ಭಾರತದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್‌ಗೆ ದಿನಗಣನೆ ಆರಂಭವಾಗಿದ್ದು, ಭಾಗವಹಿಸುವ ಎಲ್ಲಾ ಹತ್ತು ತಂಡಗಳು ಶೀಘ್ರದಲ್ಲೇ ಭಾರತಕ್ಕೆ ಬರಲಿವೆ.
ಅಧಿಕೃತ ಪಂದ್ಯಾವಳಿ ಪ್ರಾರಂಭಕ್ಕೂ ಮುನ್ನ ಪ್ರತಿ ತಂಡವು ತಲಾ 2 ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಇದಕ್ಕಾಗಿ ತಿರುವನಂತಪುರಂ, ಹೈದರಾಬಾದ್ ಮತ್ತು ಗುವಾಹಟಿ ಮೈದಾನಗಳು ಸಿದ್ಧವಾಗಿವೆ.
ಆದರೆ, ಸೆಪ್ಟೆಂಬರ್ 29ರಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ 2023ರ ವಿಶ್ವಕಪ್ ಪಂದ್ಯಾವಳಿಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಅಭ್ಯಾಸ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳಿಗೆ ಅನುಮತಿಸಲಾಗುವುದಿಲ್ಲ. ಹೀಗಾಗಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ.

ಹೈದರಾಬಾದ್ ನಗರದಲ್ಲಿ ಹೈ-ವೋಲ್ಟೇಜ್ ಅಭ್ಯಾಸ ಪಂದ್ಯಕ್ಕೆ ಒಂದು ದಿನ ಮುನ್ನ ಗಣೇಶ ವಿಸರ್ಜನೆ ಮತ್ತು ಮಿಲಾದ್-ಉನ್-ನಬಿ ಒಂದೇ ದಿನ ನಡೆಯುವುದರಿಂದ ಭದ್ರತಾ ಕಾರಣಗಳಿಗಾಗಿ ಈ ಅಭ್ಯಾಸ ಪಂದ್ಯವನ್ನು ಪ್ರೇಕ್ಷಕ ರಹಿತವಾಗಿ ಆಡಲಾಗುತ್ತದೆ.
ಕ್ರಿಕೆಟ್ ಅಭಿಮಾನಿಗಳು ನಿರಾಶೆಗೊಂಡರೂ, ನಾಗರಿಕರ ಸುರಕ್ಷತೆ ಮತ್ತು ಶಾಂತಿ ಸುವ್ಯವಸ್ಥೆ ನಿರ್ವಹಣೆಯನ್ನು ಪರಿಗಣಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಮೂಲಗಳು ಸೂಚಿಸಿವೆ.
"ಈಗಾಗಲೇ ಚರ್ಚೆ ನಡೆದಿದ್ದು, ದುರದೃಷ್ಟವಶಾತ್, ಸೆಪ್ಟೆಂಬರ್ 28ರಂದು ಬರುವ ಗಣೇಶ ವಿಸರ್ಜನೆ ಮತ್ತು ಮಿಲಾದ್-ಉನ್-ನಬಿ ಮೆರವಣಿಗೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕಿದೆ," ಎಂದು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ)ಯ ಉನ್ನತ ಮೂಲಗಳು ತಿಳಿಸಿದೆ.

ಅಭ್ಯಾಸ ಪಂದ್ಯವು ಪ್ರೇಕ್ಷಕರಿಂದ ತುಂಬಿಲ್ಲದಿದ್ದರೂ, ತಂಡಗಳು ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ. ವಿಶ್ವಕಪ್ ಪಂದ್ಯಗಳನ್ನು ಸುಗಮವಾಗಿ ನಡೆಸಲು ನೀಲನಕ್ಷೆ ಜಾರಿಯಲ್ಲಿದೆ ಎಂದು ಹೇಳಲಾಗಿದೆ.
ನಾವು ಬಿಸಿಸಿಐ ಜೊತೆ ಸಂಪರ್ಕದಲ್ಲಿದ್ದು, ವಿಶ್ವಕಪ್ ಪಂದ್ಯಗಳನ್ನು ನಡೆಸುವ ವಿಶ್ವಾಸವಿದೆ. ಕ್ರೀಡಾಂಗಣ ಮತ್ತು ಪಂದ್ಯಗಳನ್ನು ನಿರ್ವಹಿಸಲು ಬೇಕಾದ ಎಲ್ಲವನ್ನೂ ಒಳಗೊಂಡಿದೆ ಎಂದು ಎಚ್‌ಸಿಎ ಹೇಳಿದೆ.
"ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಅತ್ಯುತ್ತಮವಾದದ್ದನ್ನು ನೀಡುತ್ತದೆ ಮತ್ತು ಸಾರ್ವಜನಿಕರು ಪಂದ್ಯಗಳನ್ನು ಆನಂದಿಸುತ್ತಾರೆ ಎಂದು ನಾವು ಖಚಿತಪಡಿಸುತ್ತೇವೆ, ವಿಶ್ವಕಪ್ ಸಿದ್ಧತೆಗಳಿಗೆ ಸಂಬಂಧಿಸಿದಂತೆ, ನಾವು ಸಜ್ಜಾಗಿದ್ದೇ," ಎಂದಿದೆ.

ಅಕ್ಟೋಬರ್ ಮೊದಲ ವಾರದಲ್ಲಿ ಹೈದರಾಬಾದ್ ನಗರವು ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಿ ಅಭಿಮಾನಿಗಳಿಂದ ಸಡಗರದಿಂದ ತುಂಬಿರುತ್ತದೆ. ಅಕ್ಟೋಬರ್ 9 ಮತ್ತು 10ರಂದು ಸತತ ಎರಡು ದಿನ ಹೊನಲು ಬೆಳಕಿನ ಪಂದ್ಯಗಳೊಂದಿಗೆ ಕ್ರೀಡಾಂಗಣವು ತೀವ್ರವಾದ ಚಟುವಟಿಕೆಗೆ ಸಾಕ್ಷಿಯಾಗಲಿದೆ.
"ಭದ್ರತಾ ದೃಷ್ಟಿಕೋನದಿಂದ, ಯಾವುದೇ ರಾಜಿ ಇರುವುದಿಲ್ಲ. ನಾವು ಈಗಾಗಲೇ ವಿವರಗಳನ್ನು ಪರಿಶೀಲಿಸಿದ್ದೇವೆ ಮತ್ತು ವೇಳಾಪಟ್ಟಿಯ ಪ್ರಕಾರ ಪಂದ್ಯಗಳು ನಡೆಯಲಿವೆ," ಎಂದು ಬಿಸಿಸಿಐ ಮೂಲಗಳು ಖಚಿತಪಡಿಸಿವೆ.
ಸೆಪ್ಟೆಂಬರ್ 29ರಂದು ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದ್ದರೆ, ಅದೇ ದಿನ ಬಾಂಗ್ಲಾದೇಶ ಮತ್ತು ಶ್ರೀಲಂಕಾ ತಂಡಗಳು ಗುವಾಹಟಿಯಲ್ಲಿ ಸೆಣಸಾಡಲಿವೆ. ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತಿರುವನಂತಪುರಂನಲ್ಲಿ ಮುಖಾಮುಖಿಯಾಗಲಿವೆ.