
ಈಸ್ಟ್ ಲಂಡನ್, ಫೆಬ್ರವರಿ 13: ಲುಂಗಿ ಎನ್‌ಗಿಡಿ, ಆ್ಯಂಡಿಲೆ ಫೆಹ್ಲುಕ್ವಾಯೊ, ಬ್ಯೂರನ್ ಹೆಂಡ್ರಿಕ್ಸ್, ಡೇಲ್ ಸ್ಟೇನ್ ಮಾರಕ ಬೌಲಿಂಗ್ ದಾಳಿಯಿಂದ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 1 ರನ್ ರೋಚಕ ಜಯ ಗಳಿಸಿದೆ.
ಇಂಗ್ಲೆಂಡ್‌ನ ಈಸ್ಟ್ ಲಂಡನ್‌ನಲ್ಲಿನ ಬಫೆಲೋ ಪಾರ್ಕ್ ಸ್ಟೇಡಿಯಂನಲ್ಲಿ ಬುಧವಾರ (ಫೆಬ್ರವರಿ 12) ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಇನ್ನಿಂಗ್ಸ್‌ನ ಕೊನೇ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ವೇಗಿ ಲುಂಗಿ ಒಟ್ಟಿಗೆ 3 ವಿಕೆಟ್ ಉರುಳಿಸಿ (1 ರನ್‌ಔಟ್ ಕೂಡ ಸೇರಿ) ಪಂದ್ಯವನ್ನು ಗೆಲ್ಲಿಸಿಕೊಟ್ಟರು. ಅಂತಿಮ ಓವರ್‌ನಲ್ಲಿ ಎನ್‌ಗಿಡಿ ಅವರು ಟಾಮ್ ಕರಣ್, ಮೊಯೀನ್ ಅಲಿ ಪಡೆದರೆ, ಆದಿಲ್ ರಶೀದ್ ರನ್ ಔಟ್ ಆದರು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ, ತೆಂಬ ಬವುಮಾ 43, ನಾಯಕ ಕ್ವಿಂಟನ್ ಡಿ ಕಾಕ್ 31, ರಾಸ್ಸಿ ವ್ಯಾನ್ ಡೆರ್ ಡುಸೆನ್ 31, ಡೇವಿಡ್ ಮಿಲ್ಲರ್ 16, ಜೆಜೆ ಸ್ಮಟ್ಸ್ 20, ಆ್ಯಂಡಿಲೆ ಫೆಹ್ಲುಕ್ವಾಯೊ 18 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 8 ವಿಕೆಟ್ ನಷ್ಟದಲ್ಲಿ 177 ರನ್ ಮಾಡಿತ್ತು.
ಗುರಿ ಬೆನ್ನತ್ತಿದ ಇಂಗ್ಲೆಂಡ್ ಜೇಸನ್ ರಾಯ್ 70, ಜೋಸ್ ಬಟ್ಲರ್ 15, ಜಾನಿ ಬೇರ್ಸ್ಟೋವ್ 23, ಇಯಾನ್ ಮಾರ್ಗನ್ 52 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 176 ರನ್ ಪೇರಿಸಿ ಕೇವಲ 1 ರನ್‌ನಿಂದ ಶರಣಾಯಿತು. ಲುಂಗಿ ಎನ್‌ಗಿಡಿ ಎಸೆದ ಅಂತಿಮ ಓವರ್‌ನಲ್ಲಿ ಒಟ್ಟು 3 ವಿಕೆಟ್ ಕಳೆದುಕೊಂಡಿದ್ದು, ಇಂಗ್ಲೆಂಡ್ ಪಾಲಿಗೆ ಸೋಲನ್ನು ಬರೆಯಿತು.
ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಲುಂಗಿ ಎನ್‌ಗಿಡಿ 3, ಆ್ಯಂಡಿಲೆ ಫೆಹ್ಲುಕ್ವಾಯೊ 2, ಬ್ಯೂರನ್ ಹೆಂಡ್ರಿಕ್ಸ್ ಹೆಂಡ್ರಿಕ್ಸ್ 2, ಡೇಲ್ ಸ್ಟೇನ್ 1 ವಿಕೆಟ್ ಪಡೆದರು. ಲುಂಗಿ ಎನ್‌ಗಿಡಿ ಪಂದ್ಯಶ್ರೇಷ್ಠರೆನಿಸಿದರು. ಈ ಪಂದ್ಯದ ಜಯದೊಂದಿಗೆ ದಕ್ಷಿಣ ಆಫ್ರಿಕಾ ತಂಡ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0ಯ ಮುನ್ನಡೆಯಲ್ಲಿದೆ.