
ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ಅಭಿಮಾನಿ ನಿಧನರಾಗಿದ್ದಾರೆ. ಈ ಬಗ್ಗೆ ಸ್ವತಃ ಡೇವಿಡ್ ಮಿಲ್ಲರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದೇ ಇದ್ದರು, ಅಭಿಮಾನಿ ಜೊತೆಗಿನ ವಿಡಿಯೋವನ್ನು ಹಂಚಿಕೊಂಡಿದ್ದು, RIP ಮೈ ರಾಕ್‌ಸ್ಟಾರ್ ಎಂದು ಬರೆದುಕೊಂಡಿದ್ದಾರೆ.
ಭಾನುವಾರದಂದು ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಪಂದ್ಯಕ್ಕೆ ಮುಂಚಿತವಾಗಿ, ಡೇವಿಡ್ ಮಿಲ್ಲರ್ ತಮ್ಮ ಪುಟ್ಟ ರಾಕ್‌ಸ್ಟಾರ್‌ಗೆ ವಿದಾಯ ಕೋರುವ ಭಾವನಾತ್ಮಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅನೇಕ ವರದಿಗಳು ಬಾಲಕಿಯನ್ನು ಡೇವಿಡ್ ಮಿಲ್ಲರ್ ಮಗಳು ಎಂದು ವರದಿ ಮಾಡಿದ್ದವು.
ಆದರೆ, ಇತ್ತೀಚಿನ ವರದಿಗಳ ಪ್ರಕಾರ ಮೃತಪಟ್ಟಿರುವುದು ಡೇವಿಡ್ ಮಿಲ್ಲರ್ ಪುತ್ರಿಯಲ್ಲ, ಬದಲಾಗಿ ಆಕೆ, ಮಿಲ್ಲರ್ ದೊಡ್ಡ ಅಭಿಮಾನಿಗಳಲ್ಲಿ ಒಬ್ಬಳು ಮತ್ತು ಮಿಲ್ಲರ್ ಜೊತೆ ಅವಿನಾಭಾವ ಒಡನಾಟ ಹೊಂದಿದ್ದಳು ಎಂದು ಹೇಳಲಾಗಿದೆ.
ವೀಡಿಯೊದಲ್ಲಿರುವ ಮಗು ಮಿಲ್ಲರ್ ಅವರ ಸ್ವಂತ ಮಗಳು ಎಂದು ಹಲವಾರು ಮಾಧ್ಯಮ ವರದಿಗಳು ಹೇಳಿವೆ. ಇದಕ್ಕೆ ತದ್ವಿರುದ್ಧವಾಗಿ, ದಕ್ಷಿಣ ಆಫ್ರಿಕಾದ ಬ್ಯಾಟ್‌ನೊಂದಿಗೆ ನಿಕಟ ಸಂಬಂಧ ಹೊಂದಿರುವ ಅಭಿಮಾನಿ ಎಂದು ವರದಿಗಳು ಸೂಚಿಸುತ್ತವೆ. ಆದರೆ ಈ ಬಗ್ಗೆ ಡೇವಿಡ್ ಮಿಲ್ಲರ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ. ಡೇವಿಡ್ ಮಿಲ್ಲರ್ ಮೃತ ಬಾಲಕಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡದೇ ಇದ್ದುದ್ದರಿಂದ ಅವರನ್ನು ಮಗಳು ಎಂದೇ ಭಾವಿಸಲಾಗಿತ್ತು.
ಇನ್‌ಸ್ಟಾಗ್ರಾಮ್‌ನಲ್ಲಿ ಡೇವಿಡ್ ಮಿಲ್ಲರ್ ಪೋಸ್ಟ್
ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ, ಮಿಲ್ಲರ್ ಬಾಲಕಿಯೊಂದಿಗಿನ ವೀಡಿಯೊವನ್ನು ಹಂಚಿಕೊಂಡಿದ್ದಾರೆ, "ನನ್ನ ಪುಟ್ಟ ರಾಕ್‌ಸ್ಟಾರ್ RIP. ನಿನ್ನನ್ನು ಯಾವಾಗಲೂ ಪ್ರೀತಿಸುತ್ತೇನೆ." ಎಂದು ಶೀರ್ಷಿಕೆ ನೀಡಿದ್ದಾರೆ.
ವಿಡಿಯೋದಲ್ಲಿರುವ ಬಾಲಕಿ ಕ್ಯಾನ್ಸರ್ ನಿಂದ ಪೀಡಿತಳಾಗಿದ್ದಳು, ಹಲವು ವರ್ಷಗಳ ಹೋರಾಟದ ನಂತರ ಇಹಲೋಕ ತ್ಯಜಿಸಿದ್ದಾಳೆ. ಮಿಲ್ಲರ್, ಪ್ರತ್ಯೇಕ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ, ಬಾಲಕಿ ಜೊತೆಗಿನ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಪುಟ್ಟ ಬಾಲಕಿ ಕ್ಯಾನ್ಸರ್ ಜೊತೆ ಹೋರಾಡಿದ ಹಲವು ಫೋಟೊಗಳನ್ನು ಅದರಲ್ಲಿ ನೋಡಬಹುದಾಗಿದೆ.

"ನಿನ್ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ! ನಾನು ತಿಳಿದಿರುವ ಹೃದಯ ನಿನ್ನದು. ನೀನು ಸಾಕಷ್ಟು ಹೋರಾಟವನ್ನು ಮಾಡಿದೆ. ನಂಬಲಾಗದಷ್ಟು ಧನಾತ್ಮಕ ನಗು ನಿನ್ನ ಮುಖದಲ್ಲಿ ಇರುತ್ತಿತ್ತು" ಎಂದು ಬಾಲಕಿ ಬರೆದುಕೊಂಡಿದ್ದಾರೆ.
"ನಿನ್ನ ಪ್ರಯಾಣದಲ್ಲಿ ನೀನು ಪ್ರತಿಯೊಬ್ಬ ವ್ಯಕ್ತಿಯನ್ನು ಮತ್ತು ಪ್ರತಿ ಸವಾಲನ್ನು ಸ್ವೀಕರಿಸಿದ್ದೀಯಾ. ಜೀವನದಲ್ಲಿ ಪ್ರತಿಯೊಂದು ಕ್ಷಣವನ್ನು ಪಾಲಿಸುವುದರ ಬಗ್ಗೆ ನೀನು ನನಗೆ ತುಂಬಾ ಕಲಿಸಿದ್ದೀಯಾ!" ಎಂದು ಡೇವಿಡ್ ಮಿಲ್ಲರ್ ಅಭಿಮಾನಿ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.
"ನಿನ್ನ ಜೊತೆಯಲ್ಲಿ ಬದುಕಿನಲ್ಲಿ ಪ್ರಯಾಣ ಮಾಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತಿದೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ!" ಎಂದು ಮಿಲ್ಲರ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಭಾರತದ ವಿರುದ್ಧದ ಸರಣಿಯಲ್ಲಿರುವ ಮಿಲ್ಲರ್
ಡೇವಿಡ್ ಮಿಲ್ಲರ್ ಸದ್ಯ ಭಾರತದ ಪ್ರವಾಸದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಬ್ಯಾಟರ್ ಆಗಿರುವ ಮಿಲ್ಲರ್, ರಾಂಚಿಯಲ್ಲಿ ಎರಡನೇ ಏಕದಿನ ಪಂದ್ಯವನ್ನಾಡಲು ಸಜ್ಜಾಗುತ್ತಿದ್ದಾರೆ.
ಇತ್ತೀಚೆಗೆ ತಾನೆ, ಡೇವಿಡ್ ಮಿಲ್ಲರ್ ಭಾರತದ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿದ್ದರು. ಮೊದಲನೇ ಏಕದಿನ ಪಂದ್ಯದಲ್ಲಿ ಕೂಡ ಅತ್ಯುತ್ತಮ ಆಟವಾಡಿದ್ದ ಅವರು ಅರ್ಧಶತಕ ಗಳಿಸಿದ್ದರು.