ಸ್ಟಾರ್ ವೇಗದ ಬೌಲರ್ ಲುಂಗಿ ಎನ್‌ಗಿಡಿ ಅವರ ಮಾರಕ ದಾಳಿಯ ನೆರವಿನಿಂದ 84 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಏರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮಣಿಸಿ, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಆರಂಭಿಕರಾದ ರಯಾನ್ ರಿಕಲ್ಟನ್ (8), ಐಡೇನ್ ಮಾರ್ಕ್ರಮ್ (0) ರನ್ ಕಲೆ ಹಾಕುವಲ್ಲಿ ವಿಫಲರಾದರು. ದಕ್ಷಿಣ ಆಫ್ರಿಕಾ 23 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಮೂರನೇ ವಿಕೆಟ್‌ಗೆ ಟೋನಿ ಡಿ ಜೋರ್ಜಿ ಹಾಗೂ ಮ್ಯಾಥ್ಯೂ ಬ್ರೀಟ್ಜಕೆ ಜೋಡಿ ಅಮೋಘ ಪ್ರದರ್ಶನ ನೀಡಿತು. ಈ ಜೋಡಿ 62 ಎಸೆತಗಳಲ್ಲಿ 67 ರನ್ ಸೇರಿಸಿತು. ಟೋನಿ ಡಿ ಜೋರ್ಜಿ 5 ಬೌಂಡರಿ ನೆರವಿನಿಂದ 38 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.

ನಾಲ್ಕನೇ ವಿಕೆಟ್‌ಗೆ ಮ್ಯಾಥ್ಯೂ ಬ್ರೀಟ್ಜಕೆ ಹಾಗೂ ಟ್ರಿಸ್ಟನ್ ಸ್ಟಬ್ಸ್ ಜೋಡಿ ಸಹ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಪರಿಣಾಮ ದಕ್ಷಿಣ ಆಫ್ರಿಕಾ ಉತ್ತಮ ಮೊತ್ತದತ್ತ ದಾಪುಗಾಲು ಇಟ್ಟಿತ್ತು. ಈ ಜೋಡಿ 90 ಎಸೆತಗಳಲ್ಲಿ 89 ರನ್ ಸೇರಿಸಿತು. ಮ್ಯಾಥ್ಯೂ ಬ್ರೀಟ್ಜಕೆ 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 88 ರನ್ ಸಿಡಿಸಿದರು.
ಭರವಸೆಯ ಬ್ಯಾಟರ್ ಟ್ರಿಸ್ಟನ್ ಸ್ಟಬ್ಸ್ 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 74 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಉಳಿದಂತೆ ವಿಯಾನ್ ಮುಲ್ದರ್ 26, ಕೇಶವ್ ಮಹಾರಾಜ್ 22 ರನ್ ಬಾರಿಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 49.1 ಓವರ್‌ಗಳಲ್ಲಿ 277 ರನ್ ಸೇರಿಸಿತು. ಆಸ್ಟ್ರೇಲಿಯಾದ ಪರ ಆಡಂ ಜಂಪಾ 3 ವಿಕೆಟ್ ಕಬಳಿಸಿದರು.
ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ (6), ಮಿಚೆಲ್ ಮಾರ್ಷ್ (18), ಮಾರ್ನಸ್ ಲಂಬುಶೇನ್ (1) ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಲ್ಕನೇ ವಿಕೆಟ್‌ಗೆ ಕ್ಯಾಮರೂನ್ ಗ್ರೀನ್ ಹಾಗೂಬ ಜೋಶ್ ಇಂಗ್ಲೀಷ ಜೋಡಿ ತಂಡಕ್ಕೆ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 79 ಎಸೆತಗಳಲ್ಲಿ 67 ರನ್ ಸೇರಿಸಿತು. ಗ್ರೀನ್ 35 ರನ್ ಬಾರಿಸಿದರೆ, ಅಲೆಕ್ಸ್ ಕ್ಯಾರಿ 13 ರನ್ ಸಿಡಿಸಿದರು. ಜೋಶ್ ಇಂಗ್ಲೀಷ್ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ 87 ರನ್ ಕಲೆ ಹಾಕಿದರು. ಅಂತಿಮವಾಗಿ ಆಸೀಸ್ 37.4 ಓವರ್‌ಗಳಲ್ಲಿ 193 ರನ್‌ಗಳಿಗೆ ಆಲೌಟ್ ಆಯಿತು.
ಲುಂಗಿ ಎನ್‌ಗಿಡಿ ಕಮಾಲ್ ಪ್ರದರ್ಶನ ನೀಡಿದರು. ಇವರು 42 ರನ್ ನೀಡಿ 5 ವಿಕೆಟ್ ಕಬಳಿಸಿದರು. ಆಸ್ಟ್ರೇಲಿಯಾ ವಿರುದ್ಧದ ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಇಬ್ಬರು ವಿದೇಶಿ ಆಟಗಾರರು ಇನ್ನಿಂಗ್ಸ್‌ನಲ್ಲಿ ತಲಾ 5 ವಿಕೆಟ್‌ಗಳನ್ನು ಪಡೆದಿರುವುದು ಇದೇ ಮೊದಲು.