
ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಪ್ರಿಕಾ ಅದ್ಭುತ ರೀತಿಯಲ್ಲಿ ತಿರುಗಿ ಬೀಳಲು ಯಶಸ್ವಿಯಾಗಿದ್ದು ಮೊದಲ ಪಂದ್ಯದ ಸೋಲಿನ ನಂತರ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲಲು ಸಜ್ಜಾಗಿದೆ. ಎರಡನೇ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ದಕ್ಷಿಣ ಆಫ್ರಿಕಾ ಉತ್ತಮ ಪ್ರದರ್ಶನ ನಿಡಿದ್ದು ಅಂತಿಮ ದಿನದಾಟದಲ್ಲಿ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದೆ.
ನಾಲ್ಕನೇ ದಿನದಾಟದ ಅಂತ್ಯದಲ್ಲಿ ಆತಿಥೇಯರು ಸಂಕಷ್ಟದಲ್ಲಿ: ನಾಲ್ಕನೇ ದಿನದಾಟದ ಮುಕ್ತಾಯದ ಸಂದರ್ಭದಲ್ಲಿ ಆತಿಥೇಯ ನ್ಯೂಜಿಲೆಂಡ್ ತಂಡ ಪಂದ್ಯವನ್ನು ಕಳೆದುಕೊಳ್ಳುವ ಆತಂಕದಲ್ಲಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲುವು ಸಾಧಿಸಲು ನ್ಯೂಜಿಲೆಂಡ್ ತಂಡಕ್ಕೆ 426 ರನ್‌ಗಳ ಗುರಿಯನ್ನು ನಿಗದಿಪಡಿಸಿತ್ತು ಪ್ರವಾಸಿ ದಕ್ಷಿಣ ಆಫ್ರಿಕಾ. ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಆಘಾತದ ಮೇಲೆ ಆಘಾತವನ್ನು ಅನುಭವಿಸಿತು. ತಂಡದ ಮೊತ್ತ 6 ರನ್‌ಗಳಾಗುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಪಡೆ 81 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತು. ನಾಲ್ಕನೇ ದಿನದಾಟದ ಅಂತ್ಯದಲ್ಲಿ 94 ರನ್‌ಗಳಿಸಿ ನಾಲ್ಕು ವಿಕೆಟ್ ನಷ್ಟದಲ್ಲಿದೆ. ಡೆವೋನ್ ಕಾನ್ವ ಮಾತ್ರ 60 ರನ್‌ಗಳಿಸಿ ಉತ್ತಮ ಪ್ರತಿರೋಧವನ್ನು ಒಡ್ಡುತ್ತಿದ್ದಾರೆ.
ಸ್ಕೋರ್‌ಕಾರ್ಡ್ ಹೀಗಿದೆ
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಸರೆಲ್ ಇರ್ವೀ ಅವರ ಶತಕದ ನೆರವಿನಿಂದ 364 ರನ್‌ಗಳ ಉತ್ತಮ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಯಿತು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ತಂಡ 293 ರನ್‌ಗಳಿಗೆ ಆಲೌಟ್ ಆಗಿ 71 ರನ್‌ಗಳ ಹಿನ್ನಡೆಯನ್ನು ಅನುಭವಿಸಿತು. ಬೌಲಿಂಗ್‌ನಲ್ಲಿ ಕಗಿಸೋ ರಬಡಾ ಹಾಗೂ ಜಾನ್ಸನ್ ಭಯಾನಕ ಬೌಲಿಂಗ್ ದಾಳಿಯ ಮೂಲಕ ಮಿಂಚಿದರು. ರಬಡಾ 5 ವಿಕೆಟ್ ಪಡೆದರೆ ಜಾನ್ಸನ್ 4 ವಿಕೆಟ್ ಸಂಪಾದಿಸಿದರು.
ನಂತರ ಎರಡನೇ ಇನ್ನಿಂಗ್ಸ್‌ನಲ್ಲಿ ದಕ್ಷಿಣ ಆಪ್ರಿಕಾ ತಂಡ ವಿಕೆಟ್ ಕೀಪರ್ ವರ್ರಾಯ್ನೆ ಶತಕದ ನೆರವಿನೊಂದಿಗೆ 354 ರನ್‌ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಹೀಗಾಗಿ ಆತಿಥೇಯ ನ್ಯೂಜಿಲೆಂಡ್ ತಂಡಕ್ಕೆ 426 ರನ್‌ಗಳನ್ನು ಬೆನ್ನಟ್ಟುವ ಬೃಹತ್ ಸವಾಲನ್ನು ಮುಂದಿಟ್ಟಿತು. ಇದನ್ನು ಬೆನ್ನಟ್ಟಿರುವ ಕಿವೀಸ್ ಪಡೆ ಮತ್ತೊಮ್ಮೆ ದಕ್ಷಿಣ ಆಪ್ರಿಕಾ ಬೌಲಿಂಗ್ ದಾಳಿಗೆ ಆಘಾತ ಅನುಭವಿಸಿದೆ. ಅಂತಿಮ ದಿನದಾಟದಲ್ಲಿ 6 ವಿಕೆಟ್‌ಗಳನ್ನು ಕಬಳಿಸಿದರೆ ಕಿವೀಸ್ ಪಡೆಯ ವಿರುದ್ಧ ಭರ್ಜರಿ ಜಯ ದಾಖಲಿಸಲಿದೆ ದಕ್ಷಿಣ ಆಫ್ರಿಕಾ. ಆದರೆ ನ್ಯೂಜಿಲೆಂಡ್ ಕೂಡ ಪಂದ್ಯವನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸಲಿದೆ. ಹೀಗಾಗಿ ಅಂತಿಮ ದಿನದಾಟ ಸಾಕಷ್ಟು ಕುತೂಹಲ ಮೂಡಿಸಿದೆ.
ನ್ಯೂಜಿಲೆಂಡ್ ಟೆಸ್ಟ್ ತಂಡ: ಟಾಮ್ ಲ್ಯಾಥಮ್ (ನಾಯಕ), ವಿಲ್ ಯಂಗ್, ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ಟಿಮ್ ಸೌಥಿ, ನೀಲ್ ವ್ಯಾಗ್ನರ್, ಮ್ಯಾಟ್ ಹೆನ್ರಿ
ಬೆಂಚ್: ಹಮಿಶ್ ರುದರ್ಫೋರ್ಡ್, ಕ್ಯಾಮ್ ಫ್ಲೆಚರ್, ಬ್ಲೇರ್ ಟಿಕ್ನರ್, ರಚಿನ್ ರವೀಂದ್ರ
ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ: ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಐಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ವಿಯಾನ್ ಮುಲ್ಡರ್, ಕೇಶವ್ ಮಹಾರಾಜ್, ಮಾರ್ಕೊ ಜಾನ್ಸೆನ್, ಕಗಿಸೊ ರಬಾಡಾ, ಲುಥೋ ಸಿಪಾಮ್ಲಾ
ಬೆಂಚ್: ಜುಬೇರ್ ಹಮ್ಜಾ, ಗ್ಲೆಂಟನ್ ಸ್ಟೌರ್ಮನ್, ಡುವಾನ್ ಒಲಿವಿಯರ್, ರಿಯಾನ್ ರಿಕೆಲ್ಟನ್, ಲುಂಗಿ ಎನ್ಗಿಡಿ, ಸೈಮನ್ ಹಾರ್ಮರ್