ನ್ಯೂಜಿಲೆಂಡ್ vs ಬಾಂಗ್ಲಾದೇಶ ಪ್ರಥಮ ಟೆಸ್ಟ್ 3ನೇ ದಿನ: ನ್ಯೂಜಿಲೆಂಡ್ ವಿರುದ್ಧ ತಿರುಗಿಬಿದ್ದ ಬಾಂಗ್ಲಾದೇಶ

ಕಳೆದ ವರ್ಷ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ಭಾರತದ ಪ್ರವಾಸವನ್ನು ಕೈಗೊಂಡಿದ್ದ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿತ್ತು. ಈ ಎರಡೂ ಸರಣಿಗಳಲ್ಲಿಯೂ ಟೀಮ್ ಇಂಡಿಯಾ ವಿರುದ್ಧ ಸೋತ ನ್ಯೂಜಿಲೆಂಡ್ ಇದೀಗ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೆಣಸಾಡುತ್ತಿದೆ. ಹೌದು, ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡಿರುವ ಬಾಂಗ್ಲಾದೇಶ ಕಿವೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ. ಇತ್ತಂಡಗಳ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯ ನೂತನ ವರ್ಷದ ಮೊದಲನೇ ದಿನದಂದು ಆರಂಭವಾಗಿದ್ದು ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶದ ಬೌಲಿಂಗ್ ಆಯ್ಕೆ ಮಾಡಿಕೊಂಡು ನ್ಯೂಜಿಲೆಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿತು. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಮೊದಲನೇ ಇನ್ನಿಂಗ್ಸ್‌ನಲ್ಲಿ 328 ರನ್‌ಗಳಿಗೆ ಆಲ್ ಔಟ್ ಆಗಿದೆ. ನ್ಯೂಜಿಲೆಂಡ್ ತಂಡದ ಪರ ಮೊದಲನೆ ಇನ್ನಿಂಗ್ಸ್‌ನಲ್ಲಿ ಡಿವೋನ್ ಕಾನ್ವೆ 122, ವಿಲ್ ಯಂಗ್ 52 ಮತ್ತು ಹೆನ್ರಿ ನಿಕೊಲ್ಸ್ 72 ರನ್ ಕಲೆ ಹಾಕಿದರು. ಬಾಂಗ್ಲಾದೇಶದ ಪರ ಶೊರಿಫುಲ್ ಇಸ್ಲಾಮ್ ಮತ್ತು ಮೆಹದಿ ಹಸನ್ ತಲಾ 3 ವಿಕೆಟ್ ಪಡೆದರೆ, ಮೊಮಿನುಲ್ 2 ವಿಕೆಟ್ ಮತ್ತು ಎಬಡಟ್ ಹುಸೇನ್ 1 ವಿಕೆಟ್ ಪಡೆದರು.
ಇನ್ನು ನ್ಯೂಜಿಲೆಂಡ್ ವಿರುದ್ಧ ಮೊದಲನೇ ದಿನದಾಟದಂದು ಉತ್ತಮ ಪ್ರದರ್ಶನ ನೀಡಲಾಗದೆ ಎಡವಿದ್ದ ಬಾಂಗ್ಲಾದೇಶ ಎರಡನೇ ಮತ್ತು ಮೂರನೇ ದಿನದಾಟದಂದು ಪ್ರತ್ಯುತ್ತರವನ್ನು ನೀಡಿದೆ. ತನ್ನ ಪಾಲಿನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಮೂರನೇ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 401 ರನ್ ಗಳಿಸಿದೆ. ಬಾಂಗ್ಲಾದೇಶದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಶದ್ಮನ್ ಇಸ್ಲಾಂ 22, ಮಹಮ್ಮದುಲ್ ಹಸನ್ ಜಾಯ್ 78, ನಿಜಾಮುಲ್ ಹುಸೈನ್ ಶಾಂಟೋ 64, ನಾಯಕ ಮೊಮಿನುಲ್ ಹಕ್ 88, ಮುಶ್ಪೀಕರ್ ರಹೀಂ 12, ಲಿಟನ್ ದಾಸ್ 86, ಯಸಿರ್ ಅಲಿ ಅಜೇಯ 11 ರನ್ ಮತ್ತು ಮೆಹದಿ ಹಸನ್ ಅಜೇಯ 20 ರನ್ ಕಲೆಹಾಕಿದರು.
ಮುಶ್ಪೀಕರ್ ರಹೀಂ ಹೊರತುಪಡಿಸಿ ಬಾಂಗ್ಲಾದೇಶದ ಇನ್ನುಳಿದ ಮಧ್ಯಮ ಕ್ರಮಾಂಕದ ಎಲ್ಲಾ ಬ್ಯಾಟ್ಸ್‌ಮನ್‌ಗಳೂ ಸಹ ಜವಾಬ್ದಾರಿಯುತ ಪ್ರದರ್ಶನವನ್ನು ನೀಡಿದ ಕಾರಣ ಬಾಂಗ್ಲಾದೇಶ ಉತ್ತಮ ಹಂತದಲ್ಲಿದ್ದು ಬಲಿಷ್ಠ ನ್ಯೂಜಿಲೆಂಡ್ ವಿರುದ್ಧ ಮೂರನೇ ದಿನದಾಟದಂತ್ಯಕ್ಕೆ 73 ರನ್ ಮುನ್ನಡೆಯನ್ನು ಕಾಯ್ದುಕೊಂಡಿದೆ. ಇನ್ನು ಬಾಂಗ್ಲಾದೇಶದ ಮಧ್ಯಮ ಕ್ರಮಾಂಕದ ಉತ್ತಮ ಪ್ರದರ್ಶನದ ಮುಂದೆ ಮಂಕಾದ ಕಿವೀಸ್ ಬೌಲರ್‌ಗಳು ವಿಕೆಟ್ ಪಡೆಯುವಲ್ಲಿ ಹರಸಾಹಸ ಪಡುತ್ತಿದ್ದಾರೆ. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ ಹಾಗೂ ನೀಲ್ ವ್ಯಾಗ್ನರ್ ತಲಾ 3 ವಿಕೆಟ್ ಪಡೆದಿದ್ದು ಇನ್ನುಳಿದ ಯಾವುದೇ ಬೌಲರ್ ಕೂಡ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.
ಹೀಗೆ ಮೂರನೇ ದಿನದಾಟದಂತ್ಯಕ್ಕೆ ಬಾಂಗ್ಲಾದೇಶ ನ್ಯೂಜಿಲೆಂಡ್ ವಿರುದ್ಧ ಹಿಡಿತವನ್ನು ಸಾಧಿಸಿದ್ದು ನಾಲ್ಕನೇ ದಿನದಾಟದಂದು ಎಷ್ಟು ಸಮಯದವರೆಗೆ ಬ್ಯಾಟಿಂಗ್ ಮಾಡಲಿದೆ ಎಂಬುದು ಪಂದ್ಯದ ಫಲಿತಾಂಶದ ಪರಿಣಾಮ ಬೀರಲಿದೆ. ನ್ಯೂಜಿಲೆಂಡ್ ಬಾಂಗ್ಲಾದೇಶದ ಉಳಿದ 4 ವಿಕೆಟ್‍ಗಳನ್ನು ವೇಗವಾಗಿ ಪಡೆದುಕೊಂಡು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿ ಬಾಂಗ್ಲಾದೇಶಕ್ಕೆ ಟಾರ್ಗೆಟ್ ನೀಡಬೇಕಾಗಿದ್ದು ಪಂದ್ಯ ಡ್ರಾ ಆಗುವ ಲಕ್ಷಣಗಳನ್ನು ಹೆಚ್ಚಾಗಿ ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications