ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಬಾರಿ ಐಸಿಸಿ ಮೆಗಾ ಈವೆಂಟ್‌ನ್ನು ಪಾಕಿಸ್ತಾನ ಆಯೋಜಿಸುತ್ತಿದೆ. ಈ ಟೂರ್ನಿಯಲ್ಲಿ ಎಂಟು ತಂಡಗಳು ಭಾಗವಹಿಸುತ್ತಿವೆ. ಈ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಬೇಕು ಎಂಬ ಉದ್ದೇಶದಿಂದ ಎಲ್ಲ ತಂಡಗಳು ತಾಲೀಮು ನಡೆಸುತ್ತಿವೆ. ಈ ವೇಳೆ ಆಟಗಾರರ ಗಾಯ ತಂಡಕ್ಕೆ ಬಹುವಾಗಿ ಕಾಡುತ್ತಿದೆ. ನ್ಯೂಜಿಲೆಂಡ್ ತಂಡದ ಸ್ಟಾರ್ ಆಟಗಾರ ರಚಿನ್ ರವೀಂದ್ರ ಅವರಿಗೆ ಗಾಯವಾಗಿದ್ದು, ಕಿವೀಸ್ ತಂಡದ ಚಿಂತೆ ಹೆಚ್ಚಿಸಿದೆ.
ಸದ್ಯ ಪಾಕಿಸ್ತಾನದಲ್ಲಿ ತ್ರಿಕೋನ ಸರಣಿ ನಡೆಯುತ್ತಿದೆ. ಈ ಸರಣಿಯಲ್ಲಿ ಆತಿಥೇಯ ಪಾಕ್ ಸೇರಿದಂತೆ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸುತ್ತಿವೆ. ಈ ಟೂರ್ನಿಯಲ್ಲಿ ಶನಿವಾರ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಣ ಪಂದ್ಯ ನಡೆಯಿತು. ಈ ವೇಳೆ ಫೀಲ್ಡಿಂಗ್ ಮಾಡುವಾಗ ರಚಿನ್ ರವೀಂದ್ರ ಅವರು ಗಾಯಕ್ಕೆ ತುತ್ತಾಗಿದ್ದಾರೆ.

ನ್ಯೂಜಿಲೆಂಡ್ ನೀಡಿದ್ದ ಸವಾಲಿನ ಮೊತ್ತವನ್ನು ಪಾಕ್ ಬೆನ್ನಟ್ಟಿತ್ತು. ಈ ವೇಳೆ 38ನೇ ಓವರ್ ಎಸೆಯಲು ಮೈಕೆಲ್ ಬ್ರೇಸ್‌ವೆಲ್ ಮುಂದಾದರು. ಈ ಓವರ್ ನಾಲ್ಕನೇ ಎಸೆತದಲ್ಲಿ ಖುಸ್ದಿಲ್ ಶಾ ಡೀಪ್‌ಗೆ ಶಾಟ್ ಬಾರಿಸಿದರು. ಈ ವೇಳೆ ಫೀಲ್ಡ್ ಮಾಡುತ್ತಿದ್ದ ರಚಿನ್ ಅದನ್ನು ತಡೆಯಲು ಓಡಿದರು. ಚೆಂಡು ಅವರ ಹಣೆಗೆ ಬಡಿಯಿತು. ಇದಾದ ಬಳಿಕ ರಚಿನ್ ಮೈದಾನದಲ್ಲೇ ಕುಳಿತು ಬಿಟ್ಟರು. ಇವರ ಹಣೆಯಿಂದ ರಕ್ತ ಸುರಿಯಲು ಆರಂಭಿಸಿತು. ಈ ದೃಶ್ಯ ನೋಡ್ತಾ ಇದ್ದಂತೆ ಮೈದಾನದಲ್ಲಿ ನೆರೆದ ಅಭಿಮಾನಿಗಳು ಮೌನಕ್ಕೆ ಜಾರಿದರು. ನಂತರ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು.
ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಬ್ಯಾಟಿಂಗ್ ಮಾಡಲು ಮುಂದಾಯಿತು. ಈ ವೇಳೆ ಆರಂಭಿಕರು ಉತ್ತಮ ಕಾಣಿಕೆ ನೀಡಲಿಲ್ಲ. ಭರವಸೆಯ ಆಟಗಾರರಾದ ಕೇನ್ ವಿಲಿಯಮ್ಸನ್ ಹಾಗೂ ಡೇರಿಲ್ ಮಿಚೆಲ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 3ನೇ ವಿಕೆಟ್‌ಗೆ 112 ಎಸೆತಗಳಲ್ಲಿ 95 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ಕೇನ್ 58, ಡೇರಲ್ ಮಿಚೆಲ್ 81 ರನ್ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಗ್ಲೇನ್ ಫಿಲಿಪ್ಸ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 74 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್ ಸಹಾಯದಿಂದ ಅಜೇಯ 106 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಕಿವೀಸ್ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 330 ರನ್ ಕಲೆ ಹಾಕಿತು.

ಗುರಿಯನ್ನು ಹಿಂಬಾಲಿಸಿದ ಪಾಕ್ ತಂಡದ ಪರ ಯಾವೊಬ್ಬ ಬ್ಯಾಟರ್ ಉತ್ತಮವಾಗಿ ಬ್ಯಾಟ್ ಮಾಡಲಿಲ್ಲ. ಆರಂಭಿಕ ಫಖರ್ ಜಮಾನ್ 69 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್ ನೆರವಿನಿಂದ 84 ರನ್ ಕಲೆ ಹಾಕಿದರೆ, ಸಲ್ಮಾನ್ ಆಘಾ 40 ರನ್ ಸಿಡಿಸಿದರು. ಅಂತಿಮವಾಗಿ ಪಾಕ್ 47.5 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲೌಟ್ ಆಯಿತು.