ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಯಾವಾಗಲೂ ಆಟಗಾರರಿಗೆ ಪ್ರೋತ್ಸಾಹ ಮತ್ತು ಸಹಾಯವನ್ನು ಮಾಡುತ್ತಲೇ ಬಂದಿದೆ. ಟಿ20 ವಿಶ್ವಕಪ್ ವಿಜೇತ ತಂಡಕ್ಕೆ ನೀಡಿದ ಬಂಪರ್ ಆಗಿರಲಿ ಅಥವಾ ಭಾರತೀಯ ಒಲಿಂಪಿಕ್ ಸಮಿತಿಗೆ ಸಹಾಯ ಮಾಡಲು ಹಣದ ಘೋಷಣೆಯಾಗಲಿ, ಬಿಸಿಸಿಐ ಸಹಾಯ ಮಾಡಿದೆ.
ಇದೀಗ ಭಾರತ ಮತ್ತು ಬಿಸಿಸಿಐ ಅಫ್ಘಾನಿಸ್ತಾನಕ್ಕೆ ಇದೇ ರೀತಿಯ ಸಹಾಯವನ್ನು ನೀಡಿದೆ. ಗುರುವಾರ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಭಾರತವನ್ನು ತಲುಪಿದೆ. ಇದಕ್ಕೂ ಮೊದಲು ಅಫ್ಘಾನಿಸ್ತಾನ ತಂಡವು ಆಗಸ್ಟ್ 28 ರಂದು ಭಾರತವನ್ನು ತಲುಪಿತ್ತು. ಏಕೆಂದರೆ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಸರಣಿಗೆ ಭಾರತ ಆತಿಥ್ಯ ವಹಿಸಿದೆ.

ಈಗಾಗಲೇ ಉಭಯ ತಂಡಗಳು ಭಾರತದಲ್ಲಿದ್ದು, ಟೆಸ್ಟ್ ಸರಣಿಗೂ ಮುನ್ನ ಅಭ್ಯಾಸದಲ್ಲಿ ನಿರತವಾಗಿವೆ. ಅಫ್ಘಾನಿಸ್ತಾನ ಪರ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಈ ಸರಣಿಯಿಂದ ದೂರ ಉಳಿದಿದ್ದಾರೆ. ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು ಕಟ್ಟಿ ಹಾಕಲು ಅಫ್ಘಾನಿಸ್ತಾನ ತಂತ್ರ ರೂಪಿಸಿದೆ.
ಭಾರತವು ಅಫ್ಘಾನಿಸ್ತಾನಕ್ಕೆ ದೇಶದಕ್ರೀಡಾಂಗಣದಲ್ಲಿ ಆತಿಥ್ಯ ವಹಿಸುವ ಅವಕಾಶವನ್ನು ನೀಡಿದೆ. ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಭಾರತದಲ್ಲಿ ಆಯೋಜಿಸಲಿದೆ. ಈ ಪಂದ್ಯವು ನೋಯ್ಡಾದ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸೆಪ್ಟೆಂಬರ್ 9 ರಿಂದ 13 ರವರೆಗೆ ನಡೆಯಲಿದೆ.
ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿಗಳಿಂದಾಗಿ ಅಲ್ಲಿ ಕ್ರಿಕೆಟ್ ಪಂದ್ಯಗಳನ್ನು ಆಯೋಜನೆ ಮಾಡಲು ಸಾಧ್ಯವಿಲ್ಲ. ಭದ್ರತಾ ಕಾರಣಗಳಿಂದಾಗಿ ಯಾವುದೇ ತಂಡವು ಅಲ್ಲಿಗೆ ಪ್ರವಾಸ ಮಾಡಲು ಇಷ್ಟಪಡುವುದಿಲ್ಲ. ಹೀಗಾಗಿ ಭಾರತದಲ್ಲಿ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಟೆಸ್ಟ್ ಸರಣಿ ಆಯೋಜನೆಗೊಂಡಿದ್ದು, ಈಗ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ಬಿಸಿಸಿಐ ಮತ್ತೊಮ್ಮೆ ಬೆಂಬಲ ನೀಡಿದೆ.
ಈ ಹಿಂದೆ 2018ರಲ್ಲಿ ಬೆಂಗಳೂರಿನಲ್ಲಿ ಭಾರತ ಆತಿಥ್ಯ ವಹಿಸಿತ್ತು. ಇದಾದ ನಂತರ 2019 ರಲ್ಲಿ ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ವಿರುದ್ಧದ ಸರಣಿಗೂ ಆತಿಥ್ಯ ವಹಿಸಲಾಗಿತ್ತು. ಭಾರತದ ವಿರುದ್ಧ ಅಫ್ಘಾನಿಸ್ತಾನ ತನ್ನ ಏಕೈಕ ಟೆಸ್ಟ್ ಪಂದ್ಯವನ್ನಾಡಿದೆ. ಇದುವರೆಗೆ ಅಫ್ಘಾನಿಸ್ತಾನ ಒಟ್ಟು 9 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 3 ಪಂದ್ಯಗಳನ್ನು ಭಾರತದಲ್ಲಿ ಆಡಿದೆ.
ಬಿಸಿಸಿಐ ಕೇವಲ ಅಫ್ಘಾನಿಸ್ತಾನ ತಂಡಕ್ಕೆ ಮಾತ್ರ ಸಹಾಯ ಮಾಡಿಲ್ಲ. ಮತ್ತೊಂದು ನೆರೆಯ ರಾಷ್ಟ್ರ ನೇಪಾಳ ಕ್ರಿಕೆಟ್ ತಂಡದ ಕಷ್ಟಕ್ಕೂ ನೆರವಾಗಿದೆ. ಇತ್ತೀಚೆಗೆ ನೇಪಾಳ ತಂಡಕ್ಕೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಅಭ್ಯಾಸ ಮಾಡಲು ಅವಕಾಶ ನೀಡಲಾಗಿತ್ತು.
ಇದಲ್ಲದೆ, ಬಾಂಗ್ಲಾದೇಶದಲ್ಲಿ ಮೂಲಸೌಕರ್ಯವನ್ನು ಉತ್ತೇಜಿಸಲು ಬಿಸಿಸಿಐ ಸಹಾಯ ಮಾಡಿದೆ. ಕ್ರಿಕೆಟ್ ಅನ್ನು ಉತ್ತೇಜಿಸಲು ಭಾರತವು ಪ್ರತಿಯೊಂದು ಮಂಡಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುತ್ತಿರುವುದು ಭಾರತದ ಹೆಮ್ಮೆ.