕೆಳಕಂಡಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಭಾರತ ಟಿ ಟ್ವೆಂಟಿ ನಾಯಕತ್ವವನ್ನು ತ್ಯಜಿಸುವ ವೇಳೆ ಬಿಸಿಸಿಐನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬ ವಿರಾಟ್ ಕೊಹ್ಲಿ ಮಾತಿನ ಮೇಲೆ ನನಗೆ ಸೌರವ್ ಗಂಗೂಲಿ ಆಡಿದ ಮಾತಿಗಿಂತ ಹೆಚ್ಚಿನ ನಂಬಿಕೆ ಇದೆ. ಏಕೆಂದರೆ ಹೃದಯಪೂರ್ವಕವಾಗಿ ಭಾರತ ತಂಡಕ್ಕೋಸ್ಕರ ಕಣಕ್ಕಿಳಿದು ವಿರಾಟ್ ಕೊಹ್ಲಿ ಆಟವನ್ನು ಆಡುತ್ತಾರೆ ಆದರೆ ಸೌರವ್ ಗಂಗೂಲಿ ಜಯ್ ಶಾ ಅಡಿಯಲ್ಲಿ ಕೆಲಸ ಮಾಡುತ್ತಾರೆ ಎಂದು ನೆಟ್ಟಿಗನೋರ್ವ ಬರೆದುಕೊಂಡಿದ್ದಾರೆ.
ಈ ಹಿಂದೆ ವಿರಾಟ್ ಕೊಹ್ಲಿ ಟಿ ಟ್ವೆಂಟಿ ನಾಯಕತ್ವ ತ್ಯಜಿಸುವ ವೇಳೆ ಬಿಸಿಸಿಐ ವಿರೋಧ ವ್ಯಕ್ತಪಡಿಸಿತ್ತು ಆದರೂ ಸಹ ವಿರಾಟ್ ಟಿ ಟ್ವೆಂಟಿ ನಾಯಕತ್ವವನ್ನು ತ್ಯಜಿಸಲು ಮುಂದಾದರು ಎಂದು ಗಂಗೂಲಿ ಹೇಳಿಕೆ ನೀಡಿದ್ದ ವಿಡಿಯೋ ಜೊತೆಗೆ ವಿರಾಟ್ ಕೊಹ್ಲಿ ನೀಡಿರುವ ಹೇಳಿಕೆಯ ವಿಡಿಯೋವನ್ನು ಹಂಚಿಕೊಂಡಿದ್ದು ಸೌರವ್ ಗಂಗೂಲಿ ಸುಳ್ಳು ಹೇಳಿದ್ದಾರೆ ಎಂದು ನೆಟ್ಟಿಗನೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಭಾರತ ಏಕದಿನ ತಂಡದ ನಾಯಕತ್ವದಿಂದ ತನ್ನನ್ನು ವಜಾಗೊಳಿಸಿದ ವಿಷಯವನ್ನು ಕರೆ ಮಾಡುವುದರ ಮೂಲಕ ಬಿಸಿಸಿಐ ಅಧಿಕಾರಿಗಳು ತಿಳಿಸಿದರು ಎಂದು ವಿರಾಟ್ ಕೊಹ್ಲಿ ಹೇಳಿದರು. ಈ ವಿಷಯದ ಕುರಿತಾಗಿ ನೆಟ್ಟಿಗನೊಬ್ಬ ಆಕ್ರೋಶ ವ್ಯಕ್ತಪಡಿಸಿದ್ದು ಟೀಮ್ ಇಂಡಿಯಾಗಾಗಿ ಹಲವಾರು ಸಾಧನೆಗಳನ್ನು ಮಾಡಿರುವ ಮತ್ತು ಸಾಕಷ್ಟು ದಾಖಲೆಗಳನ್ನು ನಿರ್ಮಿಸಿರುವಂತಹ ಆಟಗಾರನನ್ನು ಕೇವಲ ಒಂದು ಫೋನ್ ಕರೆಯ ಮೂಲಕ ನಾಯಕತ್ವದಿಂದ ತೆಗೆದು ಹಾಕುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಸೌರವ್ ಗಂಗೂಲಿ ವಿರುದ್ಧ ಕಿಡಿಕಾರಿರುವ ಮತ್ತೋರ್ವ ನೆಟ್ಟಿಗ ಹಲವಾರು ಬಾರಿ ನಮ್ಮ ದೇಶದ ಪರ ಉತ್ತಮ ಪ್ರದರ್ಶನವನ್ನು ನೀಡಿ ನಮ್ಮೆಲ್ಲರಿಗೂ ಹೆಮ್ಮೆಯ ತಂದಿರುವಂತಹ ವಿರಾಟ್ ಕೊಹ್ಲಿ ವಿರುದ್ಧ ಸುಳ್ಳು ಹೇಳಿಕೆಗಳನ್ನು ನೀಡಿ ರಾಜಕೀಯ ಮಾಡಿದ ಗಂಗೂಲಿ ಅವರಿಗೆ ನಾಚಿಕೆಯಾಗಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಹೀಗೆ ವಿರಾಟ್ ಕೊಹ್ಲಿ ಮಾಧ್ಯಮ ಗೋಷ್ಠಿ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸೌರವ್ ಗಂಗೂಲಿ ಮತ್ತು ಬಿಸಿಸಿಐ ವಿರುದ್ಧ ಸಾಲು ಸಾಲು ಪೋಸ್ಟ್ ಹಾಗೂ ಟ್ವೀಟ್ ಮಾಡುವುದರ ಮೂಲಕ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದು ವಿರಾಟ್ ಕೊಹ್ಲಿ ಪರ ನಾವಿದ್ದೇವೆ ಎಂದು ಬೆಂಬಲ ಸೂಚಿಸುತ್ತಿದ್ದಾರೆ.