ಭದ್ರತೆ ಭೀತಿ: ಪಾಕ್‌ಗೆ ನ್ಯೂಜಿಲೆಂಡ್ ಐತಿಹಾಸಿಕ ಪ್ರವಾಸ ಸರಣಿ ಮುಂದೂಡಿಕೆ

ಕರಾಚಿ: ಬರೋಬ್ಬರಿ 18 ವರ್ಷಗಳ ಬಳಿಕ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಬಂದಿತ್ತು. ಆದರೆ ನ್ಯೂಜಿಲೆಂಡ್ vs ಪಾಕಿಸ್ತಾನ ನಡುವಿನ ಈ ಉದ್ದೇಶಿತ ಪ್ರವಾಸ ಸರಣಿ ಮುಂದೂಡಲ್ಪಟ್ಟಿದೆ. ನ್ಯೂಜಿಲೆಂಡ್ ಸರ್ಕಾರದಿಂದ ಭದ್ರತೆಯ ಎಚ್ಚರಿಕೆ ಬಂದ ಹಿನ್ನಲೆಯಲ್ಲಿ ಉದ್ದೇಶಿತ ಸರಣಿ ಮುಂದೂಡಲಾಗಿದೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡ ತವರಿಗೆ ವಾಪಸ್ಸಾಗಲು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.
ನ್ಯೂಜಿಲೆಂಡ್ ತಂಡ ಪಾಕಿಸ್ತಾನದಲ್ಲಿ ಸೆಪ್ಟೆಂಬರ್ 17, 19, 21ಕ್ಕೆ ಮೂರು ಏಕದಿನ ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಮತ್ತು ಸೆಪ್ಟೆಂಬರ್ 25, 26, 29, ಅಕ್ಟೋಬರ್ 1, 3ಕ್ಕೆ ಲಾಹೋರ್‌ನಲ್ಲಿ ಐದು ಪಂದ್ಯಗಳ ಟಿ20ಐ ಸರಣಿ ಆಡಲಿತ್ತು. ಆದರೆ ಭದ್ರತೆಯ ಭೀತಿ ಎದುರಾದ ಕಾರಣ ಪ್ರವಾಸ ಸರಣಿ ಮುಂದೂಡಲ್ಪಟ್ಟಿದೆ.

ಭದ್ರತಾ ಸಿಬ್ಬಂದಿಗಳಿಂದ ಮೈದಾನದಲ್ಲಿ ಪರಿಶೀಲನೆ
ಬ್ಯಾಟಿಂಗ್ ಕೋಚ್ ಥಿಲನ್ ಸಮರವೀರ ಅವರೊಂದಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಶನಿವಾರ (ಸೆಪ್ಟೆಂಬರ್ 11) ಪಾಕಿಸ್ತಾನ ತಲುಪಿತ್ತು. ಕುತೂಹಲಕಾರಿ ವಿಚಾರವೇನಂದರೆ 2009ರಲ್ಲಿ ಇದೇ ಸಮರವೀರ ಅವರ ಮೇಲೆ ಪಾಕಿಸ್ತಾನದಲ್ಲಿ ಹಿಂದೆ ಗುಂಡು ಹಾರಿಸಲಾಗಿತ್ತು. ಅಷ್ಟೇ ಅಲ್ಲ, 2003ರಲ್ಲಿ ನ್ಯೂಜಿಲೆಂಡ್ ತಂಡ ಪಾಕ್‌ನಲ್ಲಿ ತಂಗಿದ್ದ ಹೋಟೆಲ್ ಸಮೀಪವೇ ಬಾಂಬ್ ಬ್ಲಾಸ್ಟ್ ನಡೆದಿತ್ತು.
ಶುಕ್ರವಾರ (ಸೆಪ್ಟೆಂಬರ್ 17) ರಾವಲ್ಪಿಂಡಿಯಲ್ಲಿ ನಡೆಯಲಿದ್ದ ಮೂರು ಪಂದ್ಯಗಳ ಏಕದಿನ ಸರಣಿಯ ಆರಂಭಿಕ ಪಂದ್ಯ ನಡೆಯಲಿಲ್ಲ. ಪಂದ್ಯ ಶುರುವಾಗುವ ವೇಳೆ ನ್ಯೂಜಿಲೆಂಡ್ ಆಟಗಾರರು ಅವರ ಹೋಟೆಲ್‌ನಲ್ಲೇ ತಂಗಿದ್ದರು. ಅಪಾಯದ ಸೂಚನೆ ಬಂದಿದ್ದರಿಂದ ಆಟಗಾರರು ಆಡಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಮೈದಾನದಲ್ಲೂ ಭದ್ರತಾ ಸಿಬ್ಬಂದಿಗಳು ಬಂದು ಪರಿಶೀಲಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ.

ನ್ಯೂಜಿಲೆಂಡ್ ಕೋಚ್ ತೊಡೆಗೆ ಗುಂಡು ಬಿದ್ದಿತ್ತು!
2009ರಲ್ಲಿ ಪಾಕ್‌ಗೆ ಹೋಗಿದ್ದಾಗ, ಈಗ ನ್ಯೂಜಿಲೆಂಡ್ ತಂಡದ ಕೋಚ್ ಆಗಿರುವ ಥಿಲನ್ ಸಮರವೀರ ಅವರ ಎಡ ತೊಡೆಯ ಭಾಗಕ್ಕೆ ಗುಂಡು ಹಾರಿಸಲಾಗಿತ್ತು. ಅದಾಗಿ ಶಸ್ತ್ರ ಚಿಕಿತ್ಸೆ ನಡೆದು ಮೂರು ತಿಂಗಳ ಬಳಿಕ ಸಮರವೀರ ಮತ್ತೆ ಮೈದಾನಕ್ಕಿಳಿದಿದ್ದರು. ಈಗ 2019ರಿಂದಲೂ ಸಮರವೀರ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟರ್ಸ್ ಮೇಲೆ ಹೀಗೆ ದಾಳಿ ನಡೆಯುತ್ತಿದ್ದರಿಂದ ಅಂತಾರಾಷ್ಟ್ರೀಯ ತಂಡಗಳು ಪಾಕಿಸ್ತಾನಕ್ಕೆ ಬರಲು ನಿರಾಕರಿಸಿದ್ದವು. ಪಾಕಿಸ್ತಾನ ವಿರುದ್ಧ ಪಂದ್ಯವಿದ್ದರೆ ಎರಡೂ ದೇಶಗಳು ಪಂದ್ಯವನ್ನು ಯುನೈಟೆಡ್ ಅರಬ್ ಎಮಿರೇಟ್ಸ್‌ನಂತ ತಟಸ್ಥ ತಾಣದಲ್ಲಿ ನಡೆಸುತ್ತಿತ್ತು. ಆದರೆ ಈಚಿನ ದಿನಗಳಲ್ಲಿ ಅಂದರೆ ಕಳೆದ ಆರು ವರ್ಷಗಳಲ್ಲಿ ಪಾಕಿಸ್ತಾನ ತಂಡ ಜಿಂಬಾಬ್ವೆ, ಸೌತ್ ಆಫ್ರಿಕಾ, ಬಾಂಗ್ಲಾದೇಶ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ದೇಶಗಳಿಗೆ ಆತಿಥ್ಯ ವಹಿಸಿದೆ. ಈಗ ದೇಶದಲ್ಲಿ ಭದ್ರತೆ ಹೆಚ್ಚಿದೆ. ಹೀಗಾಗಿಯೇ ಬಹಳ ವರ್ಷಗಳಿಂದ ಪಾಕ್‌ಗೆ ಪ್ರವಾಸ ಹೋಗದಿದ್ದ ಕೆಲ ದೇಶಗಳೂ ಕೂಡ ಈಗ ಪ್ರವಾಸ ಹೋಗಲು ಮನಸ್ಸು ಮಾಡುತ್ತಿವೆ.

ನ್ಯೂಜಿಲೆಂಡ್ ಆಟಗಾರರ ಹೋಟೆಲ್ ಬಳಿ ಬ್ಲಾಸ್ಟ್
2002ರಲ್ಲಿ ಕರಾಚಿಯಲ್ಲಿ ನ್ಯೂಜಿಲೆಂಡ್ ತಂಡ ತಂಗಿದ್ದ ಹೋಟೆಲ್ ಸಮೀಪ ಬಾಂಬ್ ಬ್ಲಾಸ್ಟ್ ಆಗಿತ್ತು. ಅದಾಗಿ ಒಂದು ವರ್ಷದ ಬಳಿಕ ನ್ಯೂಜಿಲೆಂಡ್ ತಂಡ ಕೂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗುವುದನ್ನೇ ನಿಲ್ಲಿಸಿತ್ತು. ಆ ಘಟನೆ ನಡೆದು ಬರೋಬ್ಬರಿ 18 ವರ್ಷಗಳ ಬಳಿಕ ಮತ್ತೆ ಕಿವೀಸ್ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದೆ. 2003ರಲ್ಲಿ ಐದು ಪಂದ್ಯಗಳ ಏಕದಿನ ಸರಣಿಗಾಗಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಹೋಗಿತ್ತು. ಅದೇ ಕೊನೇ. ಆ ಬಳಿಕ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಹೋಗಿದ್ದೇ ಇಲ್ಲ. ಈ ಬಾರಿ ನ್ಯೂಜಿಲೆಂಡ್ ಮತ್ತೆ ಪಾಕ್‌ಗೆ ಹೋಗಿತ್ತಾದರೂ ಸರಣಿ ರದ್ದಾಗಿದೆ. ನ್ಯೂಜಿಲೆಂಡ್ ಸರ್ಕಾರದಿಂದ ಭದ್ರತೆಯ ಎಚ್ಚರಿಕೆ ಕೇಳಿ ಬಂದಿದ್ದರಿಂದ ಕಿವೀಸ್ ಆಟಗಾರರು ಅವರ ಹೋಟೆಲ್‌ನಲ್ಲೇ ತಂಗಿದ್ದರು. ಇತ್ತ ಪಾಕ್ ಆಟಗಾರರೂ ಕೂಡ ಅವರಿಗೆ ನಿಗದಿ ಪಡಿಸಲಾಗಿದ್ದ ಹೋಟೆಲ್‌ನಲ್ಲಿ ತಂಗಿದ್ದಾಗಿ ತಿಳಿದು ಬಂದಿದೆ. ಮುಂದೂಡಲ್ಪಟ್ಟಿರುವ ಈ ಸರಣಿ ಮುಂದೆ ತಟಸ್ಥ ತಾಣದಲ್ಲಿ ನಡೆಯುವ ನಿರೀಕ್ಷೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications