
ನವದೆಹಲಿ: ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್‌ಗೆ ಈಗ 41ರ ಹರೆಯ. ಆದರೆ ಯೂನಿವರ್ಸಲ್ ಬಾಸ್ ಗೇಲ್ ಇನ್ನೂ ನಿವೃತ್ತಿ ಯೋಚನೆಯಲ್ಲಿಲ್ಲ. ಬರೀ 2021ರ ವಿಶ್ವಕಪ್ ಅಷ್ಟೇ ಅಲ್ಲ. 2022ರ ವಿಶ್ವಕಪ್‌ನಲ್ಲೂ ಆಡುವ ಆಸೆ ಇದೆ ಎಂದು ಗೇಲ್ ಹೇಳಿಕೊಂಡಿದ್ದಾರೆ.
ದುಬೈಯ ಕೊಕಾ ಕೋಲಾ ಅರೆನಾದಲ್ಲಿ ನಡೆದ ಅಲ್ಟಿಮೇಟ್ ಕ್ರಿಕೆಟ್ ಚಾಲೆಂಜ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಕ್ರಿಸ್ ಗೇಲ್ ಎಎನ್‌ಎ ಜೊತೆ ಮಾತನಾಡಿ, ತನಗೆ ಸದ್ಯಕ್ಕೆ ನಿವೃತ್ತಿಯ ಯೋಚನೆಯಿಲ್ಲ. ತಾನು ಇನ್ನೂ ಸುಮಾರು 5 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇರಬಯಸಿದ್ದೇನೆ ಎಂದಿದ್ದಾರೆ.
'ಹೌದು, ಖಂಡಿತಾ. ಸದ್ಯಕ್ಕಂತೂ ನಿವೃತ್ತಿಯ ಯೋಚನೆಯಿಲ್ಲ. ಇದೇ ಯೋಚನೆ ಮುಂದಿನ ಐದು ವರ್ಷಗಳವರೆಗೂ ಇರಲಿದೆ. ಅಂತೂ 45ರ ಒಳಗಂತೂ ನಿವೃತ್ತಿ ನೀಡಲಾರೆ. ಹೌದು ನಾನು ಇನ್ನೆರಡು ವಿಶ್ವಕಪ್‌ಗಳನ್ನು ಆಡಲಿದ್ದೇನೆ,' ಎಂದಿದ್ದಾರೆ.
103 ಟೆಸ್ಟ್ ಪಂದ್ಯಗಳನ್ನಾಡಿರುವ ಗೇಲ್ 42.19ರ ಸರಾಸರಿಯಲ್ಲಿ 7215 ರನ್ ಗಳಿಸಿದ್ದಾರೆ, 300 ಏಕದಿನ ಪಂದ್ಯಗಳಲ್ಲಿ 10480 ರನ್, 58 ಟಿ20ಐ ಪಂದ್ಯಗಳಲ್ಲಿ 1627 ರನ್, 132 ಐಪಿಎಲ್ ಪಂದ್ಯಗಳಲ್ಲಿ 4772 ರನ್ ಗಳಿಸಿದ್ದಾರೆ. ಇಂದಿಗೂ ಕೂಡ ಕ್ರಿಸ್ ಗೇಲ್ ಹೆಸರಿನಲ್ಲಿ ಅನೇಕ ದಾಖಲೆಗಳು ಉಳಿದುಕೊಂಡಿದೆ.