
ಕಳೆದ ವರ್ಷ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯವಾದ ನಂತರ ಭಾರತದ ಪ್ರವಾಸವನ್ನು ಕೈಗೊಂಡಿದ್ದ ನ್ಯೂಜಿಲೆಂಡ್ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿತ್ತು. ಈ ಎರಡೂ ಸರಣಿಗಳಲ್ಲಿಯೂ ಟೀಮ್ ಇಂಡಿಯಾ ವಿರುದ್ಧ ಸೋತ ನ್ಯೂಜಿಲೆಂಡ್ ಇದೀಗ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸೆಣಸಾಡುತ್ತಿದೆ.
ಹೌದು, ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಂಡಿರುವ ಬಾಂಗ್ಲಾದೇಶ ಕಿವೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ. ಇತ್ತಂಡಗಳ ನಡುವೆ ಚೊಚ್ಚಲ ಟೆಸ್ಟ್ ಪಂದ್ಯ ನೂತನ ವರ್ಷದ ಮೊದಲನೇ ದಿನದಂದು ಆರಂಭವಾಗಿದ್ದು ಬೇ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾ ದೇಶ ಫೀಲ್ಡಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿದ್ದು ಎದುರಾಳಿ ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು.
ಹೀಗೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರರಾಗಿ ನಾಯಕ ಟಾಮ್ ಲಾಥಮ್ ಮತ್ತು ವಿಲ್ ಯಂಗ್ ಕಣಕ್ಕಿಳಿದರು. ಹೀಗೆ ಆರಂಭಿಕರಾಗಿ ಕಣಕ್ಕಿಳಿದ ನಾಯಕ ಟಾಮ್ ಲಾಥಮ್ ಕೇವಲ 1 ರನ್ ಗಳಿಸಿ ಔಟ್ ಆದರೆ, ವಿಲ್ ಯಂಗ್ 52 ರನ್ ಬಾರಿಸಿ ಜವಾಬ್ದಾರಿಯುತ ಆಟವನ್ನಾಡಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಡಿವೋನ್ ಕಾನ್ವೆ 122 ರನ್ ಬಾರಿಸುವುದರ ಮೂಲಕ ಅತ್ಯುತ್ತಮ ಪ್ರದರ್ಶನವನ್ನು ನೀಡಿದರೆ, ರಾಸ್ ಟೇಲರ್ 31 ರನ್ ಗಳಿಸಿ ಔಟ್ ಆದರು. ಇನ್ನುಳಿದಂತೆ ಹೆನ್ರಿ ನಿಕೋಲ್ಸ್ ಅಜೇಯ 32 ರನ್ ಗಳಿಸಿದರೆ ಟಾಮ್ ಬ್ಲಂಡೆಲ್ ಅಜೇಯ 11 ರನ್ ದಾಖಲಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.
ಈ ಮೂಲಕ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನದಾಟದಂತ್ಯಕ್ಕೆ ನ್ಯೂಜಿಲೆಂಡ್ 5 ವಿಕೆಟ್ ನಷ್ಟಕ್ಕೆ 258 ರನ್ ಕಲೆಹಾಕಿದ್ದು ಉತ್ತಮ ಹಂತದಲ್ಲಿದೆ. ಇನ್ನು ಪ್ರವಾಸಿ ಬಾಂಗ್ಲಾದೇಶ ತಂಡ ನ್ಯೂಜಿಲೆಂಡ್ ಬ್ಯಾಟಿಂಗ್ ವಿಭಾಗದ ಮೇಲೆ ಹಿಡಿತ ಸಾಧಿಸಲಾಗದೇ ಪಂದ್ಯದ ಮೊದಲನೇ ದಿನ ಸಾಮಾನ್ಯ ಪ್ರದರ್ಶನವನ್ನು ನೀಡಿದೆ. ಬಾಂಗ್ಲಾದೇಶದ ಶೊರಿಫುಲ್ ಇಸ್ಲಾಂ 2 ವಿಕೆಟ್ ಪಡೆದರೆ, ಎಬಡಟ್ ಹುಸೇನ್ ಮತ್ತು ಮೊಮಿನುಲ್ ಹಕ್ ತಲಾ ಒಂದೊಂದು ವಿಕೆಟ್ ಪಡೆದರು.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ 2021-23ನೇ ಸಾಲಿನಲ್ಲಿ ಇದುವರೆಗೂ 2 ಟೆಸ್ಟ್ ಪಂದ್ಯಗಳನ್ನಾಡಿರುವ ನ್ಯೂಜಿಲೆಂಡ್ 1 ಪಂದ್ಯದಲ್ಲಿ ಸೋತು ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದರೆ, 2 ಟೆಸ್ಟ್ ಪಂದ್ಯಗಳನ್ನಾಡಿ ಎರಡರಲ್ಲಿಯೂ ಸೋತಿರುವ ಬಾಂಗ್ಲಾ ದೇಶ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನ ಪಡೆದುಕೊಂಡಿದೆ.
ನ್ಯೂಜಿಲೆಂಡ್ ಆಡುವ ಬಳಗ: ಟಾಮ್ ಲ್ಯಾಥಮ್ (ಸಿ), ವಿಲ್ ಯಂಗ್, ಡೆವೊನ್ ಕಾನ್ವೇ, ರಾಸ್ ಟೇಲರ್, ಹೆನ್ರಿ ನಿಕೋಲ್ಸ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ರಚಿನ್ ರವೀಂದ್ರ, ಕೈಲ್ ಜೇಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್ ಮತ್ತು ಟ್ರೆಂಟ್ ಬೌಲ್ಟ್
ಬಾಂಗ್ಲಾದೇಶ ಆಡುವ ಬಳಗ: ಶಾದ್ಮನ್ ಇಸ್ಲಾಂ, ಮಹ್ಮುದುಲ್ ಹಸನ್ ಜಾಯ್, ನಜ್ಮುಲ್ ಹುಸೇನ್ ಶಾಂಟೋ, ಮೊಮಿನುಲ್ ಹಕ್ (ನಾಯಕ), ಮುಶ್ಫಿಕರ್ ರಹೀಮ್, ಲಿಟನ್ ದಾಸ್ (ವಿಕೆಟ್ ಕೀಪರ್), ಯಾಸಿರ್ ಅಲಿ, ಮೆಹಿದಿ ಹಸನ್, ತಸ್ಕಿನ್ ಅಹ್ಮದ್, ಎಬಾಡೋತ್ ಹೊಸೈನ್, ಶೋರಿಫುಲ್ ಇಸ್ಲಾಂ