ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬುಧವಾರ, ಜುಲೈ 4ರಂದು ಭಾರತ ತಂಡವನ್ನು ಪ್ರಕಟಿಸಿದೆ. ಕೆಲವು ಆಟಗಾರರನ್ನು ಕಡೆಗಣಿಸಿದ್ದಕ್ಕೆ ಭಾರತೀಯ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್ ಮತ್ತು ಜಿತೇಶ್ ಶರ್ಮಾ ಅವರಂತಹ ಯುವ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ರಾಷ್ಟ್ರೀಯ ತಂಡದಲ್ಲಿ ಸ್ಥಾನವನ್ನು ಪಡೆಯಲು ಸಾಧ್ಯವಾಗಲಿಲ್ಲ.

ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಹಂಗಾಮಿ ನಾಯಕ ನಿತೀಶ್ ರಾಣಾ ಕೂಡ ಭಾರತ ತಂಡದ ಆಯ್ಕೆಯಿಂದ ನಿರಾಶೆಗೊಂಡಿದ್ದಾರೆ. ಕಳೆದ ಋತುವಿನಲ್ಲಿ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಿದ್ದ ನಿತೀಶ್ ರಾಣಾ, ಟ್ವಿಟ್ಟರ್‌ನಲ್ಲಿ ಕ್ರಿಪ್ಟಿಕ್ ಪೋಸ್ಟ್ ಹಂಚಿಕೊಂಡಿದ್ದಾರೆ.
""ಕೆಟ್ಟ ದಿನಗಳು ಉತ್ತಮ ದಿನಗಳನ್ನು ನಿರ್ಮಿಸುತ್ತವೆ,' ಎನ್ನುವ ಬರಹವುಳ್ಳ ಪೋಸ್ಟ್ ಅನ್ನು ನಿತೀಶ್ ರಾಣಾ ಹಂಚಿಕೊಂಡಿದ್ದಾರೆ. 1 ಏಕದಿನ ಮತ್ತು 2 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ ನಿತೀಶ್ ರಾಣಾ ಅವರು ಜುಲೈ 2021ರಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಬಾರಿಗೆ ರಾಷ್ಟ್ರೀಯ ತಂಡದ ಜೆರ್ಸಿ ಧರಿಸಿದ್ದರು.
ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಪರ 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ರಿಂಕು ಸಿಂಗ್, ತಮ್ಮ ಪಂದ್ಯ ವಿಜೇತ ಆಟದಿಂದ ಎಲ್ಲರನ್ನೂ ಮೆಚ್ಚಿಸಿದ್ದರು. ಆದರೂ, 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿಲ್ಲ.
ವೆಸ್ಟ್ ಇಂಡೀಸ್ ಸರಣಿ ಮತ್ತು ಐರ್ಲೆಂಡ್ ಟಿ20 ಸರಣಿಗಳ ನಡುವೆ ಕೇವಲ ಒಂದು ವಾರದ ಅಂತರವಿದೆ. ಈ ವೇಳೆಗೆ ರುತುರಾಜ್ ಗಾಯಕ್ವಾಡ್ ಜೊತೆಗೆ ರಿಂಕು ಸಿಂಗ್ ಮತ್ತು ವಿದರ್ಭದ ಜಿತೇಶ್ ಶರ್ಮಾ ಭಾರತ ತಂಡವನ್ನು ಸೇರುವ ಸಾಧ್ಯತೆಗಳಿವೆ.
ಅನುಭವಿಗಳಾದ ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಇಬ್ಬರೂ ವಿಕೆಟ್ ಕೀಪಿಂಗ್‌ನಲ್ಲಿ ಮುಂದಿರುವ ಕಾರಣ, ಜಿತೇಶ್ ಶರ್ಮಾ ಹಿನ್ನಡೆ ಅನುಭವಿಸಿದರು. ಅವರು ಪ್ರದರ್ಶನ ನೀಡಲು ವಿಫಲರಾಗದ ಹೊರತು ಯಾವಾಗಲೂ ಅವಕಾಶಗಳನ್ನು ಹೊಂದಿರುತ್ತಾರೆ.
ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪುನರಾಗಮನ ಮಾಡಿದ ಇಬ್ಬರು ಆಟಗಾರರೆಂದರೆ ವೇಗಿ ಅವೇಶ್ ಖಾನ್ ಮತ್ತು ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್. ಕಳೆದ ಸೆಪ್ಟೆಂಬರ್‌ನಲ್ಲಿ ಏಷ್ಯಾ ಕಪ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡಕ್ಕಾಗಿ ಆಡಿದ್ದ ರವಿ ಬಿಷ್ಣೋಯ್ ಈ ಋತುವಿನಲ್ಲಿ ಗುಜರಾತ್ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಭಾರತ ತಂಡವು ಮೂವರು ಮಣಿಕಟ್ಟಿನ ಸ್ಪಿನ್ನರ್‌ಗಳನ್ನು ಹೊಂದಿದೆ. ರವಿ ಬಿಷ್ಣೋಯ್, ಕುಲದೀಪ್ ಯಾದವ್ ಮತ್ತು ಯುಜ್ವೇಂದ್ರ ಚಹಾಲ್ ಸಹ 15 ಸದಸ್ಯರ ತಂಡದ ಭಾಗವಾಗಿದ್ದಾರೆ.
ಆಲ್‌ರೌಂಡರ್ ರವೀಂದ್ರ ಜಡೇಜಾಗೆ ಹೋಲಿಸಿದರೆ ಪ್ರಸ್ತುತ ಫಾರ್ಮ್‌ನಲ್ಲಿ ಉತ್ತಮ ಟಿ20 ಆಟಗಾರನಾಗಿರುವ ಅಕ್ಷರ್ ಪಟೇಲ್ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಗಿಂತ ಭಿನ್ನವಾಗಿ, ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ಅನುಪಸ್ಥಿತಿಯಲ್ಲಿ ವೇಗದ ಬೌಲಿಂಗ್ ವಿಭಾಗವನ್ನು ಅರ್ಶ್‌ದೀಪ್ ಸಿಂಗ್, ಅವೇಶ್ ಖಾನ್ ಮತ್ತು ಉಮ್ರಾನ್ ಮಲಿಕ್ ನಿಭಾಯಿಸಲಿದ್ದಾರೆ. ಸದ್ಯ ಅವೇಶ್ ಖಾನ್ ಅವರು ದುಲೀಪ್ ಟ್ರೋಫಿಯಲ್ಲಿ ಕೇಂದ್ರ ವಲಯ ತಂಡದ ಪರ ಆಡುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಮುಖೇಶ್ ಕುಮಾರ್.