ಆಸ್ಟ್ರೇಲಿಯಾ ವಿರುದ್ಧ ರಚಿನ್ ರವೀಂದ್ರ ಅಮೋಘ ಶತಕ ಇನಿಂಗ್ಸ್ ಕಟ್ಟಿ ಅಬ್ಬರಿಸಿದ್ದಾರೆ. ರಚಿನ್ ರವೀಂದ್ರ 89 ಎಸೆತಗಳಲ್ಲಿ 116 ರನ್ ಸಿಡಿಸಿದರು. ಅವರು ತಮ್ಮ ಇನ್ನಿಂಗ್ಸ್ ನಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ ಸೇರಿವೆ. ಇದಕ್ಕೂ ಮುನ್ನ ರಚಿನ್ ರವೀಂದ್ರ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದರು.
ಈ ಮೂಲಕ ರಚಿನ್ ರವೀಂದ್ರ ವಿಶ್ವಕಪ್ ನಲ್ಲಿ 2 ಶತಕ ಬಾರಿಸಿದಂತಾಗಿದೆ. ಸಚಿನ್ ತೆಂಡೂಲ್ಕರ್ ನಂತರ, ರಚಿನ್ ರವೀಂದ್ರ ಅವರು 23 ನೇ ವಯಸ್ಸಿನಲ್ಲಿ 2 ವಿಶ್ವಕಪ್ ಶತಕಗಳನ್ನು ಗಳಿಸಿದ ಎರಡನೇ ಬ್ಯಾಟ್ಸಮ್ಯಾನ್ ಆಗಿದ್ದಾರೆ. ಸದ್ಯ ಭರ್ಜರಿ ಫಾರ್ಮ್ ನಲ್ಲಿರುವ ಕಿವೀಸ್ ಯುವ ಆಟಗಾರ ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಿಸಿಕೊಂಡಿದ್ದಾರೆ.

ಅನುಭವಿ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್ ನೊಗವನ್ನು ಇವರು ಹೊತ್ತು ಕೊಂಡಂತೆ ಕಾಣುತ್ತಿದೆ. ಮಧ್ಯಮ ಕ್ರಮಾಂಕಕ್ಕೆ ನ್ಯಾಯ ಒದಗಿಸಿರುವ ರಚಿನ್ ಭಾರತದಲ್ಲಿ ಅಬ್ಬರಿಸಿದ್ದಾರೆ. ವಿಶ್ವಕಪ್ ನಲ್ಲಿ ಆಡಿದ 6 ಇನಿಂಗ್ಸ್ ಗಳಲ್ಲಿ ರಚಿನ್ 431 ರನ್ ಕಲೆ ಹಾಕಿದ್ದು, ರನ್ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಇದಕ್ಕೂ ಮುನ್ನ ಭಾರತದ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು. ಸಚಿನ್ ತೆಂಡೂಲ್ಕರ್ 23 ನೇ ವಯಸ್ಸಿನಲ್ಲಿ 2 ವಿಶ್ವಕಪ್ ಶತಕಗಳನ್ನು ಗಳಿಸಿದ್ದರು. ಇದೀಗ ನ್ಯೂಜಿಲೆಂಡ್ ನ ರಚಿನ್ ರವೀಂದ್ರ ಅವರು ಮಾಸ್ಟರ್ ಬ್ಲಾಸ್ಟರ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ, ರಚಿನ್ ರವೀಂದ್ರ 89 ಎಸೆತಗಳಲ್ಲಿ 116 ರನ್ ಗಳಿಸಿ ಔಟ್ ಆದರು. ರಚಿನ್ ರವೀಂದ್ರ ಅವರನ್ನು ಆಸ್ಟ್ರೇಲಿಯದ ನಾಯಕ ಪ್ಯಾಟ್ ಕಮಿನ್ಸ್ ಖೆಡ್ಡಾ ತೋಡಿದರು. ಇದಕ್ಕೂ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಮಾಡಲು ನಿರ್ಧರಿಸಿತು.
ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 49.2 ಓವರ್ ಗಳಲ್ಲಿ 388 ರನ್ ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಪರ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 67 ಎಸೆತಗಳಲ್ಲಿ 109 ರನ್ ಗಳಿಸಿದರು. ಡೇವಿಡ್ ವಾರ್ನರ್ 65 ಎಸೆತಗಳಲ್ಲಿ 81 ರನ್ ಗಳಿಸಿದರು. ಡೇವಿಡ್ ವಾರ್ನರ್ ಮತ್ತು ಟ್ರಾವಿಸ್ ಹೆಡ್ ನಡುವೆ 19.1 ಓವರ್ಗಳಲ್ಲಿ 175 ರನ್ ಗಳ ಜೊತೆಯಾಟ ಮೂಡಿಬಂದಿತು.
ಇವರಿಬ್ಬರನ್ನು ಹೊರತುಪಡಿಸಿದರೆ ಇತರ ಕಾಂಗರೂ ಬ್ಯಾಟ್ಸಮ್ಯಾನ್ ಗಳು ಐವತ್ತು ರನ್ ಗಳ ಗಡಿ ಮುಟ್ಟಲು ಸಾಧ್ಯವಾಗಲಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ ಕೊನೆಯ ಓವರ್ ಗಳಲ್ಲಿ 24 ಎಸೆತಗಳಲ್ಲಿ 41 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ಅತ್ಯಂತ ರೋಮಂಚನಕಾರಿಯಾಗಿ ಸಾಗಿದ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಪಂದ್ಯದಲ್ಲಿ ಕಿವೀಸ್ ಐದು ರನ್ ಗಳ ಸೋಲುಂಡಿದೆ.