ಲೀಗ್ ಹಂತದಲ್ಲಿ ಮಳೆಯ ಅಡ್ಡಿಯ ಮಧ್ಯೆಯೂ ಭಾರತ ಸೂಪರ್ 4 ಹಂತಕ್ಕೆ ಲಗ್ಗೆಯಿಟ್ಟಿದ್ದು ಮೊದಲ ಪಂದ್ಯಕ್ಕಾಗಿ ಸಜ್ಜಾಗಿದೆ. ಸೂಪರ್ 4 ಹಂತದಲ್ಲಿ ಭಾರತ ಮತ್ತೊಮ್ಮೆ ಪಾಕಿಸ್ತಾನವನ್ನು ಎದುರಿಸಲಿದ್ದು ಕ್ರಿಕೆಟ್ ಅಭಿಮಾನಿಗಳ ಚಿತ್ತ ಮತ್ತೊಮ್ಮೆ ಭಾರತ vs ಪಾಕ್ ಪಂದ್ಯದತ್ತ ನೆಟ್ಟಿದೆ. ಟೀಮ್ ಇಂಡಿಯಾ ಈ ಮೆಗಾ ಪಂದ್ಯಕ್ಕೆ ಸರ್ವರೀತಿಯಲ್ಲಿಯೂ ಸಜ್ಜಾಗಿದೆ. ಆದರೆ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್‌ಗೆ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.
ಅಂದಹಾಗೆ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್‌ಗೆ ಈಗ ಎದುರಾಗಿರುವ ಸವಾಲು ಸಕಾರಾತ್ಮಕ ಸವಾಲು ಎನ್ನುವುದು ಸಮಾಧಾನಕರ. ಇಬ್ಬರು ಬಲಿಷ್ಠ ಆಟಗಾರರು ಒಂದು ಸ್ಥಾನಕ್ಕೆ ತೀವ್ರಪೈಪೋಟಿ ನಡೆಸುತ್ತಿದ್ದು ಯಾರಿಗೆ ಅವಕಾಶ ನೀಡಬೇಕು ಎನ್ನುವುದು ಈಗ ಬಹುದೊಡ್ಡ ಪ್ರಶ್ನೆಯಾಗಿದೆ. ಹಾಗಾದರೆ ಇದಕ್ಕೆ ಕಾರಣವಾದ ಆ ಇಬ್ಬರು ಆಟಗಾರರು ಯಾರು? ಮುಂದೆ ಓದಿ..

ಏಷ್ಯಾಕಪ್ ಟೂರ್ನಿಯ ಲೀಗ್ ಹಂತದ ಎರಡು ಪಂದ್ಯಗಳಿಗೆ ಗಾಯದ ಕಾರಣದಿಂದಾಗಿ ಅಲಭ್ಯವಾಗಿದ್ದ ಕೆಎಲ್ ರಾಹುಲ್ ಚೇತರಿಕೆ ಕಂಡು ತಂಡಕ್ಕೆ ಮರಳಿದ್ದಾರೆ. ಈಗಾಗಲೇ ಶ್ರೀಲಂಕಾದಲ್ಲಿ ತಂಡವನ್ನು ಕೂಡ ಅವರು ಸೇರಿಕೊಂಡಿದ್ದಾರೆ. ಆದರೆ ಏಷ್ಯಾಕಪ್ ಟೂರ್ನಿಯಲ್ಲಿ ಕೆಎಲ್ ರಾಹುಲ್ ನೇರವಾಗಿ ಆಡುವ ಬಳಗದಲ್ಲಿ ಸೇರಿಕೊಳ್ಳುವಂತಾ ವಾತಾವರಣವಿಲ್ಲ. ಯಾಕೆಂದರೆ ರಾಹುಲ್ ಆಡುವ ಐದನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಅದ್ಭುತವಾಗಿ ಆಡುತ್ತಿದ್ದು ಸತತವಾಗಿ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಯುವ ಆಟಗಾರ ಇಶಾನ್ ಕಿಶನ್ ಏಕದಿನ ಮಾದರಿಯಲ್ಲಿ ನೀಡುತ್ತಿರುವ ಅದ್ಭುತವಾದ ಪ್ರದರ್ಶನ ಎಲ್ಲರ ಗಮನಸೆಳೆದಿದೆ. ಕಳೆದ ನಾಲ್ಕು ಪಂದ್ಯಗಳಲ್ಲಿ ಇಶಾನ್ ಕಿಶನ್ 50+ ರನ್ ಬಾರಿಸಿರುವುದು ಅವರ ಅದ್ಭುತ ಫಾರ್ಮ್‌ಗೆ ಸಾಕ್ಷಿ. ಅಲ್ಲದೆ ಗ್ರೂಪ್ ಹಂತದಲಲ್ಇ ಪಾಕಿಸ್ತಾನದ ವಿರುದ್ಧವೇ ತಂಡ ಸಂಕಷ್ಟದಲ್ಲಿದ್ದಾಗ ಇಶಾನ್ ತೋರಿದ ಪ್ರಬುದ್ಧ ಆಟ ತಂಡಕ್ಕೆ ದೊಡ್ಡ ಬಲ ತುಂಬಿತ್ತು. ಹೀಗಾಗಿ ಇಶಾನ್ ಕಿಶನ್ ಅವರನ್ನು ಇಂಥಾ ಸಂದರ್ಭದಲ್ಲಿ ತಂಡದಿಂದ ಹೊರಗಿಡುವುದು ಅಸಾಧ್ಯ ಎನ್ನುವ ವಾತಾವರಣ ಸೃಷ್ಟಿಯಾಗಿದೆ.
ಇಂಥಾ ಸಂದರ್ಭದಲ್ಲಿ ಕೆಎಲ್ ರಾಹಲ್‌ಗೆ ಎಲ್ಲಿ ಸ್ಥಾನ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ರಾಹುಲ್ ಅವರಂಥಾ ಆಟಗಾರನನ್ನು ಹೊರಗಿಡುವುದು ಕೂಡ ಸುಲಭದ ಮಾತಲ್ಲ. ಹಾಗಾಗಿ ಇಶಾನ್ ಕಿಶನ್ vs ಕೆಎಲ್ ರಾಹುಲ್ ಈಗ ಶ್ರೇಯಸ್ ಐಯ್ಯರ್ vs ಕೆಎಲ್ ರಾಹುಲ್ ಎನ್ನುವ ಹಂತಕ್ಕೆ ಬಂದರೂ ಅಚ್ಚರಿಯಿಲ್ಲ. ಅಂದರೆ ಐದನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಮುಂದುವರಿದು ನಾಲ್ಕನೇ ಕ್ರಮಾಂಕದಲ್ಲಿ ರಾಹುಲ್‌ಗೆ ಸ್ಥಾನ ನೀಡಬಹುದಾ ಎನ್ನುವ ಚಿಂತನೆಯೂ ತಂಡದಲ್ಲಿ ನಡೆಯುತ್ತಿದೆ.
ಇನ್ನು ಕೆಎಲ್ ರಾಹುಲ್ ಕಮ್‌ಬ್ಯಾಕ್ ಮಾಡಲು ಸಜ್ಜಾಗಿದ್ದಾರೆ. ಆದರೆ ಈಗಾಗಲೇ ಹೇಳಿದಂತೆ ನೇರವಾಗಿ ತಂಡದಲ್ಲಿ ಸ್ಥಾನ ದೊರೆಯುವಂತಾ ಸ್ಥಿತಿ ಇಲ್ಲ. ಇಶಾನ್ ಕಿಶನ್ ಅವರನ್ನು ಹೊರಗಿಡುವುದು ಅಸಾಧ್ಯ. ಸುದೀರ್ಘ ಕಾಲದ ಬಳಿಕ ಕಮ್‌ಬ್ಯಾಕ್ ಮಾಡಿರುವ ಶ್ರೇಯಸ್ ಐಯ್ಯರ್ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಆಡಿದ್ದಾರೆ. ಅವರಿಗೂ ಆಟದ ಸಮಯ ನೀಡುವುದು ಮ್ಯಾನೇಜ್‌ಮೆಂಟ್‌ನ ಜವಾಬ್ಧಾರಿ. ಇನ್ನು ಕೆಎಲ್ ರಾಹುಲ್ ಸುದೀರ್ಘ ಸಮಯದ ಬಳಿಕ ಕಮ್‌ಬ್ಯಾಕ್ ಮಾಡಿತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಪಾಕಿಸ್ತಾನದಂತಾ ಎದುರಾಳಿ ಮುಂದಿರುವಾಗ ರಾಹುಲ್‌ಗೆ ನೇರವಾಗಿ ಪಂದ್ಯದಲ್ಲಿ ಅವಕಾಶ ನೀಡದೆ ಒಂದೆರಡು ಪಂದ್ಯಗಳ ಬಳಿಕ ಆಡುವ ಬಳಗದಲ್ಲಿ ಅವಕಾಶ ನೀಡಿದರೂ ಅಚ್ಚರಿಯಿಲ್ಲ.