
ಕಳೆದ ಟಿ20 ವಿಶ್ವಕಪ್‌ಗೆ ಕೆಲವೇ ದಿನಗಳ ಮುನ್ನ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಭಾರೀ ದೊಡ್ಡ ಆಘಾತವೊಂದನ್ನು ನೀಡಿತ್ತು. ಪಾಕಿಸ್ತಾನ ಪ್ರವಾಸಕ್ಕೆ ಸುದೀರ್ಘ ಕಾಲದ ಬಳಿಕ ತೆರಳಿದ್ದ ನ್ಯೂಜಿಲೆಂಡ್ ತಂಡ ಸರಣಿಯ ಆರಂಭಕ್ಕೆ ಕೆಲವೇ ಕ್ಷಣಗಳಿರುವಾಗ ಸರಣಿಯನ್ನು ಆಡದಿರುವ ನಿರ್ಧಾರ ತೆಗೆದುಕೊಂಡಿತ್ತು. ಭದ್ರತಾ ಕಾರಣವನ್ನು ಮುಂದಿಟ್ಟುಕೊಂಡು ನ್ಯೂಜಿಲೆಂಡ್ ಮಂಡಳಿ ಈ ನಿರ್ಧಾರವನ್ನು ತೆಗೆದುಒಂಡಿತ್ತು, ಇದು ಪಾಕಿಸ್ತಾನ ತಂಡಕ್ಕೆ ಆರ್ಥಿಕವಾಗಿ ನಷ್ಟವನ್ನುಂಟು ಮಾಡಿದ್ದು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಮುಜುಗರಕ್ಕೆ ಕಾರಣವಾಗಿತ್ತು.
ಆದರೆ ಇದೀಗ ನ್ಯೂಜಿಲೆಂಡ್ ತಂಡ ಮುಂಬರುವ 2022-23ರ ಕ್ರಿಕೆಟ್ ಋತುವಿನಲ್ಲಿ ಒಂದಲ್ಲ ಎರಡು ಬಾರಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ನಿರ್ಧರಿಸಿದೆ. ಈ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನುಭವಿಸಿದ ನಷ್ಟವನ್ನು ಸರಿದೂಗಿಸುವ ಪ್ರಯತ್ನಕ್ಕೆ ಮುಂದಾಗಿದೆ. ಈ ಮೂಲಕ ಎರಡು ಮಂಡಳಿಗಳ ಮಧ್ಯೆ ಉಂಟಾಗಿದ್ದ ಬಿರುಕಿಗೂ ಇದರಿಂದ ಪರಿಹಾರ ದೊರೆಯಲಿದೆ.
ಆದರೆ ಈ ಸರಣಿ 2022ರ ಅಂತಿಮ ಘಟ್ಟದಲ್ಲಿ ನಡೆಯಲಿದೆ. ಅಂದರೆ ಡಿಸೆಂಬರ್ ವೇಳೆಗೆ ಆಯೋಜಿಸಲು ನಿರ್ಧರಿಸಲಾಗಿದೆ. 2023ರ ಏಪ್ರಿಲ್‌ನಲ್ಲಿ ಕಿವೀಸ್ ಎರಡನೇ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಮೂಲಕ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ಮತ್ತೊಮ್ಮೆ ಸಮಯ ನಿಗದಿಯಾಗಿದೆ.
2022ರ ಡಿಸೆಂಬರ್‌ನಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರವಾಸವನ್ನು ಕೈಗೊಳ್ಳಲಿದ್ದು ಈ ಸಂದರ್ಭದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿ ಆಯೋಜನೆಯಾಗಲಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಮೂರು ಏಕದಿನ ಪಂದ್ಯಗಳು ಈ ಸರಣಿಯಲ್ಲಿ ನಡೆಯಲಿದೆ. ಡಿಸೆಂಬರ್- ಜನವರಿ ತಿಂಗಳ ಅವಧಿಯಲ್ಲಿ ಈ ಸರಣಿ ನಡೆಯಲಿದೆ. ಅದಾದ ಬಳಿಕ 2023ರ ಏಪ್ರಿಲ್ ತಿಂಗಳಿನಲ್ಲಿ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ಮತ್ತೊಮ್ಮೆ ಪ್ರವಾಸ ಕೈಗೊಳ್ಳಲಿದೆ. ಈ ಸಂದರ್ಭದಲ್ಲಿ ಸೀಮಿತ ಓವರ್‌ಗಳ ಸರಣಿ ಮಾತ್ರವೇ ನಡೆಯಲಿದ್ದು ಮೊದಲಿಗೆ ಐದು ಪಂದ್ಯಗಳ ಏಕದಿನ ಸರಣಿ ಹಾಗೂ ನಂತರ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ತಂಡಗಳು ಮುಖಾಮುಖಿಯಾಗಲಿದೆ. ಈ ಮೂಲಕ ಪಾಕಿಸ್ತಾನ ನೆಲದಲ್ಲಿ ನ್ಯೂಜಿಲೆಂಡ್ ತಂಡ ಒಟ್ಟು 2 ಟೆಸ್ಟ್, 8 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನು ಆಡಲಿದೆ.
ನ್ಯೂಜಿಲೆಂಡ್‌ನಿಂದಾಗಿ ಭಾರೀ ಅವಮಾನಕ್ಕೆ ತುತ್ತಾಗಿದ್ದ ಪಾಕ್: ಇನ್ನು ನ್ಯೂಜಿಲೆಂಡ್ ವಿಶ್ವಕಪ್‌ಗೆ ಕೆಲವೇ ದಿನಗಳಿರುವಾಗ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು ಸರಣಿಯಲ್ಲಿ ಭಾಗವಹಿಸಲು ಸಜ್ಜಾಗಿತ್ತು. ಆದರೆ ಸರಣಿಯ ಮೊದಲ ಪಂದ್ಯದ ಆರಂಭಕ್ಕೆ ಕೆಲವೇ ಕ್ಷಣಗಳು ಇರುವಾಗ ನ್ಯೂಜಿಲೆಂಡ್ ತಂಡ ಸರಣಿಯಿಂದ ಹಿಂದಕ್ಕೆ ಸರಿಯುವ ನಿರ್ಧಾರ ತೆಗೆದುಕೊಂಡಿತ್ತು. ಭದ್ರತಾ ಕಾರಣಗಳನ್ನು ಇದಕ್ಕೆ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನೀಡಿತ್ತು. ಅದಾದ ಬಳಿಕ ಇಂಗ್ಲೆಂಡ್ ತಂಡ ಕೂಡ ನಿಗದಿಯಾಗಿದ್ದ ಸರಣಿಯಿಂದ ಹಿಂದಕ್ಕೆ ಸರಿಯುವುದಾಗಿ ಘೋಷಿಸಿತ್ತು. ಆದರೆ ಭದ್ರತಾ ಕಾರಣವನ್ನು ನೀಡದೆ ಆಟಗಾರರ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪ್ರವಾಸದಿಂದ ಹಿಂದಕ್ಕೆ ಸರಿಯುತ್ತಿರುವುದಾಗಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಘೋಷಣೆ ಮಾಡಿತ್ತು.
ಭಾರೀ ಭದ್ರತೆಯಲ್ಲಿ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್: ಇನ್ನು ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಂಡಗಳು ಹಿಂದಕ್ಕೆ ಸರಿದಾಗ ಪಾಕಿಸ್ತಾನದ ಪರವಾಗಿ ವೆಸ್ಟ್ ಇಂಡೀಸ್‌ನ ಕೆಲ ಆಟಗಾರರು ಹಾಗೂ ಇಲ್ಲಿನ ಕ್ರಿಕೆಟ್ ಮಂಡಳಿ ಪ್ರತಿಕ್ರಿಯೆ ನೀಡಿತ್ತು. ಅಲ್ಲದೆ ವೆಸ್ಟ್ ಇಂಡೀಸ್ ಇತ್ತೀಚೆಗಷ್ಟೇ ಪಾಕಿಸ್ತಾನಕ್ಕೆ ತೆರಳಿ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಿತ್ತು. ಆದರೆ ಕೊರೊನಾವೈರಸ್ ವೆಸ್ಟ್ ಇಂಡೀಸ್ ತಂಡಕ್ಕೆ ಕಾಡಿದ ಕಾರಣದಿಂದಾಗಿ ಕೇವಲ ಮೂರು ಪಂದ್ಯಗಳ ಟಿ20 ಸರಣಿಯನ್ನು ಮಾತ್ರವೇ ಆಡಿಸಲಾಗಿದ್ದು ಏಕದಿನ ಸರಣಿಯನ್ನು ಮುಂದೂಡಲಾಗಿದೆ. ಈ ಸರಣಿಯ ಸಂದರ್ಭದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಭಾರೀ ಪ್ರಮಾಣದಲ್ಲಿ ಭದ್ರತೆಯನ್ನು ನೀಡಲಾಗಿದ್ದು ಇದು ಕ್ರಿಕೆಟ್ ಪ್ರೇಮಿಗಳ ಗಮನಸೆಳೆಯಿತು.