ICC Women's T20 World Cup: ವಿಂಡೀಸ್ ತಂಡವನ್ನು 8 ರನ್‌ಗಳಿಂದ ಮಣಿಸಿದ ನ್ಯೂಜಿಲೆಂಡ್ ಫೈನಲ್‌ಗೆ
ಶಾರ್ಜ್: ಭರ್ಜರಿ ಸಂಘಟಿತ ಆಟದ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಮಹಿಳಾ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ 8 ರನ್‌ಗಳಿಂದ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ, ಫೈನಲ್ ಪ್ರವೇಶಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ಮಹಿಳಾ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 128 ರನ್ ಸಿಡಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ವಿಂಡೀಸ್ ನಿಗದಿತ ಓವರ್‌ಗಳಲ್ಲಿ 8 ವಿಕೆಟ್‌ಗೆ 120 ರನ್ ಸೇರಿಸಿತು. ನ್ಯೂಜಿಲೆಂಡ್‌ಗೆ ಈಗ ಮೂರನೇ ಬಾರಿ ಟ್ರೋಫಿ ಗೆಲ್ಲುವ ಅವಕಾಶ ಸಿಕ್ಕಿದೆ. ಇದಕ್ಕೂ ಮುನ್ನ ಅವರು 14 ವರ್ಷಗಳ ಹಿಂದೆ 2010ರಲ್ಲಿ ಕೊನೆಯ ಬಾರಿ ಫೈನಲ್ ತಲುಪಿತ್ತು.

ಮೊದಲ ವಿಕೆಟ್‌ಗೆ 48 ರನ್ ಜೊತೆಯಾಟ
ಮೊದಲ ವಿಕೆಟ್‌ಗೆ ಅನುಭವಿ ಸೂಜಿ ಬೇಟ್ಸ್ ಹಾಗೂ ಜಾರ್ಜಿಯಾ ಪ್ಲಿಮ್ಮರ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಪವರ್ ಪ್ಲೇನ ಸಂಪೂರ್ಣ ಲಾಭ ಪಡೆದು ರನ್‌ಗಳನ್ನು ಕಲೆ ಹಾಕಿತು. ಈ ಜೋಡಿ 8.2 ಓವರ್‌ಗಳಲ್ಲಿ 48 ರನ್ ಸೇರಿಸಿತು. ಅನುಭವಿ ಸೂಜಿ ಬೇಟ್ಸ್ ಒಂದು ಬೌಂಡರಿ ನೆರವಿನಿಂದ 26 ರನ್ ಸಿಡಿಸಿ ಔಟ್ ಆದರು. ಇನ್ನೋರ್ವ ಆರಂಭಿಕ ಆಟಗಾರ್ತಿ ಜಾರ್ಜಿಯಾ ಪ್ಲಿಮ್ಮರ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 33 ರನ್ ಸೇರಿಸಿತು.
ಮಧ್ಯಮ ಕ್ರಮಾಂಕದಲ್ಲಿ ಸೋಫಿ ಡಿವೈನ್ (12), ಬ್ರೂಕ್ ಹ್ಯಾಲಿಡೇ (18) ಹಾಗೂ ಇಸಾಬೆಲ್ಲಾ ಗೇಜ್ (2) ಡಬಲ್ ಡಿಜಿಟ್ ಮುಟ್ಟಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಡಿಯಾಂಡ್ರಾ ಡಾಟಿನ್‌ಗೆ 4 ವಿಕೆಟ್
ವೆಸ್ಟ್ ಇಂಡೀಸ್ ತಂಡದ ಡಿಯಾಂಡ್ರಾ ಡಾಟಿನ್ ಅಮೋಘ ಬೌಲಿಂಗ್ ದಾಳಿ ನಡೆಸಿದರು. ಇವರು 22 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ಅಫಿ ಫ್ಲೆಚರ್ ಎರಡು ವಿಕೆಟ್ ಪಡೆದರು.
ಕಳಪೆ ಆರಂಭ
ಗುರಿಯನ್ನು ಹಿಂಬಾಲಿಸಿದ ವೆಸ್ಟ್ ಇಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ಹೇಲಿ ಮ್ಯಾಥ್ಯೂಸ್ (15) ಹಾಗೂ ಕಿಯಾನಾ ಜೋಸೆಫ್ (12) ಜೊತೆಗೂಡಿ 16 ರನ್ ಸೇರಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸ್ಟಾಫಾನಿ ಟೇಲರ್ (13) ಹಾಗೂ ಅಫಿ ಫ್ಲೆಚರ್ (17), ಜೈದಾ ಜೇಮ್ಸ್ (14) ಮಾತ್ರ ಡಬಲ್ ಡಿಜಿಟ್ ಮುಟ್ಟಿದರು. ಡಿಯಾಂಡ್ರಾ ಡಾಟಿನ್ ಮೂರು ಸಿಕ್ಸರ್‌ಗಳ ಸಹಾಯದಿಂದ 33 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ನ್ಯೂಜಿಲೆಂಡ್ ಪರ ಈಡನ್ ಕಾರ್ಸನ್ 3, ಅಮೆಲಿಯಾ ಕೆರ್ 2 ವಿಕೆಟ್ ಉರುಳಿಸಿದರು.
ಫೈನಲ್ ಯಾವಾಗ?
ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯ ಅಕ್ಟೋಬರ್ 20 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಎರಡೂ ತಂಡಗಳು ಟಿ20 ವಿಶ್ವಕಪ್ ಗೆದ್ದಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications